Advertisement

ಕುಂದಾಪುರ: ಬೇಸಗೆ ಫಸಲು ನಷ್ಟ , ಪರಿಹಾರ ನೀಡಲು ಆಗ್ರಹ

02:18 AM Jul 09, 2019 | sudhir |

ಕುಂದಾಪುರ: ಈ ವರ್ಷ ಬೇಸಗೆಯಲ್ಲಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಬರ ಉಂಟಾಗಿತ್ತು. ಅನೇಕ ತೋಟಗಳಿಗೂ ನೀರಿಲ್ಲದೇ ಮರಗಳೆಲ್ಲಾ ಒಣಗಿ, ಬಹುಪಾಲು ತೋಟಗಳಲ್ಲಿ ಮರಗಳೂ ಸತ್ತಿವೆ. ಮುಂದಿನ ವರ್ಷಕ್ಕೆ ಬೆಳೆಯೇ ಇಲ್ಲದ ಪರಿಸ್ಥಿತಿ ಒಂದೆಡೆಯಾದರೆ, ಹಾಳಾದ ತೋಟ ಮೊದಲಿನಂತಾಗಲು ಇನ್ನೂ ಕೆಲವು ವರ್ಷಗಳೇ ಬೇಕು ಎಂಬ ಅಳಲನ್ನು ತಾಲೂಕಿನ ವ್ಯಾಪ್ತಿಯ ರೈತರು ತೋಡಿಕೊಂಡರು.

Advertisement

ಭಾರತೀಯ ಕಿಸಾನ್‌ ಸಂಘದ ತಾಲೂಕು ಸಮಿತಿಯ ಅಧ್ಯಕ್ಷ ಸೀತಾರಾಮ ಗಾಣಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ರೈತರ ಸಮಸ್ಯೆಯ ಬಗ್ಗೆ ಚರ್ಚಿಸಿ, ಪರಿಹಾರಕ್ಕಾಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲು ಮತ್ತು ಪ್ರತಿಗಳನ್ನು ತಾಲೂಕಿನ ತೋಟಗಾರಿಕಾ ಇಲಾಖೆ, ಭಾರತೀಯ ಕಿಸಾನ್‌ ಸಂಘದ ಕಚೇರಿಗೆ ಕಳುಹಿಸಿಕೊಡುವಂತೆ ಕರೆ ನೀಡಲು ತೀರ್ಮಾನಿಸಲಾಯಿತು.

ಜಿಲ್ಲಾ ಸಮಿತಿಯ ಮೂಲಕ ಜಿಲ್ಲಾಧಿಕಾರಿಯವರನ್ನು, ಉಸ್ತುವಾರಿ ಸಚಿವರನ್ನು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಮಧುಕರ್‌, ಇಲಾಖೆಯಿಂದ ರೈತರಿಗೆ ಲಭ್ಯವಿರುವ ಯೋಜನೆಗಳ ಸಮಗ್ರ ಮಾಹಿತಿ ನೀಡಿದರು. ಯೋಜನೆಗಳಡಿಯಲ್ಲಿ ಸಿಗಬಹುದಾದ ಸಹಾಯ ಧನ ಮತ್ತು ಅವುಗಳನ್ನು ಪಡೆಯುವ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು.

ಕಳೆದ ವರ್ಷ ಅಡಿಕೆ ಕೊಳೆರೋಗದಿಂದಾದ ನಷ್ಟಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ ರೈತರಿಗೆ ಪರಿಹಾರ ಮಂಜೂರಾಗಿದ್ದರೂ, ತಾಲೂಕಿನ 672 ರೈತರ ಖಾತೆಗೆ ಪರಿಹಾರದ ಹಣ ಜಮೆಯಾಗಿಲ್ಲ. ಅದಕ್ಕೆ ಅಧಿಕಾರಿಗಳು ರೈತರ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆಯಾಗಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಅರ್ಜಿ ಸಲ್ಲಿಸಿ, ಇನ್ನೂ ಪರಿಹಾರ ತಮ್ಮ ಖಾತೆಗೆ ಬಂದಿಲ್ಲ ಎನ್ನುವ ರೈತರು ಇಲ್ಲಿನ ಭಾರತೀಯ ಕಿಸಾನ್‌ ಸಂಘದ ಕಚೇರಿ ಅಥವಾ ತೋಟಗಾರಿಕಾ ಇಲಾಖೆಯ ಕಚೇರಿಗೆ ಭೇಟಿಕೊಟ್ಟು, ತಮ್ಮ ಅರ್ಜಿ ಏನಾಗಿದೆ ಎಂಬುದನ್ನು ಪರಿಶೀಲಿಸಿ, ದಾಖಲೆಗಳನ್ನು ಸರಿಪಡಿಸಿಕೊಳ್ಳಬಹುದು. ಆ ಮೂಲಕ ತಮ್ಮ ಖಾತೆಗೆ ಪರಿಹಾರದ ಮೊತ್ತ ಬರುವಂತೆ ಮಾಡಬಹುದಾಗಿದೆ ಎಂದು ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ತಿಳಿಸಿದರು.

Advertisement

ಸಂಘದ ರಾಜ್ಯ ಸಮಿತಿಯ ಸದಸ್ಯ ಬಿ. ವಿ. ಪೂಜಾರಿ, ಅರಣ್ಯ ಇಲಾಖೆಯಿಂದ ಅಕೇಶಿಯಾ ಗಿಡ ನೆಡುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಲೇ ಇದೆ. ಹಣ್ಣುಹಂಪಲು ಗಿಡನೆಡುವ ಬಗ್ಗೆ ಎಷ್ಟೇ ಕೇಳಿಕೊಂಡರೂ ಪ್ರತೀ ವರ್ಷ ನೆಡುವ ಒಟ್ಟು ಗಿಡಗಳ ಪೈಕಿ ಶೇ. 10ರಷ್ಟೂ ನೆಡುತ್ತಿಲ್ಲ. ದಟ್ಟ ಅರಣ್ಯದಲ್ಲಿ ಹಣ್ಣು ಹಂಪಲು ಬಿಡುವ ಮರಗಳಿಲ್ಲ. ನೀರಿನ ವ್ಯವಸ್ಥೆಯಿಲ್ಲ ಎಂದರು.

ಕಾಡು ಪ್ರಾಣಿಗಳು ಊರಿಗೆ ಬರುತ್ತಿವೆ. ಮಂಗ, ಜಿಂಕೆ, ನವಿಲುಗಳ ಹಾವಳಿ ವಿಪರೀತವಾದರೆ ಅವುಗಳ ಹಿಂದೆ ಚಿರತೆ, ಹುಲಿಗಳೂ ಬರುತ್ತಿವೆ. ಸರಕಾರಗಳು ಕಾಡುಪ್ರಾಣಿಗಳ ರಕ್ಷಣೆಗೆ ತೋರುವ ಆಸಕ್ತಿ ರೈತರ ಬೆಳೆಯ ರಕ್ಷಣೆಗೆ ತೋರುತ್ತಿಲ್ಲ. ಕಾಡುಪ್ರಾಣಿಗಳಿಂದ ನಮ್ಮ ಬೆಳೆ ರಕ್ಷಿಸಿಕೊಟ್ಟರೆ ನಮಗೆ ಯಾವುದೇ ಮನ್ನಾ ಅಥವಾ ಸಹಾಯಧನ ಬೇಕಿಲ್ಲ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ನೋಂದಣಿ ಆಗಿದೆಯೇ ಎಂಬುದರ ಬಗ್ಗೆ ಪ್ರೀಮಿಯಂ ಹಣಪಾವತಿಸಿದ ರೈತರು ಸಂಬಂಧಪಟ್ಟ ಬ್ಯಾಂಕ್‌ನಿಂದ ರಶೀದಿ ಪಡೆದು, ಮೊಬೈಲ್ ಆ್ಯಪ್‌ ಮೂಲಕ ಪರಿಶೀಲಿಸಬೇಕು. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಅರ್ಜಿ ಸಲ್ಲಿಸಲು ರೈತರಿಗೆ ಜು.10ರವರೆಗೆ ಅವಕಾಶ ಇದೆ ಎಂದು ಮಾಹಿತಿ ನೀಡಲಾಯಿತು.

ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಾಣೇಶ ಯಡಿಯಾಳ್‌ ಸ್ವಾಗತಿಸಿ, ನಿರ್ಣಯವನ್ನು ಮಂಡಿಸಿದರು. ಕೋಶಾಧಿಕಾರಿ ಅನಂತಪದ್ಮನಾಭ ಉಡುಪ ವಂದಿಸಿದರು.

ತಾಲೂಕಿನ ತೆಂಗು ಫೆಡರೇಶನ್‌ನ ಅಧ್ಯಕ್ಷ ವೆಂಕಟೇಶ ರಾವ್‌, ಪಿ.ಎಲ್.ಡಿ. ಬ್ಯಾಂಕ್‌ ಅಧ್ಯಕ್ಷ ದಿನಕರ ಶೆಟ್ಟಿ, ಸಂಘದ ಪ್ರಮುಖ ಗಣಪಯ್ಯ ಗಾಣಿಗ, ನಾರಾಯಣ ಶೆಟ್ಟಿ, ಜಯರಾಮ ಶೆಟ್ಟಿ, ಮಂಜುನಾಥ ಹೆಬ್ಟಾರ, ಸತ್ಯನಾರಾಯಣ ಅಡಿಗ, ಮಹಾಬಲ ಬಾಯರಿ, ಚನ್ನಕೇಶವ ಕಾರಂತ, ಸುಧಾಕರ ನಾಯಕ್‌, ಶಿವರಾಮ ಮಧ್ಯಸ್ಥ, ನಾಗೇಂದ್ರ ಉಡುಪ, ಶಿವರಾಜ ಶೆಟ್ಟಿ , ತೇಜಪ್ಪ ಶೆಟ್ಟಿ, ಚಂದ್ರಶೇಖರ, ಶೇಷು ಆಚಾರ್ಯ, ಶ್ರೀಕಂಠ ಯಡಿಯಾಳ, ನಾಗಯ್ಯ ಶೆಟ್ಟಿ, ಮಂಜಯ್ಯ ಶೆಟ್ಟಿ , ತಾಲೂಕಿನ 40ಕ್ಕೂ ಹೆಚ್ಚು ಗ್ರಾಮ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next