Advertisement

ಕುಂದಾಪುರ; ಹಕ್ಲಾಡಿ ಗ್ರಾ.ಪಂ.ಗೆ ನರೇಗಾ ಪ್ರಶಸ್ತಿ; ಕುಂದಾಪುರ ತಾ.ಪಂ.ಗೆ ಗೌರವ

03:11 PM Mar 17, 2023 | Team Udayavani |

ಕುಂದಾಪುರ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಗ್ರಾಮಾಂತರ ಭಾಗದ ಜನರ ಜೀವನೋಪಾಯಕ್ಕಾಗಿ ವರದಾನವಾಗಿದೆ. ಇಂತಹ ಮಹತ್ವಕಾಂಕ್ಷಿ ಯೋಜನೆ ಭರಪೂರವಾಗಿ ಬಳಸಿಕೊಂಡ ಹಕ್ಲಾಡಿ ಗ್ರಾ.ಪಂ. ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆಗೈದ ಕೀರ್ತಿಗೆ ಪಾತ್ರವಾಗಿದೆ.

Advertisement

ನರೇಗಾ ಅನುಷ್ಠಾನದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾ.ಪಂ. ಅನ್ನುವ ಪ್ರಶಸ್ತಿ ಹಕ್ಲಾಡಿ ಪಂಚಾಯತ್‌ಗೆ ಒಲಿದಿದೆ. ಕಳೆದ ಬಾರಿ ನರೇಗಾ ಅನುಷ್ಠಾನದಲ್ಲಿ ಎರಡನೇ ಸ್ಥಾನ ಪಡೆದಿದ್ದ ಹಕ್ಲಾಡಿಯು 2022-23ನೇ ಸಾಲಿನಲ್ಲಿ ಮತ್ತೂ ಒಂದು ಹೆಜ್ಜೆ ಮುಂದಡಿಯಿಟ್ಟಿದ್ದು, ಈ ಬಾರಿಯ ನರೇಗಾ ಪ್ರಶಸ್ತಿ ಪಡೆದ ರಾಜ್ಯದ 5 ಅತ್ಯುತ್ತಮ ಗ್ರಾ.ಪಂ.ಗಳಲ್ಲಿ ಹಕ್ಲಾಡಿ ಒಂದಾಗಿದೆ.

ಜಿಲ್ಲೆಯಲ್ಲಿ ಮುಂಚೂಣಿ
ಉದ್ಯೋಗ ಖಾತರಿ ಯೋಜನೆಯಡಿ ಈ ಗ್ರಾ.ಪಂ. ಉಡುಪಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡಿದ ಪಂ. ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. 2022- 23ನೇ ಸಾಲಿನಲ್ಲಿ 26 ಸಾವಿರ ಮಾನವ ದಿನ ಗಳ ಸೃಜನೆ ಮಾಡಿದ್ದು, ಕೂಲಿ, ಸಲಕರಣೆ ಸೇರಿ 96.60 ಲ.ರೂ.ಖರ್ಚು ಭರಿಸಲಾಗಿದೆ.

ಏನೆಲ್ಲ ಕಾಮಗಾರಿ
ನರೇಗಾ ಯೋಜನೆಯಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ಸಮುದಾಯ, ವೈಯಕ್ತಿಕ ಕಾಮಗಾರಿಗಳಿಗೆ ಅತೀ ಹೆಚ್ಚು ಒತ್ತು ನೀಡಲಾಗಿದೆ. ಸಮುದಾಯ ಕಾಮಗಾರಿಗಳಾದ 10 ಕೆರೆ ರಚನೆ, 1 ಕೆರೆ ಹೂಳೆತ್ತುವುದು, 3 ಆವರಣ ಗೋಡೆ, 18 ಕಡೆ ತೋಡು ಹೂಳೆತ್ತುವ ಕಾಮಗಾರಿಗಳು ನಡೆದಿವೆ. ಇದಲ್ಲದೆ ವೈಯಕ್ತಿಕವಾಗಿ 25 ಬಾವಿ ನಿರ್ಮಾಣ, 14 ಕೊಟ್ಟಿಗೆ, 10 ಮನೆ, 5 ಕೋಳಿ ಶೆಡ್‌, 3 ಗೊಬ್ಬರ ಗುಂಡಿ, ರಸ್ತೆ, ಎರೆಹುಳ ತೊಟ್ಟಿ, ಕುರಿ ಶೆಡ್‌, ಹಂದಿ ಶೆಡ್‌ಗಳನ್ನು ನಿರ್ಮಿಸಲಾಗಿದೆ.

ಸಮುದಾಯ ಕಾಮಗಾರಿಗಳಲ್ಲಿ 250ಕ್ಕೂ ಅಧಿಕ ಮಂದಿ ಮಹಿಳೆಯರು ಬದುಕು ಕಟ್ಟಿಕೊಂಡಿದ್ದಾರೆ. ಒಟ್ಟು ಶೇ. 88ರಷ್ಟು ಮಹಿಳೆಯರ ಭಾಗವಹಿಸಿದ್ದು, ಇತರೆ ಮಹಿಳಾ ಸಬಲೀಕರಣ ನಿಟ್ಟಿನಲ್ಲಿಯೂ ಇದೊಂದು ಮಾದರಿಯಾಗಿದೆ. ನಮಗೆ ರಾಜ್ಯ ಮಟ್ಟದ ನರೇಗಾ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ಜಿ.ಪಂ. ಸಿಇಒ, ತಾ.ಪಂ. ಇಒ, ಗ್ರಾ.ಪಂ. ಅಧ್ಯಕ್ಷ ಚೇತನ್‌ ಮೊಗವೀರ, ಸದಸ್ಯರು, ಸಿಬಂದಿ ವರ್ಗ, ನರೇಗಾ ಕಾರ್ಮಿಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹಕ್ಲಾಡಿ ಪಿಡಿಒ ಚಂದ್ರ ಬಿಲ್ಲವ ತಿಳಿಸಿದ್ದಾರೆ.

Advertisement

ಕುಂದಾಪುರ ತಾ.ಪಂ.ಗೆ ಗೌರವ
2022-23ನೇ ಸಾಲಿನಲ್ಲಿ ನರೇಗಾ ಯೋಜನೆ ಅನುಷ್ಠಾನದಲ್ಲಿ ಉತ್ತಮ ಆಡಳಿತ ಪಂಚಾಯತ್‌ ಪುರಸ್ಕಾರವು ಕುಂದಾಪುರ ತಾ. ಪಂ.ಗೆ ಲಭಿಸಿದೆ. ಸಾಮಾಜಿಕ ಪರಿಶೋಧನೆ, ದೂರುಗಳ ವಿಲೇವಾರಿ, ಸಕಾಲದಲ್ಲಿ ಸಿಬಂದಿಗೆ ಸಂಭಾವನೆ ಮತ್ತು ಪ್ರಯಾಣ ಭತ್ತೆ ಪಾವತಿ, 60:40 ಕೂಲಿ ಸಾಮಗ್ರಿಗಳ ಅನುಪಾತ ನಿರ್ವಹಣೆ, ಮೊಬೈಲ್‌ ಆ್ಯಪ್‌ ಇವೆಲ್ಲವನ್ನು ಮಾನದಂಡವಾಗಿರಿಸಿಕೊಂಡು ಉತ್ತಮ ಆಡಳಿತ ಪುರಸ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಕ್ಲಾಡಿ ಅಲ್ಲದೆ, ಜಲಸಂಜೀವಿನಿ ಪುರಸ್ಕಾರವು ಹೆಬ್ರಿ ತಾಲೂಕಿನ ವರಂಗ ಗ್ರಾ.ಪಂ.ಗೆ ಒಲಿದಿದೆ.

ಎಲ್ಲರಿಗೂ ಮಾದರಿ
ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ 2022-23ನೇ ಸಾಲಿ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿವಿಧ ಹಂತದ ಪ್ರಶಸ್ತಿಗಳಲ್ಲಿ ಕುಂದಾಪುರ ತಾ.ಪಂ.ಗೆ ಉತ್ತಮ ಆಡಳಿತ ಪಂಚಾಯತ್‌ ಪುರಸ್ಕಾರ ಲಭಿಸಿದೆ. ಜತೆಗೆ ಹಕ್ಲಾಡಿ ಗ್ರಾ.ಪಂ. ನರೇಗಾದಲ್ಲಿ ಉತ್ತಮ ಸಾಧನೆ ಮಾಡಿದ್ದರಿಂದ ರಾಜ್ಯ ಮಟ್ಟದ ನರೇಗಾ ಪ್ರಶಸ್ತಿ ಲಭಿಸಿದೆ. ನರೇಗಾ ಸದ್ಭಳಕೆಯಲ್ಲಿ ಎಲ್ಲರಿಗೂ ಮಾದರಿಯಾಗಿದೆ. ಹಕ್ಲಾಡಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ.
-ಮಹೇಶ್‌ ಕುಮಾರ್‌ ಹೊಳ್ಳ, 
ಕಾರ್ಯನಿರ್ವಾಹಕ ಅಧಿಕಾರಿ ಕುಂದಾಪುರ ತಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next