ಕುಂದಾಪುರ: ನಗರದಲ್ಲಿ ಮಂಗಳವಾರ ಲಾಕ್‌ಡೌನ್ ಬಿಗಿಗೊಳಿಸಲಾಯಿತು. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 7ರಿಂದ 11 ಗಂಟೆವರೆಗೆ ಎಂದು ಸಮಯ ನಿಗದಿ ಮಾಡಿದ್ದರೂ ಆ ಸಮಯದಲ್ಲಿ ನಗರಕ್ಕೆ ಆಗಮಿಸಿದವರಿಗೂ ಪೊಲೀಸರ ಕಟ್ಟುನಿಟ್ಟಿನ ಕ್ರಮ ಇರಿಸು ಮುರುಸು ಉಂಟು ಮಾಡಿತು. ನಗರಕ್ಕೆ ಪ್ರವೇಶಾವಕಾಶ ದೊರೆಯದೇ ಮರಳಿ ಹೋಗಬೇಕಾಯಿತು.
ನಗರದ ಒಳಗೆ ಬರುವ ಎಲ್ಲ ಪ್ರವೇಶ ಮಾರ್ಗಗಳನ್ನೂ ಬಂದ್ ಮಾಡಲಾಗಿತ್ತು. ಸಂಗಂ ಬಳಿ ಹಾಗೂ ಶಾಸಿŒ ಸರ್ಕಲ್ ಬಳಿ ಮಾತ್ರ ಅವಕಾಶ ನೀಡಲಾಗಿತ್ತು. ಇದರಿಂದಾಗಿ ನಗರದ ಒಳಗೆ ಇಕ್ಕಟ್ಟಾಗಿ ವಾಹನ ದಟ್ಟಣೆ ಉಂಟಾಯಿತು. ಅಲ್ಲಿ ಪೊಲೀಸರು ಪ್ರತೀ ವಾಹನಗಳನ್ನು ತಡೆದು ವಿಚಾರಿಸಿಯೇ ಬಿಡುತ್ತಿದ್ದರು. ಒಬ್ಬರ ಎಟಿಎಂ ನೆಪದಲ್ಲಿ ಐವರು ಬಂದಾಗ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಕಾರಿನಲ್ಲಿ ಚಾಲಕ ಹಾಗೂ ಇನ್ನೊಬ್ಬ, ಬೈಕಿನಲ್ಲಿ ಒಬ್ಬರಿಗೆ ಮಾತ್ರ ಎಂದು ಲಾಕ್‌ಡೌನ್ ನಿಯಮಸೂಚಿಯಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಅಗತ್ಯಮೀರಿ ಬಂದವರಿಗೆ ಬಿಸಿ ತಟ್ಟಿತು. ಆಸ್ಪತ್ರೆಗೆ, ಮೆಡಿಕಲ್‌ಗೆ
ಬಂದವರಿಗೆ ಯಾವುದೇ ತೊಂದರೆ ಆಗಲಿಲ್ಲ. ಆದರೆ ಸಣ್ಣಪುಟ್ಟ ಕಾರಣ ಹಿಡಿದು ಬಂದವರನ್ನು, ರಿಕ್ಷಾ ಬಾಡಿಗೆ ಮಾಡುತ್ತಿದ್ದವರನ್ನು ಪೊಲೀಸರು ಮರಳಿ ಕಳುಹಿಸುತ್ತಿದ್ದರು. ಇದರಿಂದ ಸ್ವಲ್ಪ ಕಾಲ ಗೊಂದಲದ ವಾತಾವರಣ ಉಂಟಾಯಿತು.
11 ಗಂಟೆಯವರೆಗೆ ಅವಕಾಶ ನೀಡಿದ್ದರೂ ಪೊಲೀಸರು ಮರಳಿ ಕಳುಹಿಸುವ ಕ್ರಮಸರಿ ಯಲ್ಲ, ಕುಂದಾಪುರ ನಾಗರಿಕರು ಲಾಕ್‌ಡೌನ್‌ಗೆ ಸ್ಪಂದಿಸುತ್ತಿದ್ದಾರೆ. 11 ಗಂಟೆ ಅನಂತರ ಯಾವುದೇ ವಾಹನಗಳು ರಸ್ತೆಗಿಳಿಯುವುದಿಲ್ಲ. ಹಾಗಿದ್ದರೂ ಅದಕ್ಕೂ ಮುನ್ನವೇ ತಡೆಯುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂತು. ಆದರೆ ನಿಗದಿತ ಅವಧಿಯಲ್ಲಿ ಕುಂದಾಪುರ ನಗರದಲ್ಲಿ ವಿಪರೀತ ಜನಸಂದಣಿ ಇರುತ್ತದೆ, ವಾಹನ ದಟ್ಟಣೆ ಇರುತ್ತದೆ ಎಂದು ಸಾರ್ವಜನಿಕರೇ ಎಸ್‌ಪಿ ಅವರಿಗೆ ದೂರು ನೀಡಿದ್ದಾರೆ. ಕೆಲವರು ಫೇಸ್‌ಬುಕ್ ಲೈವ್‌ನಲ್ಲೂ ಕುಂದಾಪುರದಲ್ಲಿ ಲಾಕ್‌ಡೌನ್ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ, ಬೇಕಾಬಿಟ್ಟಿ ಜನರನ್ನು ತಿರುಗಲು ಬಿಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದಾಗಿ ಇನ್ನೂ ಒಂದೆರಡು ದಿನಗಳ ಕಾಲ ಇದೇ ರೀತಿ ಬಿಗಿ ನಿಯಮ ಅಳವಡಿಸಿ ಅನಗತ್ಯವಾಗಿ ಮನೆಬಿಟ್ಟು ಹೊರ ಬರುವವರಿಗೆ ತಿಳಿ ಹೇಳಲಾಗುವುದು ಎಂದು ಎಎಸ್‌ಪಿ ಹರಿರಾಮ್ ಶಂಕರ್ ಪ್ರತಿಕ್ರಿಯಿಸಿದ್ದಾರೆ.