Advertisement

ಕುಂದಾಪುರ –ಬೈಂದೂರು: ಬಜೆಟ್‌ನಲ್ಲಿ ಸಿಕ್ಕಿದ್ದೇನು?

01:58 AM Mar 05, 2022 | Team Udayavani |

ಕುಂದಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್‌ ಮಾ. 4 ರಂದು ಮಂಡಿಸಿದ್ದು, ಮೀನುಗಾರಿಕೆ, ಕೃಷಿ, ಪ್ರವಾಸೋದ್ಯಮ ಸಹಿತ ಹಲವುಕ್ಷೇತ್ರಗಳ ವಿವಿಧ ಯೋಜನೆ, ಕಾಮಗಾರಿ
ಗಳನ್ನು ಘೋಷಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಿಗೆ ಏನೆಲ್ಲ ಕೊಡುಗೆ ನೀಡಿದ್ದಾರೆ ಎನ್ನುವುದರ ಮಾಹಿತಿ ಇಲ್ಲಿದೆ.

Advertisement

ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಸಾವಿರಾರು ಮಂದಿ ಮೀನುಗಾರಿಕೆ ವೃತ್ತಿಯನ್ನೇ ಆಶ್ರಯಿಸಿದ್ದು, ಈ ಬಾರಿಯ ಬಜೆಟ್‌ನಲ್ಲೂ ಮೀನುಗಾರಿಕೆಗೆ ಬಹುಪಾಲು ಕೊಡುಗೆ ನೀಡಲಾಗಿದೆ. ಉಳಿದ ಕ್ಷೇತ್ರಗಳಿಗೆ ಅಂತಹ ದೊಡ್ಡ ಯೋಜನೆಯೇನು ಘೋಷಣೆಯಾಗಿಲ್ಲ. ಕೆಲವೊಂದಷ್ಟು ಬೇಡಿಕೆಗಳಿದ್ದರೂ ಈ ಬಾರಿಯೂ ಈಡೇರಿಲ್ಲ.

5 ಸಾವಿರ ಮನೆ
ಪ್ರಸಕ್ತ ಸಾಲಿನಲ್ಲಿ ರಾಜ್ಯದ 5 ಸಾವಿರ ವಸತಿ ಮೀನುಗಾರರಿಗೆ ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಆದ್ಯತೆ ನೆಲೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಿಸಲಾಗಿದೆ.

ಬಂದರು ಹೂಳೆತ್ತುವಿಕೆ
ರಾಜ್ಯದ 8 ಮೀನುಗಾರಿಕೆ ಬಂದರುಗಳಲ್ಲಿ ಮೀನುಗಾರಿಕಾ ದೋಣಿಗಳು ಸುಗಮವಾಗಿ ಚಲಿಸಲು ಅನುಕೂಲ
ವಾಗುವಂತೆ ನ್ಯಾವಿಗೇಷನ್‌ ಚಾನೆಲ್‌ಗಳಲ್ಲಿ ಹಂತ- ಹಂತವಾಗಿ ಹೂಳೆತ್ತಲಾಗುವ ಬಗ್ಗೆ ಪ್ರಸ್ತಾವಿಸಲಾಗಿದೆ. ಕುಂದಾಪುರದ ಗಂಗೊಳ್ಳಿ ಬಂದರಿನಲ್ಲಿ ಬಹಳಷ್ಟು ವರ್ಷಗಳಿಂದ ಹೂಳೆತ್ತದೇ ಬೋಟ್‌ಗಳ ಸಂಚಾರಕ್ಕೆ ತೊಡಕಾಗಿದೆ. ಗಂಗೊಳ್ಳಿ ಬಂದರನ್ನು ಸಹ ಹೂಳೆತ್ತುವ ಯೋಜನೆಯಲ್ಲಿ ಸೇರಿಸಿದರೆ ಅನುಕೂಲ.

ಮತ್ಸ್ಯ ಸಿರಿ
ಮೀನುಗಾರರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಸರಕಾರವು 100 ಆಳ ಸಮುದ್ರ ಬೋಟ್‌ಗಳಿಗೆ ಕೇಂದ್ರದ ಪ್ರಧಾನ ಮಂತ್ರಿ “ಮತ್ಸ್ಯ ಸಂಪದ’ ಯೋಜನೆಯೊಂದಿಗೆ ರಾಜ್ಯದಲ್ಲಿ ಮೊದಲ ಬಾರಿಗೆ “ಮತ್ಸ್ಯಸಿರಿ’ ವಿಶೇಷ ಯೋಜನೆ ಘೋಷಿಸಿದೆ. ಇದು ಗಂಗೊಳ್ಳಿ, ಉಪ್ಪುಂದ, ಬೈಂದೂರು ಭಾಗದ ಆಳ ಸಮುದ್ರ ಮೀನುಗಾರರಿಗೆ ವರದಾನವಾಗಲಿದೆ.

Advertisement

ವಿಶಿಷ್ಟ ಮೀನು – ಚಿಪ್ಪು ಉತ್ಪಾದನೆ
300 ಕಿ.ಮೀ.ಗೂ ಹೆಚ್ಚು ಉದ್ದದ ಕರಾವಳಿ ತೀರವನ್ನು ಹೊಂದಿರುವ ರಾಜ್ಯದಲ್ಲಿ ಬಹುತೇಕ ಮೀನು ಉತ್ಪಾದನೆ ತೀರ ಸಮೀಪದ ನೀರಿನಲ್ಲಿಯೇ ಆಗುತ್ತಿದೆ. ಆಳಸಮುದ್ರ ಮೀನುಗಾರಿಕೆಯಲ್ಲಿ ಸಾಮರ್ಥ್ಯ ವೃದ್ಧಿಗೆ ಅವಕಾಶವಿದ್ದು, ಆನಿಟ್ಟಿನಲ್ಲಿ ಆಳ ಸಮುದ್ರ ಮೀನುಗಾರಿಕೆ ಯನ್ನು ಇನ್ನಷ್ಟು ಪ್ರಚುರಪಡಿಸಿ, ವಿಶಿಷ್ಟ ತಳಿಗಳ ಮೀನು ಹಾಗೂ ಚಿಪ್ಪು ಮೀನುಗಳ ಉತ್ಪಾದನೆಗೆ ಒತ್ತು ಕೊಡುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಬಂದರು ಅಭಿವೃದ್ಧಿ
ರಾಜ್ಯದ ಕರಾವಳಿ ಪ್ರದೇಶದಲ್ಲಿ ಬಂದರು ಅಭಿವೃದ್ಧಿ ಹಾಗೂ ಕಡಲತೀರದ ವ್ಯಾಪಾರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಅಂದಾಜು 1,880 ಕೋ.ರೂ. ವೆಚ್ಚದ 24 ಯೋಜನೆಗಳನ್ನು ಕೇಂದ್ರದ ಸಾಗರಮಾಲಾ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಪೈಕಿ ಬೈಂದೂರು ಕ್ಷೇತ್ರದ ಒಂದು ಬಂದರು, ಮಲ್ಪೆಯಲ್ಲಿ ವಿವಿದೋದ್ದೇಶ ಬಂದರುಗಳನ್ನಾಗಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿ ತಯಾರಿಗೆ ಸರಕಾರ ಮುಂದಾಗಿದೆ.

ಉಪ್ಪು ನೀರು ತಡೆಗೋಡೆ
ಕರಾವಳಿ ಪ್ರದೇಶದಲ್ಲಿ ನದಿಗಳ ಪ್ರವಾಹ ಹಾಗೂ ಉಬ್ಬರ ಇಳಿತದ ವೇಳೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಯಲು ಖಾರ್‌ಲ್ಯಾಂಡ್‌ ಯೋಜನೆಯಡಿ 1,500 ಕೋ.ರೂ. ಅಂದಾಜು ಮೊತ್ತದ ಮಾಸ್ಟರ್‌ ಪ್ಲಾನ್‌ಗೆ ಒಪ್ಪಿಗೆ ನೀಡಲಾಗಿದೆ. ಈಗಾಗಲೇ ಉ.ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದು, ಈ ಸಾಲಿನಲ್ಲಿ ಉಡುಪಿ, ದ.ಕ. ಜಿಲ್ಲೆಗಳಲ್ಲಿಯೂ ಕಾರ್ಯಗತಕ್ಕೆ ಬರಲಿದೆ. ಇದರಿಂದ ಕುಂದಾಪುರ, ಬೈಂದೂರಿನ ಉಪ್ಪಿನಕುದ್ರು, ಹೆಮ್ಮಾಡಿಯ ಜಾಲಾಡಿ, ಹೊಸ್ಕಳಿ, ಕನ್ನಡಕುದ್ರು, ಕಟ್ಟು, ಗಂಗೊಳ್ಳಿ ಮತ್ತಿತರ ಭಾಗಗಳಿಗೆ ಪ್ರಯೋಜನವಾಗಲಿದೆ.

ಕಿಂಡಿ ಅಣೆಕಟ್ಟು
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸಿ ಸಮುದ್ರಕ್ಕೆ ಸೇರುವ ನೀರನ್ನು ತಡೆದು ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಉಪಯೋಗಿ ಸಲು ಉದ್ದೇಶಿಸಿರುವ ಪಶ್ಚಿಮ ವಾಹಿನಿ ಯೋಜನೆಯಡಿ ಮೊದಲನೇ ಹಂತದ ಕಾಮ ಗಾರಿಗಾಗಿ500 ಕೋ. ರೂ. ಅಂದಾಜು ಮೊತ್ತ ಮೀಸಲಿರಿಸಲು ಸರಕಾರ ನಿರ್ಧರಿಸಿದೆ. ಕುಂದಾಪುರ,ಬೈಂದೂರು ಭಾಗದಲ್ಲೂ ಸಾಕಷ್ಟು ಕಿಂಡಿ ಅಣೆಕಟ್ಟುಗಳ ಬೇಡಿಕೆಯಿದ್ದು,ಅನುಕೂಲವಾಗಲಿದೆ.

ಕೆಲವೊಂದು ನಿರೀಕ್ಷೆ ಹುಸಿ: ಇನ್ನು ಕುಂದಾಪುರಕ್ಕೆ ಈ ಬಾರಿಯಾದರೂ ಪ್ರಾದೇಶಿಕ ಸಾರಿಗೆ ಕಚೇರಿ ಘೋಷಣೆಯಾಗಬಹುದು ಎನ್ನುವ ನಿರೀಕ್ಷೆ ಮತ್ತೂಮ್ಮೆ ಹುಸಿಯಾಗಿದೆ. ಶಂಕರನಾರಾಯಣ ತಾಲೂಕು, ಹೋಬಳಿ ಬೇಡಿಕೆ, ಬೈಂದೂರು ಆಸ್ಪತ್ರೆ ಮೇಲ್ದರ್ಜೆ ಬೇಡಿಕೆಗಳೆಲ್ಲವೂ ಈ ಬಾರಿಯೂ ಈಡೇರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next