ಕುಂದಾಪುರ: ಕೋವಿಡ್ 19 ಮಹಾಮರಿ ಕ್ಷಿಪ್ರಗತಿಯಲ್ಲಿ ಎಲ್ಲೆಡೆ ಹಬ್ಬುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿ ಊರುಗಳು ಕೂಡ ಜಾಗೃತಗೊಳ್ಳುತ್ತಿದ್ದು, ಕಟ್‌ಬೆಲ್ತೂರು ಗ್ರಾಮದ ಬಗ್ವಾಡಿಯಲ್ಲೂ ಜನ ಹೊರಗಿನಿಂದ ತಮ್ಮ ಊರಿಗೆ ಬರದಂತೆ ಪ್ರವೇಶ ದ್ವಾರದಲ್ಲಿಯೇ ಗೇಟು ನಿರ್ಮಿಸಿದ ಘಟನೆ ಗುರುವಾರ ನಡೆದಿದೆ.
ಕಳೆದ 3-4 ದಿನಗಳಿಂದ ತಮ್ಮ ಸುತ್ತಮುತ್ತಲಿನ ಊರಿಗೆ ಬೆಂಗಳೂರು ಮತ್ತಿತರ ಪ್ರದೇಶಗಳಲ್ಲಿ ಕೆಲಸಕ್ಕಿದ್ದ ಜನ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದ ಎಲ್ಲಿ ತಮ್ಮ ಊರಿಗೂ ಕೋವಿಡ್ 19 ರೋಗ ಹಬ್ಬುತ್ತದೋ ಎಂದು ಊರವರೆಲ್ಲ ಭಯಭೀತಗೊಂಡಿದ್ದಾರೆ.
ಹೊರಗಿನಿಂದ ಬಂದವರು ತಮ್ಮ ಊರಿಗೂ ಈ ಮಹಾಮಾರಿ ರೋಗವನ್ನು ಹರಡುವ ಸಾಧ್ಯತೆ ಇದೆ ಎನ್ನುವ ಭೀತಿಯಲ್ಲಿ ಈಗ ಬಗ್ವಾಡಿಯ ಗ್ರಾಮಸ್ಥರೆಲ್ಲ ಒಗ್ಗೂಡಿ, ತಮ್ಮ ಊರಿಗೆ ಯಾರು ಬರದಂತೆ ” ಕೋವಿಡ್ 19 ಜಾಗೃತಿ ತಾತ್ಕಲಿಕ ಪ್ರವೇಶ ನಿಷೇಧ ಸಹಕರಿಸಿ, ಬಗ್ವಾಡಿ ಗ್ರಾಮಸ್ಥರು’ ಎನ್ನುವುದಾಗಿ ಊರಿಗೆ ಪ್ರವೇಶವಾಗುವ ದಾರಿಯಲ್ಲಿ ಬೋರ್ಡ್ ಹಾಕಲಾಗಿದೆ. ಜತೆಗೆ ಯಾರೂ ಪ್ರವೇಶಿಸದಂತೆ ಹಾಗೂ ಊರಿಂದ ಕೋವಿಡ್ 19 ಭೀತಿ ಕಡಿಮೆಯಾಗುವವರೆಗೆ ಹೊರ ಹೊಗದಂತೆ ಗೇಟು ಕೂಡ ಹಾಕಲಾಗಿದೆ.
ಸಾಂಕ್ರಮಿಕ ರೋಗವಾದ ಕೋವಿಡ್ 19 ಹೆಮ್ಮಾರಿಯ ಕುರಿತಂತೆ ಜನರು ಜಾಗೃತರಾಗುತ್ತಿದ್ದು, ಅದರಲ್ಲೂ ಗ್ರಾಮೀಣ ಭಾಗದಲ್ಲಂತೂ ಜನ ಎಚ್ಚೆತ್ತುಕೊಂಡಿದ್ದಾರೆ ಅನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.