Advertisement
ವಾಹನಗಳ ಓಡಾಟ ಇಲ್ಲಬೆಳಗ್ಗಿನಿಂದಲೇ ಜನತಾ ಕರ್ಫ್ಯೂ ಗಾಗಿ ಜನತೆ ತಮಗೆ ತಾವೇ ನಿರ್ಬಂಧ ಹೇರಿಕೊಂಡು ಮನೆಯೊಳಗೆ ಕುಳಿತರು. ಕೆಲವರು ಮನೆ ಬಾಗಿಲು ಕೂಡ ಹಾಕಿಕೊಂಡಿದ್ದರು. ಕೆಎಸ್‌ಆರ್‌ಟಿಸಿ, ಖಾಸಗಿ, ಲೋಕಲ್ ಬಸ್ಸುಗಳು ರಸ್ತೆ ಗಿಳಿಯಲೇ ಇಲ್ಲ. ಇದರಿಂದ ಜಿಲ್ಲೆಯಿಂದ ರಾಜ್ಯ ಹಾಗೂ ಇತರ ಜಿಲ್ಲೆ, ಮಾತ್ರವಲ್ಲದೇ ಜಿಲ್ಲೆ ಯೊಳಗೆ ಸಂಪರ್ಕ ಅಸಾಧ್ಯವಾಯಿತು. ಸಾರಿಗೆ ಹಾಗೂ ಖಾಸಗಿ ವಾಹನ ರಸ್ತೆಗೆ ಇಳಿಯದಿದ್ದರಿಂದ ಬಸ್ ನಿಲ್ದಾಣ ಖಾಲಿ ಖಾಲಿ ಯಾಗಿತ್ತು. ರಿಕ್ಷಾಗಳು ಬೀದಿಗಿಳಿಯಲಿಲ್ಲ. ಟೂರಿಸ್ಟ್ ಟ್ಯಾಕ್ಸಿಗಳೂ ಇರಲಿಲ್ಲ. ರವಿವಾರ ರಜಾ ದಿನವಾಗಿದ್ದರೂ ಪೇಟೆಗೆ ಬರುವ ಧೈರ್ಯ ಯಾರೂ ಮಾಡಲೇ ಇಲ್ಲ. ಸ್ವಂತ ವಾಹನ ಓಡಾಟ ಕೂಡಾ ಕಡಿಮೆಯಿದ್ದು ಲಾರಿ, ಟೂರಿಸ್ಟ್ ಬಸ್ಸುಗಳ ಓಡಾಟ ಕೂಡಾ ಬೆರಳೆಣಿಕೆ ಪ್ರಮಾಣದಲ್ಲಿ ಇದ್ದುದರಿಂದ ಇಡೀ ರಾಷ್ಟ್ರೀಯ ಹೆದ್ದಾರಿ ಖಾಲಿಖಾಲಿಯಾಗಿತ್ತು. ಕಾರ್ ಬೈಕ್‌ಗಳ ಓಡಾಟ ಬೆರಣಿಕೆಯಷ್ಟಿತ್ತು. ಈ ಮಧ್ಯೆ ಸಿಕ್ಕಿದ್ದೇ ಅವಕಾಶ ಎಂದು ಬೈಕ್‌ಗಳನ್ನು ಕೆಲ ಯುವಕರು ಜಾಲಿ ರೈಡ್ ಮಾಡುತ್ತಿದ್ದುದು ಕಂಡು ಬಂತು.
ದೇವಾಲಯಗಳು ಬೇಗನೇ ಪೂಜೆ ಮುಗಿಸಿ ಭಕ್ತರ ಪ್ರವೇಶ ನಿರ್ಬಂಧಿಸಿ ಸೇವೆಗಳು ಇಲ್ಲ ಎಂದು ಸೂಚನಾ ಫಲಕ ಅಳವಡಿಸಿ ಬಾಗಿಲು ಹಾಕಿದ್ದವು. ಅಂತೆಯೇ ಸರಕಾರದ ಆದೇಶ ಹಾಗೂ ಬಿಷಪ್ ಅವರ ಸೂಚನೆಯಂತೆ ಚರ್ಚಿನಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದುಗೊಳಿಸಲಾಗಿತ್ತು. ಚರ್ಚಿನ ಬದಲು ಮನೆಯಲ್ಲಿ ಬೈಬಲ್ ಪಠಣ, ಪ್ರಾರ್ಥನೆ ಸಲ್ಲಿಸುವ ಜತೆ ಕ್ರೈಸ್ತ ಸಮಾಜದ ಎಲ್ಲರೂ ಕೊರೊನಾ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲು ಸೂಚಿಸಲಾಗಿದೆ. ತೆರೆದ ಕ್ಯಾಂಟಿನ್
ಶಾಸ್ತ್ರಿ ಸರ್ಕಲ್‌ನಲ್ಲಿ ಇಳಿದು ಬೇರೆ ಊರಿಗೆ ಹೋಗಲು ಸಾಧ್ಯವಾಗದೇ ಇದ್ದ ಪ್ರಯಾಣಿಕರನ್ನು ಪತ್ರಕರ್ತರು ಊರಿಗೆ ಹೋಗುವಂತೆ ಮಾಡಿ ಮಾನವೀಯತೆ ಮೆರೆದರು. ಹೋಟೆಲ್‌ಗಳು, ಕ್ಯಾಂಟೀನ್‌ಗಳು, ಗೂಡಂಗಡಿಗಳು ಇಲ್ಲದೇ ಇದ್ದರೂ ಇಂದಿರಾ ಕ್ಯಾಂಟೀನ್ ಮಾತ್ರ ತೆರೆದಿತ್ತು!. ಜನ ಸೇರುವ ಎಲ್ಲ ಕೇಂದ್ರಗಳನ್ನು ಮುಚ್ಚಲು ಸೂಚಿಸಿದ್ದರೂ ಇಂದಿರಾ ಕ್ಯಾಂಟಿನ್ ತೆರೆದಿಟ್ಟ ಉದ್ದೇಶ ಮಾತ್ರ ಗೊತ್ತಾಗಲಿಲ್ಲ. ಇಡೀ ನಗರದಲ್ಲಿ ಅಲ್ಲೊಂದು ಇಲ್ಲೊಂದು ತಲೆ ಕಾಣುವಂತೆ ಬೆರಳೆಣಿಕೆಯ ಮಂದಿಯಷ್ಟೇ ಇದ್ದರು. ಉಳಿದಂತೆ ನಗರವೇ ಸ್ತಬ್ಧ ಚಿತ್ರದಂತೆ ಕಾಣುವಂತೆ ಭಾಸವಾಗುತ್ತಿತ್ತು. ಅಷ್ಟರಮಟ್ಟಿಗೆ ಐತಿಹಾಸಿಕವಾಗಿ ಆಚರಿಸಲ್ಪಟ್ಟಿದೆ. ಪೊಲೀಸ್ ಬಲ ಪ್ರಯೋಗವಿಲ್ಲದೇ, ಸೆಕ್ಷನ್ ಹಾಕದೇ ಜನರೇ ಸ್ವಯಂ ಆಗಿ ತಮ್ಮನ್ನು ನಿರ್ಬಂಧಿಸಿಕೊಂಡಿದ್ದರು.
Related Articles
ವಾಣಿಜ್ಯ ಸಂಕೀರ್ಣ, ಅಂಗಡಿ ಮುಂಗಟ್ಟು, ಹೊಟೇಲ್ ಸಮುಚ್ಚಯ, ಗೂಡಂಗಡಿಗಳು ಕೂಡಾ ಬಂದ್ ಮಾಡುವ ಮೂಲಕ ಜನತಾ ಕರ್ಫ್ಯೂ ಬೆಂಬಲಿಸಿದ್ದು ವಿಶೇಷವಾಗಿತ್ತು. ಕೆಲವು ಮೆಡಿಕಲ್‌ನವರು ಬಾಗಿಲು ತೆಗೆದಿದ್ದರೆ ಜನೌಷಧಿ ಕೇಂದ್ರ ಇರಲಿಲ್ಲ. ಕೆಲವು ಮೆಡಿಕಲ್ ಬಾಗಿಲು ತೆರೆಯಲೇ ಇಲ್ಲ.
Advertisement
ಪೌರಕಾರ್ಮಿಕರ ಸೇವೆಪೆಟ್ರೋಲ್ ಬಂಕ್‌ಗಳಿದ್ದರೂ ಪೆಟ್ರೋಲ್ ಹಾಕಲು ಬರುವವರು ಇರಲಿಲ್ಲ. ಸರಕಾರಿ ಆಸ್ಪತ್ರೆ ಬಾಗಿಲು ತೆಗೆದಿದ್ದರೂ ಜನರು ಬಂದಿರಲಿಲ್ಲ. ನಿತ್ಯ ಜನದಟ್ಟಣೆಯ ತಾಣವಾಗಿರುತ್ತಿದ್ದ ಮೀನುಮಾರುಕಟ್ಟೆ, ಹೂವಿನ ಮಾರುಕಟ್ಟೆ, ಮಾಂಸದ ಅಂಗಡಿ ಎಲ್ಲೂ ಯಾರೂ ಇರಲಿಲ್ಲ. ಪುರಸಭೆ ಪೌರ ಕಾರ್ಮಿಕರು, ಮೆಸ್ಕಾಂ ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರ್ವಹಿಸಿದರು. ಸ್ವತ್ಛತೆ ಕಾರ್ಯ ನಡೆಸಿದರು. ಬಸ್ ಸಂಚಾರ ಸ್ಥಗಿತ ಅರ್ಧ ದಾರಿಯಲ್ಲೇ ಉಳಿದ ಪ್ರಯಾಣಿಕರು
ಕುಂದಾಪುರ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಕುಂದಾಪುರದಲ್ಲಿ ಎಲ್ಲ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರವನ್ನು ಸ್ಥಗಿತಗೊಳಿಸಿದ್ದು, ಆದರೆ ಇದರಿಂದ ಬೆಂಗಳೂರು, ಮತ್ತಿತರ ಕಡೆಗಳಿಂದ ಬಂದ ಕೆಲವರು ಗ್ರಾಮೀಣ ಭಾಗದ ತಮ್ಮ ಮನೆ ಸೇರಲು ಪ್ರಯಾಸಪಡುವಂತಾಯಿತು. ಬೈಂದೂರಿನವರೊಬ್ಬರು ಬೆಂಗಳೂರಿನಿಂದ ಬೈಂದೂರಿಗೆ ಬಸ್ ವ್ಯವಸ್ಥೆ ರದ್ದಾಗಿದ್ದ ಕಾರಣ ಕುಂದಾಪುರವರೆಗೆ ಇದ್ದ ಬಸ್ ಹತ್ತಿ ಬಂದಿದ್ದರು. ಆದರೆ ಕುಂದಾಪುರದಲ್ಲಿ ಇಳಿದ ಬಳಿಕ ತಮ್ಮ ಊರಿಗೆ ತೆರಳಲು ಬಸ್ ಇಲ್ಲದೆ ಕುಂದಾಪುರದಲ್ಲಿಯೇ ಬೆಳಗ್ಗೆ 7 ಗಂಟೆಗೆ ಬಂದಿದ್ದ ಅವರು 10-11 ಗಂಟೆಯವರೆಗೂ ಬೇರೆ ವಾಹನ ಸಿಗದೇ ಪರದಾಡುವಂತಾಯಿತು. ಬಳಿಕ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿ ಹತ್ತಿ ತೆರಳಿದರು.
ಮಂಗಳೂರಿನಲ್ಲಿ ಲಾರಿ ಚಾಲಕರಾಗಿದ್ದವರೊಬ್ಬರು ಕುಂದಾಪುರದವರೆಗೆ ಬಸ್‌ನಲ್ಲಿ ಬಂದಿದ್ದು, ಆದರೆ ಇಲ್ಲಿಂದ ಊರಾದ ಬೈಂದೂರಿಗೆ ತೆರಳಲು ವಾಹನವಿಲ್ಲದೆ ಪರದಾಡುವಂತಾಯಿತು. ಅವರು ಕೂಡ ಯಾವುದೋ ಒಂದು ಲಾರಿ ಹತ್ತಿ ಊರಿನ ಕಡೆಗೆ ಪಯಣಬೆಳೆಸಿದರು. ಮೀನುಗಾರಿಕೆ ಸಂಪೂರ್ಣ ಸ್ಥಗಿತ: ಕಡಲಿಗಿಳಿಯದ ದೋಣಿ
ಗಂಗೊಳ್ಳಿ/ಮರವಂತೆ:ಜನತಾ ಕರ್ಫ್ಯೂಗೆ ಮೀನುಗಾರ ವಲಯದಿಂದಲೂ ಉತ್ತಮ ಸ್ಪಂದನೆ ವ್ಯಕ್ತ ವಾಗಿದೆ. ರವಿವಾರ ಯಾವುದೇ ಬೋಟುಗಳು, ದೋಣಿಗಳು ಕಡಲಿಗಿಳಿಯಲಿದೇ, ದಡದಲ್ಲಿಯೇ ಲಂಗರು ಹಾಕಿದ್ದವು. ಕೋಡಿ, ಗಂಗೊಳ್ಳಿ, ತ್ರಾಸಿ- ಮರವಂತೆ, ಕೊಡೇರಿ, ಸಹಿತ ಎಲ್ಲ ಕಡೆಗಳಲ್ಲಿಯೂ ಮೀನುಗಾರರು ರಜೆ ಸಾರಿದ್ದು, ಇಡೀ ಮೀನುಗಾರಿಕಾ ಚಟುವಟಿಕೆಯೇ ಸ್ತಬ್ಧವಾಗಿತ್ತು. ಸಾವಿರಾರು ಬೋಟುಗಳು, ದೋಣಿಗಳು, ನೂರಾರು ಮೀನುಗಾರರಿಂದ ಗಿಜಿಗುಡುತ್ತಿದ್ದ ಗಂಗೊಳ್ಳಿಯ ಮೀನುಗಾರಿಕಾ ಬಂದರು ಯಾವುದೇ ಚಟುವಟಿಕೆಯಿಲ್ಲದೇ ಬಿಕೋ ಅನ್ನುತ್ತಿತ್ತು. ಕೆಲ ಬೋಟುಗಳು ಬಂದರಿನಲ್ಲಿಯೇ ಲಂಗರು ಹಾಕಿದ್ದರೆ, ಮತ್ತೆ ಕೆಲವು ಬೋಟುಗಳು ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ನಿಲ್ಲಿಸಲಾಗಿತ್ತು. ದೋಣಿಗಳು ಲೈಟ್‌ಹೌಸ್ ಸಮೀಪ ಲಂಗರು ಹಾಕಿದ್ದವು. ಮರವಂತೆಯ ಹೊರ ಬಂದರಿನಲ್ಲಿಯೂ ಇದೇ ಸ್ಥಿತಿ ಕಂಡು ಬಂತು. ಕೋಡಿಯಲ್ಲಿಯೂ ಬೋಟು, ದೋಣಿಗಳು ಲಂಗರು ಹಾಕಿದ್ದವು. ಗಂಗೊಳ್ಳಿ, ಹೆಮ್ಮಾಡಿ, ಹೊಸಾಡು (ಮುಳ್ಳಿಕಟ್ಟೆ), ಮರವಂತೆ, ಗುಜ್ಜಾಡಿ ಸಹಿತ ಎಲ್ಲ ಕಡೆಗಳಲ್ಲಿನ ಮೀನು ಮಾರುಕಟ್ಟೆಗಳಲ್ಲಿ ಕೂಡ ಜನತಾ ಕರ್ಫ್ಯೂ ಸಲುವಾಗಿ ಯಾವುದೇ ವ್ಯಾಪಾರ ವಹಿವಾಟು ನಡೆಸದೇ ಬಂದ್ ಮಾಡಲಾಗಿತ್ತು. ಮನೆಯಲ್ಲೇ ಕಳೆದರು
ಮೀನುಗಾರಿಕೆಗೆ ರಜೆ ಇದ್ದಾಗ ಅಥವಾ ಬೇರೆ ಯಾವುದೋ ಬಂದ್ ಇದ್ದ ವೇಳೆಯೆಲ್ಲ ಮೀನುಗಾರರು ಕಡಲಿಗಿಳಿಯ ದಿದ್ದರೂ, ಬಂದರಿನತ್ತ ಬರುತ್ತಿದ್ದರು. ಬಲೆ ಕಟ್ಟುವ ಕಾಯಕದಲ್ಲಿಯಾದರೂ ತೊಡಗಿಸಿಕೊಳ್ಳುತ್ತಿದ್ದರು. ಆದರೆ ರವಿವಾರ ಮಾತ್ರ ಮೀನುಗಾರರು ಬಂದರಿನ ಕಡೆಗೆ ಬರಲೇ ಇಲ್ಲ. ಮನೆಯಲ್ಲಿಯೇ ಕಾಲ ಕಳೆಯುವ ಮೂಲಕ ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ತಮ್ಮದು ಸಹಕಾರ ಇದೆ ಎನ್ನುವುದನ್ನು ಸಾರಿದರು.