Advertisement

ಕುಂದಾಪುರ ಸಂತೆ ಮಾರುಕಟ್ಟೆ ಇನ್ನೂ ನಡೆದಿಲ್ಲ ಪ್ಲಾಸ್ಟಿಕ್‌ ನಿಷೇಧ!

11:19 PM Feb 23, 2020 | Sriram |

ಕುಂದಾಪುರ ಪುರಸಭೆ ಎಲ್ಲ ಅಂಗಡಿಗಳು, ಹೊಟೇಲ್‌ಗ‌ಳಿಗೆ ತೆರಳಿ ಈ ಕುರಿತು ಜಾಗೃತಿ ಮೂಡಿಸಿದ್ದು ಅಲ್ಲೆಲ್ಲ ಪ್ಲಾಸ್ಟಿಕ್‌ ಕೈ ಚೀಲ ದೊರೆಯುವುದಿಲ್ಲ, ಪಾರ್ಸೆಲ್‌ ನೀಡಲಾಗುವುದಿಲ್ಲ ಇತ್ಯಾದಿ ಫ‌ಲಕಗಳು, ಭಿತ್ತಿಚಿತ್ರಗಳನ್ನು ಅಳವಡಿಸಿದ್ದರೂ ಪ್ಲಾಸ್ಟಿಕ್‌ ಬಳಕೆ ಎಗ್ಗಿಲ್ಲದೆ ಸಾಗಿದೆ. 

Advertisement

ಕುಂದಾಪುರ: ದೇಶಾದ್ಯಂತ ಪ್ಲಾಸ್ಟಿಕ್‌ ನಿಷೇಧವಾಗಿದೆ. ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್‌ ಬಳಕೆ, ಒಮ್ಮೆಯಷ್ಟೇ ಬಳಸಬಹುದಾದ ಪ್ಲಾಸ್ಟಿಕ್‌ನ ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ಆದರೆ ಇಲ್ಲಿನ ಸಂತೆಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ನಿಷೇಧವೇ ಆಗಿಲ್ಲ.

ದೊಡ್ಡ ಸಂತೆ
ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿರುವ ಸಂತೆ ಉಡುಪಿ ಜಿಲ್ಲೆಯ ಸಂತೆಗಳ ಪೈಕಿ ದೊಡ್ಡ ಸಂತೆಯಾಗಿದ್ದು, ಮಾರುಕಟ್ಟೆಯ ವಿಸ್ತೀರ್ಣ ಕೂಡ ವಿಶಾಲವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿದ್ದು ಪ್ರತಿ ಶನಿವಾರ ನಡೆಯುವ ಈ ಸಂತೆಗೆ ತಾಲೂಕಿನ ನಾನಾ ಭಾಗ ಮಾತ್ರ ಅಲ್ಲ ಇತರ ತಾಲೂಕುಗಳಿಂದಲೂ, ಹೊರ ಜಿಲ್ಲೆಗಳಿಂದಲೂ ಜನ ಆಗಮಿಸುತ್ತಾರೆ. ಕುಂದಾಪುರ ಸಂತೆ ಹೆಸರು ಕೇಳಿದಾಗ ಕುಂದಾಪುರದ ಗತ ವೈಭವ ನೆನಪಾಗುತ್ತದೆ ಎನ್ನುತ್ತಾರೆ ಹಿರಿಯರು.

ಪ್ಲಾಸ್ಟಿಕ್‌ ನಿಷೇಧ
ಪ್ಲಾಸ್ಟಿಕ್‌ ನಿಷೇಧದ ಕುರಿತು ಪುರಸಭೆ ಅಲ್ಲಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿತ್ತು. ಸಂತೆಯಲ್ಲಿ ಪ್ಲಾಸ್ಟಿಕ್‌ನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ. ಅಷ್ಟಲ್ಲದೇ ಎಲ್ಲ ಅಂಗಡಿಗಳು, ಹೊಟೇಲ್‌ಗ‌ಳಿಗೆ ತೆರಳಿ ಈ ಕುರಿತು ಜಾಗೃತಿ ಮೂಡಿಸಿದ್ದು ಅಲ್ಲೆಲ್ಲ ಪ್ಲಾಸ್ಟಿಕ್‌ ಕೈ ಚೀಲ ದೊರೆಯುವುದಿಲ್ಲ, ಪಾರ್ಸೆಲ್‌ ನೀಡಲಾಗುವುದಿಲ್ಲ ಇತ್ಯಾದಿ ಫ‌ಲಕಗಳನ್ನು ಅಳವಡಿಸ ಲಾಗಿದೆ. ಅಂತೆಯೇ ಸಂತೆಯಲ್ಲೂ ಭಿತ್ತಪತ್ರಗಳನ್ನು ಹಾಕಿದ್ದರೂ ಅವುಗಳ ಪೈಕಿ ಬಹುತೇಕ ಭಿತ್ತಿಪತ್ರಗಳನ್ನು ಹರಿದು ಹಾಕಲಾಗಿದೆ.

ನಿರಾತಂಕ
ಈಗ ಸಂತೆಯಲ್ಲಿ ಬಹುತೇಕ ವ್ಯಾಪಾರಿಗಳು ಪ್ಲಾಸ್ಟಿಕ್‌ ಚೀಲಗಳನ್ನೇ ನೀಡುತ್ತಿದ್ದಾರೆ. ಗ್ರಾಹಕರೂ ಕೈ ಚೀಲ ಮರೆತು ಬರುತ್ತಿದ್ದಾರೆ. ಇದರಿಂದಾಗಿ ವ್ಯಾಪಾರಿಗಳು ತೆಳ್ಳಗಿನ ಪ್ಲಾಸ್ಟಿಕ್‌ ಚೀಲದಲ್ಲಿಯೇ ವಸ್ತುಗಳನ್ನು ನೀಡುತ್ತಿದ್ದಾರೆ. ತರಕಾರಿ, ದಿನಸಿ ಮೊದಲಾದ ಬಹುತೇಕ ವಸ್ತುಗಳನ್ನು ಪ್ಲಾಸ್ಟಿಕ್‌ ಕೈ ಚೀಲದಲ್ಲಿ ನೀಡುವುದರ ಜತೆಗೆ ಪ್ಲಾಸ್ಟಿಕ್‌ನಲ್ಲಿ ತುಂಬಿಸಿಯೂ ಇಡಲಾಗುತ್ತದೆ. ದಪ್ಪದ ಪ್ಲಾಸ್ಟಿಕ್‌ ಬಳಕೆಗೆ ನಿಷೇಧ ಅನ್ವಯವಾಗುವುದಿಲ್ಲ. ಆದರೆ ತೆಳ್ಳಗಿನ ಪ್ಲಾಸ್ಟಿಕನ್ನೇ ಬಳಸಲಾಗುತ್ತದೆ. ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿರುವ ಸಂತೆಯಾದ ಕಾರಣ ಎಪಿಎಂಸಿ ಕೂಡಾ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಹೊಂದಿದೆ.

Advertisement

ನೊಟೀಸ್‌ ನೀಡಲಾಗಿದೆ
ಎಪಿಎಂಸಿ ಅಧಿಕಾರಿಗಳಿಗೆ ತಿಳಿವಳಿಕೆ ನೀಡಲಾಗಿದ್ದು ಸಂತೆಯಲ್ಲಿ ಉಪಯೋಗಿಸದಂತೆ ವ್ಯಾಪಾರಿಗಳಿಗೆ ಮನವರಿಕೆ ಮಾಡಲು ಸೂಚಿಸಲಾಗಿದೆ. 15 ದಿನಗಳ ಹಿಂದೆ ಅವರು ದಾಳಿ ಮಾಡಿ ಏಕಬಳಕೆಯ ಪ್ಲಾಸ್ಟಿಕನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಸುಧಾರಿಸದಿದ್ದರೆ ನಾವೇ ಸ್ವತಃ ದಾಳಿ ಮಾಡಬೇಕಾಗುತ್ತದೆ.
-ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ

ಎಗ್ಗಿಲ್ಲದೇ ಬಳಕೆ
ಸಂತೆಯಲ್ಲಿ ಒಮ್ಮೆಯಷ್ಟೇ ಬಳಸಬಹುದಾದ ಪ್ಲಾಸ್ಟಿಕನ್ನು ಎಗ್ಗಿಲ್ಲದೇ ಬಳಸಲಾಗುತ್ತಿದೆ. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್, ಎಫ್ಎಸ್‌ಎಲ್‌ ಇಂಡಿಯಾ ವತಿಯಿಂದ ಪ್ಲಾಸ್ಟಿಕ್‌ ಕುರಿತಾಗಿ ಇಷ್ಟೆಲ್ಲ ಜಾಗೃತಿಗಳನ್ನು ನಡೆಸುತ್ತಿರುವಾಗ ವ್ಯಾಪಾರಿಗಳಿಂದ ಈ ರೀತಿಯ ನಿರ್ಲಕ್ಷ್ಯ, ಅಸಡ್ಡೆ ಸರಿಯಲ್ಲ.
-ದಿನೇಶ್‌ ಸಾರಂಗ
ಎಫ್ಎಸ್‌ಎಲ್‌ ಇಂಡಿಯಾ

Advertisement

Udayavani is now on Telegram. Click here to join our channel and stay updated with the latest news.

Next