Advertisement

ಶಿರೂರು ಟೋಲ್‌ಗೇಟ್‌ ಕಾರ್ಯಾರಂಭಕ್ಕೆ ಸಿದ್ಧತೆ

11:22 PM Sep 21, 2019 | Team Udayavani |

ಬೈಂದೂರು: ಕಳೆದ ಆರು ವರ್ಷಗಳಿಂದ ಆರಂಭವಾದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಕೊನೆಯ ಹಂತಕ್ಕೆ ಬಂದಿದೆ.

Advertisement

ಬಹುತೇಕ ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಕುಂದಾ ಪುರದಿಂದ -ಗೋವಾ ಚತುಷ್ಪಥ ರಸ್ತೆಯ ಮೊದಲ ಟೋಲ್‌ಗೇಟ್‌ ಶಿರೂರಿನಲ್ಲಿ ಪ್ರಾಯೋಗಿಕ ಸಿದ್ಧತೆ ನಡೆಸಲಾಗುತ್ತಿದೆ. ಮಾತ್ರವಲ್ಲದೆ ಟೋಲ್‌ ಆರಂಭಿಸುವ ಸಿದ್ಧತೆ ಮಾಡುತ್ತಿರುವುದರಿಂದ ಕೆಲವೆ ದಿನಗಳಲ್ಲಿ ಶಿರೂರು, ಬೈಂದೂರು, ಭಟ್ಕಳ ಭಾಗದ ಜನರು ರಸ್ತೆ ಸುಂಕ ಪಾವತಿಸಿ ಪ್ರಯಾಣಿಸಬೇಕಾದ ಪರಿಸ್ಥಿತಿ ಬರಲಿದೆ.

ಪೂರ್ಣಗೊಳ್ಳದ ಕಾಮಗಾರಿ,ಕಟ್ಟಬೇಕೆ ಸುಂಕ
ಈಗಾಗಲೇ ಸಾಸ್ತಾನ, ಹೆಜಮಾಡಿ, ಸುರತ್ಕಲ್‌ ಮುಂತಾದ ಟೋಲ್‌ಗ‌ಳಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ದೊಡ್ಡ ಮಟ್ಟದ ಹೋರಾಟ ನಡೆದಿರುವುದು ತಿಳಿದಿರುವ ವಿಚಾರವಾಗಿದೆ. ಇದರ ನಡುವೆ ಶಿರೂರಿನಲ್ಲಿ ಆರಂಭವಾಗುವ ಟೋಲ್‌ಗೇಟ್‌ನಿಂದ ಸುತ್ತಮುತ್ತಲಿನ ಹತ್ತಾರು ಕಿ.ಮೀ. ಪ್ರ ದೇ ಶದ ಜನರು ಮನೆಯಿಂದ ತೋಟಕ್ಕೆ ಹೋಗಬೇಕಾದರೂ ಸುಂಕ ಪಾವತಿಸಬೇಕಾದ ಪರಿಸ್ಥಿತಿ ಉಂಟಾಗಲಿದೆ.

ಕಾರಣವೆಂದರೆ ಸುತ್ತಲಿನ ಹತ್ತು ಕಿ.ಮೀ. ವ್ಯಾಪ್ತಿಗೆ ಶಿರೂರು ಪ್ರಮುಖ ವಾಣಿಜ್ಯ ಪ್ರದೇಶವಾಗಿದೆ. ಬ್ಯಾಂಕ್‌, ಶಾಲೆ, ಸಂಘ ಸಂಸ್ಥೆಗೆ ಗೋರ್ಟೆ, ಅಡಿಬೇರು, ಬೆಳಕೆ, ಸರ್ಪನಕಟ್ಟೆಯಿಂದ ಶಿರೂರಿಗೆ ಬರಬೇಕು. ಇನ್ನೂ ಶಿರೂರಿನಿಂದ ಪ್ರತಿ ಕೆಲಸಕ್ಕೂ ಕೂಡ 7 ಕಿ.ಮೀ. ದೂರ ಇರುವ ಭಟ್ಕಳಕ್ಕೆ ತೆರಳಬೇಕಾಗುತ್ತದೆ. ಒಂದೊಮ್ಮೆ ಸ್ಥಳೀಯ 10 ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ಸುಂಕ ವಿಧಿಸಿದರೆ ಜನರು ಟೋಲ್‌ ದಾಟಿ ತಿರುಗಾಡದ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ.

ಸರ್ವಿಸ್‌ ರಸ್ತೆಗಳು ಆಗಿಲ್ಲ. ಇಲಾಖೆ ಸ್ಪಷ್ಟತೆ ನೀಡಬೇಕಿದೆ
ಕಳೆದ ಕೆಲವು ತಿಂಗಳುಗಳ ಹಿಂದೆ ಟೋಲ್‌ ಆರಂಭಿಸುವ ಸಿದ್ಧತೆ ನಡೆಸುತ್ತಿರುವ ಮಾಹಿತಿ ಇರುವ ಕಾರಣ ಇಲ್ಲಿನ ಹೆದ್ದಾರಿ ಹೋರಾಟ ಸಮಿತಿ ಸಂಸದರ ಜನಸಂಪರ್ಕ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸಿತ್ತು. ಮಾತ್ರವಲ್ಲದೆ ಸ್ಥಳೀಯ 10 ಕಿ.ಮೀ ವ್ಯಾಪ್ತಿಯ ವಾಹನಗಳಿಗೆ ರಿಯಾಯಿತಿ ನೀಡಬೇಕೆಂದು ಹೆದ್ದಾರಿ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಂಸದರು ಸರ್ವಿಸ್‌ ರಸ್ತೆಗಳನ್ನು ಪೂರ್ಣಗೊಳಿಸದೆ ಟೋಲ್‌ ಆರಂಭಿಸಬಾರದು ಎಂದು ಕಂಪೆನಿ ಹಾಗೂ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದ್ದರು.

Advertisement

ಕಂಪೆನಿ ಅಧಿಕಾರಿಗಳು ಸರ್ವಿಸ್‌ ರಸ್ತೆ ವರದಿ ಕಳುಹಿಸಿದ್ದು ಆರ್‌.ಒ. ಕಚೇರಿಯಿಂದ ಮಂಜೂರಾತಿ ದೊರೆಯಬೇಕಿದೆ. ಎನ್ನುವ ಸಬೂಬು ಹೇಳುತ್ತಿದ್ದಾರೆ. ಇದರ ನಡುವೆ ಟೋಲ್‌ ಆರಂಭಿಸುವ ಅಗತ್ಯವಿರುವ ಎಲ್ಲ ಪ್ರಕ್ರಿಯೆ ನಡೆಯುತ್ತಿದೆ. ಒಂದು ವಾರದಿಂದ ಪ್ರಾಯೋಗಿಕ ಸಂಚಾರ ಕೂಡ ನಡೆಯುತ್ತಿದೆ. ಒಂದೊಮ್ಮೆ ಟೋಲ್‌ ಆರಂಭವಾದ ಬಳಿಕ ಗೊಂದಲಗಳಿಗಿಂತ ಮುಂಚಿತವಾಗಿ ಕಂಪೆನಿ ಸ್ಪಷ್ಟಪಡಿಸಬೇಕಾಗಿದೆ.

ಸಾರ್ವಜನಿಕರಿಂದ ಹೋರಾಟದ ಸಿದ್ಧತೆ
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಟೋಲ್‌ ಪ್ರಾರಂಭಿಸುವ ಮುನ್ನ ಸ್ಥಳೀಯರಿಗೆ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿ ಸದ್ಯದಲ್ಲೆ ಬೃಹತ್‌ ಪ್ರತಿಭಟನೆ ನಡೆಯಲಿದೆ. ಒಂದೆಡೆ ಆರ್ಥಿಕ ಹಿನ್ನಡೆ, ಇನ್ನೊಂದೆಡೆ ಕೃಷಿ ಕಾರ್ಮಿಕರು ಅಧಿಕವಿರುವ ಕಾರಣ ಶಿರೂರು ಸುತ್ತಮುತ್ತ ಸ್ಥಳೀಯರಿಗೆ ಸುಂಕ ಪಾವತಿಸುವ ಕ್ರಮ ಕೈಗೊಂಡರೆ ಹೋರಾಟ ನಡೆಯಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಮಾತ್ರವಲ್ಲದೆ ಪೂರ್ಣ ಪ್ರಮಾಣದಲ್ಲಿ ರಸ್ತೆ ನಿರ್ಮಿಸಿ ಸುಂಕ ವಸೂಲಿ ಮಾಡಲಿ ಎನ್ನುವುದು ಜನರ ಆಗ್ರಹವಾಗಿದೆ.

ಉಗ್ರ ಹೋರಾಟ
ಕಂಪೆನಿ ಈ ಸಮಸ್ಯೆ ಕುರಿತು ಗಂಭೀರವಾಗಿ ಯೋಚಿಸಬೇಕು. ಸ್ಥಳೀಯ 10 ಕಿ.ಮೀ. ವ್ಯಾಪ್ತಿಯವರೆಗೆ ಕಡ್ಡಾಯ ರಿಯಾಯಿತಿ ನೀಡಬೇಕು. ಸಂಸದರು, ಶಾಸಕರು ಕೂಡ ಸರ್ವಿಸ್‌ ರಸ್ತೆ ಪೂರ್ಣಗೊಂಡ ಬಳಿಕ ಟೋಲ್‌ಗೇಟ್‌ ಆರಂಭಿಸಲು ಹೇಳಿದ್ದಾರೆ.ಒಂದೊಮ್ಮೆ ಕಂಪೆನಿ ಸ್ಥಳೀಯರ ಬೇಡಿಕೆಗೆ ಸ್ಪಂದಿಸದಿದ್ದರೆ ಆರಂಭದಲ್ಲೆ ಹೋರಾಟ ನಡೆಸಬೇಕಾಗುತ್ತದೆ.
-ಸತೀಶ ಕುಮಾರ್‌ ಶೆಟ್ಟಿ, ಹೆದ್ದಾರಿ ಹೋರಾಟ ಸಮಿತಿ ಶಿರೂರು

ರಿಯಾಯಿತಿ ಮೇಲಧಿಕಾರಿಗಳ ನಿರ್ಧಾರ
ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ.ಟೋಲ್‌ ವಿಭಾಗ ಪ್ರತ್ಯೇಕವಾಗಿದೆ.ಕಾಮಗಾರಿ ಪೂರ್ಣಗೊಂಡಿರುವ ಕಾರಣ ಒಂದೆರಡು ತಿಂಗಳಲ್ಲಿ ಸುಂಕ ವಸೂಲಾತಿ ಕಾರ್ಯ ಆರಂಭಿಸುವ ಸಾಧ್ಯತೆಗಳಿವೆ. ಸ್ಥಳೀಯರಿಗೆ ರಿಯಾಯಿತಿ ಮೇಲಧಿಕಾರಿಗಳ ನಿರ್ಧಾರವಾಗಿದೆ.
-ಯೋಗೇಂದ್ರಪ್ಪ, ಪ್ರೊಜೆಕ್ಟ್ ಮೆನೇಜರ್‌

ಇದುವರೆಗೆ ಅನುಮತಿ ನೀಡಿಲ್ಲ
ಟೋಲ್‌ ಆರಂಭಿಸಲು ಕಂಪೆನಿ ಅನುಮತಿಗಾಗಿ ಎನ್‌.ಎಚ್‌.ಎ.ಐ.ಗೆ ಕಳುಹಿಸಿದೆ. ಆದರೆ ಟೋಲ್‌ ಆರಂಭಿಸಲು ಅದರದ್ದೆ ಆದ ನಿಯಮಗಳಿವೆ.ಇದುವರೆಗೆ ಅನುಮತಿ ನೀಡಿಲ್ಲ. ನಮ್ಮ ನಿಯಮ ಹಾಗೂ ಕಾಮಗಾರಿ ಸ್ಪಷ್ಟತೆಯ ಬಳಿಕವೆ ಟೋಲ್‌ ಪ್ರಕ್ರಿಯೆಗೆ ಅನುಮತಿ ದೊರೆಯಬೇಕಿದೆ.
-ಚೆನ್ನಯ್ಯ,
ಎನ್‌.ಎಚ್‌.ಎ.ಐ. ಕನ್ಸ್‌ಲ್ಟೆಂಟ್‌

-ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next