Advertisement

ಚರ್ಚೆ ವಿಚಾರ ನಿರ್ಣಯವಾಗುತ್ತಿಲ್ಲ: ಆಕ್ಷೇಪ​​​​​​​

06:00 AM Jul 03, 2018 | Team Udayavani |

ಕುಂದಾಪುರ: ಸದಸ್ಯರ ನಡುವೆ ಮಾತಿನ ಗದ್ದಲ, ಪ್ರತೀ ವಿಚಾರದಲ್ಲೂ ಗೊಂದಲ, ಏಕವಚನ ಪ್ರಯೋಗ ಮಾಡಿ ಚರ್ಚೆ, ಸರಕಾರ ಬದಲಾದರೂ ನಾಮ ನಿರ್ದೇಶಿತ ಸದಸ್ಯರ ಉಪಸ್ಥಿತಿ ಕುರಿತೂ ಚರ್ಚೆ, ಚರ್ಚೆ ಮಾಡಿದ ವಿಚಾರಗಳೇ ನಿರ್ಣಯದಲ್ಲಿ ಇಲ್ಲ ಎನ್ನುವ ಆಕ್ಷೇಪ ಇತ್ಯಾದಿ ಗಳು ಸೋಮವಾರ ಸಂಜೆ ನಡೆದ ಇಲ್ಲಿನ ಪುರಸಭಾ ಸಾಮಾನ್ಯ ಸಭೆಯ ಹೈಲೈಟ್‌ಗಳು.

Advertisement

ನಿರ್ಣಯ ಮಾಡಿಲ್ಲ
ಸಭಾ ಆರಂಭದಲ್ಲಿಯೇ ಸದಸ್ಯ ಚಂದ್ರಶೇಖರ ಖಾರ್ವಿ ಅವರು, ಸಭೆಯಲ್ಲಿ ಚರ್ಚೆಯಾದ ವಿಚಾರಗಳನ್ನು ನಿರ್ಣಯ ಮಾಡುತ್ತಿಲ್ಲ. ಕಳೆದ ಬಾರಿ ಚುನಾವಣಾ ನೀತಿ ಸಂಹಿತೆ ಇದ್ದಾಗಲೂ ಸಾಮಾನ್ಯ ಸಭೆ ನಡೆಸಲಾಗಿದೆ. ನಾನು ಆಕ್ಷೇಪ ಮಾಡಿದ್ದನ್ನು ನಿರ್ಣಯಿಸಿಲ್ಲ ಎಂದರು. ಡಿಸಿಯವರು ಸಭೆ ನಡೆಸಲು ಅನುಮತಿ ನೀಡಿದ್ದು ಅನುಮತಿ ಪತ್ರವನ್ನು ಸಭೆಯಲ್ಲಿ ಓದಲಾಗಿದೆ ಎಂದು ಅಧ್ಯಕ್ಷೆ ವಸಂತಿ ಸಾರಂಗ ಅವರು ಹೇಳಿದರು. 

ಆದರೆ ಚಂದ್ರಶೇಖರ್‌ ಅವರು ಇದನ್ನು ಒಪ್ಪಲಿಲ್ಲ. ಆಗ ಮಧ್ಯಪ್ರವೇಶಿಸಿದ ರವಿರಾಜ್‌ ಖಾರ್ವಿ ಅವರು ನಿಮ್ಮ ಪಕ್ಷದ ಸದಸ್ಯರೇ ಪತ್ರ ಓದಿದಾಗ ಮೇಜು ತಟ್ಟಿ ಸ್ವಾಗತಿಸಿದ್ದಾರೆ ಎಂದರು. ಎಲ್ಲವನ್ನೂ ನಿರ್ಣಯಿಸಲಾಗದು ಎಂದು ಉಪಾಧ್ಯಕ್ಷ ರಾಜೇಶ್‌ ಕಾವೇರಿ ಹೇಳಿದರು. 

ನೀವು ಜಿಲ್ಲಾಧಿಕಾರಿಗಿಂತಲೂ ಮೇಲಾ ಎಂದು ಅಧ್ಯಕ್ಷರು ಚಂದ್ರಶೇಖರ್‌ ಅವರನ್ನು ಪ್ರಶ್ನಿಸಿದರು. ಡಿಸಿಯವರ ಪತ್ರ ಇದ್ದರೆ ಈಗಲಾದರೂ ಓದಿ ಎಂದು ಅವರು ಹೇಳಿದರು. ಸಭೆ ನಡೆಸಿದ್ದು ಅಕ್ರಮ ಎಂದಾದರೆ ದೂರು ಕೊಡುವಲ್ಲಿಗೆ ಹೋಗಿ ದೂರು ಕೊಡಿ ಎಂದು ಉಪಾಧ್ಯಕ್ಷರು ಹೇಳಿದರು. 

ನಾನು ಇಲ್ಲಿಯೇ  ಮಾತನಾಡುವುದು, ನಮಗೆ ಇಲ್ಲಿ ಮಾತನಾಡಲು ಅಧಿಕಾರ ಇದೆ. ಸಭೆಗೆ ನನ್ನ ಆಕ್ಷೇಪ ಇರುವ ಕುರಿತು ನಿರ್ಣಯ ಮಾಡಿ ಎಂದು ಚಂದ್ರಶೇಖರ್‌ ಒತ್ತಾಯಿಸಿದರು. 

Advertisement

ಆಕ್ಷೇಪ
ಚಂದ್ರಶೇಖರ್‌ ವಾದಕ್ಕೆ  ರವಿರಾಜ್‌ ಖಾರ್ವಿ ಅವರು ಆಕ್ಷೇಪ ವ್ಯಕ್ತಪಡಿಸಿ, ಸರಕಾರ ಬದಲಾದರೂ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದಾರೆ. ಈ ಕುರಿತು ನಾವೇನೂ ಆಕ್ಷೇಪ ಮಾಡುತ್ತಿಲ್ಲ ಎಂದರು. ಆಗ ನಾಮ ನಿರ್ದೇಶಿತ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರ ಅಮೀನ್‌, ಕೇಶವ ಭಟ್‌, ಶಿವರಾಮ ಪುತ್ರನ್‌ ಹಾಗೂ ಚುನಾಯಿತ ಸದಸ್ಯರಾದ ರವಿಕಲಾ, ಸಂದೀಪ್‌ ಎ. ಪೂಜಾರಿ, ಶ್ರೀಧರ ಶೇರಿಗಾರ್‌ ಮೊದಲಾದವರು ಇದನ್ನು ವಿರೋಧಿಸಿದರು. 

ನಾಮನಿರ್ದೇಶಿತ ಸದಸ್ಯರ ಅಧಿಕಾರ ಮೊಟಕು ರಾಜ್ಯಪಾಲರು ಮಾಡಬೇಕು. ಅದು ಕುಂದಾಪುರಕ್ಕೆ ಮಾತ್ರ ಅನ್ವಯ ಅಲ್ಲ. ಇಡೀ ರಾಜ್ಯಕ್ಕೆ ಅನ್ವಯ.  ನೋಟಿಸ್‌ ಕೊಟ್ಟು ಸಭೆಗೆ ಬರಹೇಳಿ ಇಂತಹ ಅವಮಾನ ಮಾಡಬಾರದು ಎಂದವರು ತಿಳಿಸಿದರು.
 
ಆಗ ರವಿರಾಜ್‌ ಅವರು “ಭಾಷೆ ಅರ್ಥವಾಗುವುದಿಲ್ಲವಾ, ನಾನು ಆಕ್ಷೇಪಿಸ ಬಹುದಿತ್ತು. ನಾವು ಆಕ್ಷೇಪಿಸುವುದಿಲ್ಲ ಎಂದದ್ದು’  ಎಂದು ಕೇಳಿದ್ದು ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಏಕವಚನ ಪ್ರಯೋಗಕ್ಕೆ ಮುಂದಾದರು. ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡರು.
 
ಇಷ್ಟ ಇಲ್ಲದಿದ್ದವರು ಸಭೆೆಯಿಂದ ಹೋಗಬಹುದು ಎಂದು ರವಿರಾಜ್‌ ಹೇಳಿದ ಮಾತು ಕೂಡಾ ಮತ್ತಷ್ಟು ಕೋಲಾಹಲ ಉಂಟು ಮಾಡಿತು. ನಾವು ಸಭೆಗೆ ಬಂದುದು, ನಿಮ್ಮ ಮನೆಗೆ ಬಂದುದಲ್ಲ ಎಂದೆಲ್ಲ ಚರ್ಚೆಯಾಯಿತು. ಕೊನೆಗೂ ಸ್ಥಾಯೀಸಮಿತಿ ಅಧ್ಯಕ್ಷ ವಿಟuಲ ಕುಂದರ್‌ ಅವರು ರವಿರಾಜ್‌ ಖಾರ್ವಿ ಅವರ ಮನವೊಲಿಸಿ ಸಭೆ ನಡೆಯುವಂತೆ ಮಾಡಿದರು.

ಅಧ್ಯಕ್ಷೆ ವಸಂತಿ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿಟuಲ ಕೆ. ಕುಂದರ್‌, ಮುಖ್ಯಾಧಿಕಾರಿ ಗೋಪಾಲಕೃಷ್ಣ ಉಪಸ್ಥಿತರಿದ್ದರು. 

ಬೀದಿ ದೀಪ ಉರಿಯುತ್ತಿಲ್ಲ
ಬೀದಿ ದೀಪ ನಿರ್ವಹಣೆ ಕುರಿತು ಚರ್ಚೆಗೆ ಬಂದಾಗ ಸಂದೀಪ್‌, ರವಿಕಲಾ, ಪ್ರಭಾಕರ್‌  ಕೋಡಿ, ರವಿರಾಜ್‌ ಅವರು ಕಳೆದ 4 ತಿಂಗಳಿನಿಂದ ಬೀದಿ ದೀಪಗಳು ಉರಿಯುತ್ತಿಲ್ಲ. ನಿರ್ವಹಣೆ ಹಾಗೂ ಅನುದಾನ ನೀಡುವ ಕುರಿತು ಕಳೆದ ಸಭೆಯಲ್ಲಿಯೇ ನಿರ್ಣಯವಾಗಿದೆ. ಆದರೂ ಅನುಷ್ಠಾನವಾಗದೇ ಈಗ ಮರಳಿ ನಿರ್ಣಯ ಮಾಡಲಾಗುತ್ತಿದೆ. ಅನುಷ್ಠಾನವಾಗದ ನಿರ್ಣಯಗಳನ್ನು ಮಾಡುವುದು ಯಾಕೆ ಎಂದು ಪ್ರಶ್ನಿಸಿದರು. ಕೋಡಿ ಪರಿಸರದಲ್ಲಿ ಬೀದಿ ದೀಪಗಳೇ ಉರಿಯುತ್ತಿಲ್ಲ ಎಂದು ಸಂದೀಪ್‌ ಹೇಳಿದರು. ಬೀದಿ ದೀಪ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿದೆ ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಅವರು ಹೇಳಿದರು. 

27 ರೋಗಿಗಳಿಗೆ ಮಾತ್ರ ಸೇವೆ 
ಡಯಾಲಿಸಿಸ್‌ಗೆ 3 ಶಿಫ್ಟ್ಗಳಲ್ಲಿ 3 ಯಂತ್ರಗಳಲ್ಲಿ ಮಾಡುತ್ತಿದ್ದರೂ 27 ರೋಗಿಗಳಿಗೆ ಮಾತ್ರ ಸೇವೆ ದೊರೆಯುತ್ತಿದೆ. ಇನ್ನೂ ಮೂವರು ರೋಗಿಗಳು ಬೇಡಿಕೆ ಸಲ್ಲಿಸಿದ್ದಾರೆ ಎಂದು ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಆರೋಗ್ಯ ಮಾಹಿತಿ ನೀಡಿದರು.  ಆದ್ದರಿಂದ ಇವರಿಗೂ ಅನುಕೂಲ ಮಾಡಿಕೊಡಲು ಪುರಸಭೆಯಿಂದ ಪತ್ರ ಬರೆಯಲು ನಿರ್ಣಯಿಸಲಾಯಿತು.  ಆಸ್ಪತ್ರೆ ವಠಾರದಲ್ಲಿ ಕಸ ನಿರ್ವಹಣೆ, ಕ್ಯಾಂಟೀನ್‌ನಲ್ಲಿ ಶುಚಿತ್ವ ಪಾಲನೆ ಕುರಿತು ಚರ್ಚೆ ನಡೆಯಿತು. 

ರಸ್ತೆ ದುರಸ್ತಿ ಮಾಡಿಲ್ಲ
ಮಳೆಗಾಲಕ್ಕೆ ಮುನ್ನ ರಸ್ತೆ ದುರಸ್ತಿ ಮಾಡಬೇಕು ಎಂದು ನಿರ್ಣಯ ಮಾಡಿ ದುರಸ್ತಿಯಾಗಬೇಕಾದ ರಸ್ತೆಗಳ ಪಟ್ಟಿ ತೆಗೆದುಕೊಂಡಿದ್ದರೂ ಇನ್ನೂ ನಿರ್ವಹಣೆ ಮಾಡಿಲ್ಲ ಎಂದು ಸದಸ್ಯರಾದ ಗುಣರತ್ನ, ಸಿಸಿಲಿ ಕೋಟ್ಯಾನ್‌, ಕಲಾವತಿ, ರವಿಕಲಾ, ರವಿರಾಜ್‌ ಹೇಳಿದರು. ಕಳೆದ ಬಾರಿ ಮಾಡಿದ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಪುರಸಭಾ ನಿಧಿಯಿಂದ ತುರ್ತು ನಿರ್ವಹಣೆ ಮಾಡುವ  ಕುರಿತು ನಿರ್ಣಯವಾಗಬೇಕಿದೆ ಎಂದು ಉಪಾಧ್ಯಕ್ಷರು ಹೇಳಿದರು. ಇದಕ್ಕೆ ಎಲ್ಲರ ಸಮ್ಮತಿ ದೊರೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next