Advertisement
ಕುಂದಾಪುರ: ತೀರಾ ಈಚೆಗೆ ನಡೆದ ಉದ್ಯಮಿಯೊಬ್ಬರ ಆತ್ಮಹತ್ಯೆ ಪ್ರಕರಣ ಘಟನೆ ಅನೇಕರನ್ನು ಕಳವಳಗೊಳಿಸಿತ್ತು. ಹೆದ್ದಾರಿ ಬದಿ ಬೀದಿದೀಪ ಇಲ್ಲದಿರುವುದು, ಸೇತುವೆ ಬಳಿ ದೀಪ ಇಲ್ಲದಿರುವುದು, ಸೇತುವೆ ಬಳಿ ಹೆದ್ದಾರಿ ಬದಿ ಸಿಸಿ ಕೆಮರಾಗಳಿದ್ದರೆ ಒಂದಷ್ಟು ಅನಾಹುತ ತಡೆಯಬಹುದಿತ್ತು ಎಂಬ ಚರ್ಚೆ ನಡೆಯಿತು.
Related Articles
Advertisement
ಪುರಸಭೆ ವ್ಯಾಪ್ತಿ
ಕುಂದಾಪುರ ನಗರದ ಪುರಸಭೆ ವ್ಯಾಪ್ತಿಯಲ್ಲಿ ಹೆದ್ದಾರಿ ಕಾಮಗಾರಿಯೇ ನಡೆದಿಲ್ಲ. ಫ್ಲೈಓವರ್‌ಮತ್ತು ಬಸ್ರೂರು ಮೂರುಕೈ ಅಂಡರ್‌ಪಾಸ್ ಕಾಮಗಾರಿ ಅರೆಬರೆ ಸ್ಥಿತಿಯಲ್ಲಿದೆ. ಇದಕ್ಕಾಗಿ ಹೆದ್ದಾರಿಯನ್ನೇ ಬದಿಗೊತ್ತಿ ಸರ್ವಿಸ್ ರಸ್ತೆಯನ್ನೇ ಹೆದ್ದಾರಿಯನ್ನಾಗಿಸಲಾಗಿದೆ. ಇಲ್ಲಿ ಸೂಕ್ತ ಬೆಳಕು, ಜಾಗ ಇಲ್ಲದೇ ಈಚೆಗೆ ಲಾರಿಯೊಂದು ರಸ್ತೆ ಬಿಟ್ಟು ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಬಿದ್ದಿತ್ತು.
ಶಾಸ್ತ್ರಿ ಪಾರ್ಕ್ ಬಳಿ ದೊಡ್ಡದಾದ ಹೈಮಾಸ್ಟ್ ದೀಪ ಇದೆ. ಆದರೆ ಬೈಂದೂರು ಕಡೆಯಿಂದ ಬರುವ ವಾಹನಗಳು ಹೋಗುವ ಸರ್ವಿಸ್ ರಸ್ತೆಗೆ ಈ ಬೆಳಕು ಬೀಳುತ್ತಿಲ್ಲ. ಫ್ಲೈಓವರ್ ಅಡ್ಡ ಇದೆ. ಇಲ್ಲಿ ಜನ ಬಸ್ಸೇರಲು ಕೂಡಾ ಕಾಯುತ್ತಿರುತ್ತಾರೆ. ಇದಕ್ಕಾಗಿ ಖಾಸಗಿ ಕಟ್ಟಡದ ಬೆಳಕು ಆಶ್ರಯಿಸುವುದು ಅನಿವಾರ್ಯ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಸರ್ವಿಸ್ ರಸ್ತೆಗಳು ಮುಗಿಯುತ್ತವೆ. ದೊಡ್ಡ ಗಾತ್ರದ ಹೊಂಡಗಳ ಮಧ್ಯೆ ಇಲ್ಲಿಂದ ಹೆದ್ದಾರಿ ಪ್ರಾರಂಭವಾಗುತ್ತದೆ. ಇಲ್ಲಿ ಒಂದಷ್ಟು ಸಂಚಾರದ ಗೊಂದಲಗಳೂ ಇವೆ. ಇಲ್ಲೂ ಅಸಮರ್ಪಕ ಬೀದಿದೀಪಗಳು.
ಸರ್ವಿಸ್ ರಸ್ತೆ
ಕುಂದಾಪುರದಿಂದ ವಿನಾಯಕ ಚಿತ್ರ ಮಂದಿರ ದವರೆಗೆ ಈಗ ಸರ್ವಿಸ್ ರಸ್ತೆಯೇ ಹೆದ್ದಾರಿ ಯಾಗಿದ್ದು, ಇಲ್ಲಂತೂ ಬೆಳಕಿನ ವ್ಯವಸ್ಥೆಯೇ ಇಲ್ಲ. ಇನ್ನು ಹಂಗಳೂರಿನಿಂದ ದುರ್ಗಾಂಬಾ ಬಸ್ಸಿನ ಸರ್ವಿಸ್ ಸೆಂಟರ್‌ವರೆಗೆ ಸಹ ಹೆದ್ದಾರಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿಲ್ಲ. ಹೆಡ್‌ಲೈಟ್ ಕೈ ಕೊಟ್ಟರೆ ಅಪಾಯ ಮೈಮೇಲೆ ಎಳೆದುಕೊಂಡಂತೆ.
ಬೀಜಾಡಿವರೆಗೆ…
ಅಲ್ಲಿಂದ ಕೋಟೇಶ್ವರ ವರೆಗೆ ಬೆಳಕಿದ್ದು, ಅದರ ಬಳಿಕ ಸ್ವಲ್ಪ ದೂರ ಮತ್ತೆ ಬೆಳಕಿಲ್ಲ. ಕೋಟೇಶ್ವರ ಮೇಲ್ಸೇತುವೆಯಲ್ಲಿ ಬೆಳಕಿನ ವ್ಯವಸ್ಥೆಯಿದೆ. ಆದರೆ ಸೇತುವೆಯ ಕೆಳಭಾಗದ ಸರ್ವಿಸ್ ರಸ್ತೆಯಲ್ಲಿ ಮಾತ್ರ ಬೀದಿದೀಪಗಳಿಲ್ಲ. ಇನ್ನು ಮೇಲ್ಸೇತುವೆ ಮುಗಿದ ಬಳಿಕ ಬೀಜಾಡಿ ಕ್ರಾಸ್‌ವರೆಗೆ ಮತ್ತೆ ವಿದ್ಯುತ್ ದೀಪಗಳಿಲ್ಲ.
ಸಂಪರ್ಕ ಇಲ್ಲ
ಶಿರೂರು, ಶಿರೂರು ಪೇಟೆ, ಬೈಂದೂರು, ಯಡ್ತರೆ ಕ್ರಾಸ್, ಉಪ್ಪುಂದ, ನಾಯ್ಕನಕಟ್ಟೆ, ನಾಗೂರು, ಕಿರಿಮಂಜೇಶ್ವರ, ನಾವುಂದ, ತ್ರಾಸಿ, ಮುಳ್ಳಿಕಟ್ಟೆಯಲ್ಲಿ ಬೀದಿದೀಪ ಅಳವಡಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕವೇ ಕೊಡಲಿಲ್ಲ. ಹೆದ್ದಾರಿ ಕಾಮಗಾರಿ ಪೂರ್ಣವಾಗದ ಹೊರತು ಇದಕ್ಕಾಗಿ ಒತ್ತಾಯಿಸುವಂತೆಯೂ ಇಲ್ಲ ಎಂಬ ಸ್ಥಿತಿಗೆ ಬಂದಿದೆ. ಏಕೆಂದರೆ ಕುಂದಾಪುರ ನಗರದಲ್ಲಿ ಗುತ್ತಿಗೆ ವಹಿಸಿಕೊಂಡ ನವಯುಗ ಸಂಸ್ಥೆಯ ಸಮಸ್ಯೆಯಾದರೆ ಕುಂದಾಪುರದಿಂದ ಬೈಂದೂರು ಕಡೆಗೆ ಗುತ್ತಿಗೆ ವಹಿಸಿದ ಐಆರ್‌ಬಿ ಸಂಸ್ಥೆ ಕಾರಣವಾಗುತ್ತಿದೆ. ಕುಂಟುತ್ತಾ ಸಾಗಿದ ಕಾಮಗಾರಿಯೇ ಇಲ್ಲಿ ಒಂದಷ್ಟು ಅನಾಹುತಗಳಿಗೆ ಕಾರಣವಾಗುತ್ತಿದೆ.
ಅನಧಿಕೃತ ನಿಲುಗಡೆ
ಹೆದ್ದಾರಿ ಬದಿ ಘನವಾಹನಗಳು ಅನಧಿಕೃತ ಠಿಕಾಣಿ ಹೂಡುತ್ತಿರುವ ಕಾರಣ ದೀಪವಿಲ್ಲದೇ ತೊಂದರೆಯಾಗುತ್ತಿದೆ. ಇಂತಹ ತಾಣಗಳು ಅನೈತಿಕ ಚಟುವಟಿಕೆಗಳ ಅಡ್ಡೆಯಾಗಬಾರದು ಎಂಬ ಕಳಕಳಿ ಈ ಬೀದಿದೀಪ ಬೇಕು ಎನ್ನುವ ಕೂಗಿನ ಹಿಂದೆ ಇದೆ. ಜತೆಗೆ ಇಂತಹ ಅನಧಿಕೃತ ಪಾರ್ಕಿಂಗ್ ಅಪಘಾತಗಳಿಗೂ ಕಾರಣವಾಗುತ್ತದೆ. ಮರವಂತೆಯಂತಹ ಪ್ರವಾಸಿ ತಾಣದಲ್ಲಿ ಬೀದಿದೀಪಗಳಿಲ್ಲದಿದ್ದರೆ ಕಡಲಬ್ಬರ, ಕೊರೆಯುವ ಗಾಳಿ, ಸೇರುವ ಪ್ರವಾಸಿಗರು, ಒಂದಷ್ಟು ವಾಹನಗಳು, ಅವರ ಮಧ್ಯೆ ನುಸುಳುವ ಪುಂಡ ಪೋಕರಿಗಳು … ಪೊಲೀಸರಿಗೆ ಸವಾಲೇ ಸರಿ.
– ಲಕ್ಷ್ಮೀ ಮಚ್ಚಿನ – ಪ್ರಶಾಂತ್ ಪಾದೆ
– ಟಿ ಲೋಕೇಶ್ ಆಚಾರ್ಯ ತೆಕ್ಕಟ್ಟೆ