ಕೊಲ್ಲೂರು: ನಾವು ವಿದೇಶಗಳ ಕುರಿತು ಸಾಕಷ್ಟು ಮಾತನಾಡುತ್ತೇವೆ. ನಮ್ಮದೇ ಊರಿನ ವಿಶೇಷ, ಘಟನೆಗಳು ನಮ್ಮ ಅರಿವಿಗೆ ಬರುವುದಿಲ್ಲ. “ಉದಯವಾಣಿ ಸುದಿನ’ದ ಮೂಲಕ ನಾವು ಸ್ಥಳೀಯ ಮಾಹಿತಿಗಳನ್ನು ಪಡೆಯಬಹುದು. “ಉದಯವಾಣಿ’ ಇಂತಹ ಸಾಕಷ್ಟು ಪ್ರಯೋಗಗಳನ್ನು ಮಾಡಿ ಜನಮನದಲ್ಲಿ ನೆಲೆಸಿದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅವರು ಹೇಳಿದರು.
ಅವರು ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ “ಉದಯವಾಣಿ’ಯ ಕುಂದಾಪುರ, ಬೈಂದೂರು “ಸುದಿನ’ ಸಂಚಿಕೆ ಮತ್ತು ಸುದಿನ “ಪಂಚಗಂಗಾವಳಿ’ ವಿಶೇಷ ಸಂಚಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. “ಸುದಿನ’ದಿಂದ ವಿಶೇಷ ವಿಷಯ ಗಳನ್ನು ಅರಿಯುವುದರ ಜತೆಗೆ ಪ್ರತಿಭೆ ಗಳಿಗೆ, ಜನರ ಅಭಿಲಾಷೆಗಳ ಅಭಿ ವ್ಯಕ್ತಿಗೆ ವೇದಿಕೆ ಸಿಕ್ಕಂತಾಗಿದೆ ಎಂದರು.
ಕ್ಷೇತ್ರದ ಪ್ರಧಾನ ಅರ್ಚಕ ಎನ್. ನರಸಿಂಹ ಅಡಿಗ ಮಾತನಾಡಿ, “ಉದಯವಾಣಿ’ ಪತ್ರಿಕೆ ಆರಂಭವಾಗಿ 50 ವರ್ಷಗಳಾಗಿದ್ದು, ಉಡುಪಿ ಜಿಲ್ಲೆಗಾಗಿ “ಸುದಿನ’ ಹೊರತರುತ್ತಿರುವುದು ಸಂತಸ ತಂದಿದೆ. ದೇವಿಯ ಸನ್ನಿಧಿಯಲ್ಲಿ ಬಿಡುಗಡೆಯಾದ ಸಂಚಿಕೆಯ ಜತೆಗೆ “ಉದಯವಾಣಿ’ಗೂ ಶ್ರೇಯಸ್ಸಾಗಲಿ ಎಂದು ಹಾರೈಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, “ಉದಯವಾಣಿ’ ಪತ್ರಿಕೆ ಸುದ್ದಿಯಷ್ಟೇ ನೀಡುವುದಲ್ಲ. “ಜಲವೇ ಜೀವನ’ ದಂತಹ ಅಭಿಯಾನಗಳನ್ನೂ ನಡೆಸುವ ಮೂಲಕ ಜನರ ಜೀವನಾಡಿಯಾಗಿದೆ. ಮಾಧ್ಯಮ ಇಂದು ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ ಎಂಬ ಅಪವಾದದ ನಡುವೆಯೇ ವಿಶ್ವಾಸಾರ್ಹತೆಯ ಜತೆಗೆ ಸ್ವಂತಿಕೆ ಬೆಳೆಸಿಕೊಂಡ ಪತ್ರಿಕೆ “ಉದಯವಾಣಿ’ ಎಂದರು.
ದೇಗುಲದ ಟ್ರಸ್ಟಿ ರಮೇಶ್ ಗಾಣಿಗ, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ.ನ ಸಿಇಒ ವಿನೋದ್ ಕುಮಾರ್, ಸಂಪಾದಕ ಅರವಿಂದ ನಾವಡ, ವ್ಯಾಪಾರ ಅಭಿವೃದ್ಧಿ ವಿಭಾಗದ ಡಿಜಿಎಂ ಸತೀಶ್ ಶೆಣೈ, ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್, ಸಿಇಒ ಅವರ ಕಾರ್ಯನಿರ್ವಾಹಕ ಸಹಾಯಕ ಅಧಿಕಾರಿ ಹರೀಶ ಭಟ್, ಉಡುಪಿ ಜಾಹೀರಾತು ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಭಟ್, ಪ್ರಸರಣ ಅಧಿಕಾರಿಗಳಾದ ಅಜಿತ್ ಭಂಡಾರಿ, ಪ್ರಕಾಶ್, ಸುದ್ದಿ ಸಂಪಾದಕ ರಾಜೇಶ್ ಮೂಲ್ಕಿ, ವರದಿಗಾರರಾದ ಲಕ್ಷ್ಮೀ ಮಚ್ಚಿನ, ಪ್ರಶಾಂತ್ ಪಾದೆ ಉಪಸ್ಥಿತರಿದ್ದರು.