Advertisement

ಕುಂದಾಪುರ: ಬಸ್‌ ನಿಲ್ದಾಣದಲ್ಲಿ ನಾಣ್ಯ ನೀರು ಘಟಕ

05:29 PM Dec 28, 2018 | |

ಕುಂದಾಪುರ:  ಕೆಎಸ್‌ಆರ್‌ಟಿಸಿ ಕುಂದಾಪುರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಾಣ್ಯ ಹಾಕಿ ಶುದ್ಧ ಕುಡಿಯುವ ನೀರು ಪಡೆಯುವ ಘಟಕ ಸ್ಥಾಪಿಸಿದ್ದು ಕೆಲವೇ ದಿನಗಳಲ್ಲಿ ಗ್ರಾಹಕರ ಉಪಯೋಗಕ್ಕೆ ಲಭ್ಯವಾಗಲಿದೆ. 

Advertisement

ಶೀಘ್ರ ಲೋಕಾರ್ಪಣೆ
ಕುಂದಾಪುರ ಬಸ್‌ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಕೆಎಸ್‌ಆರ್‌ಟಿಸಿ ಹಾಗೂ ಬಿಪಿಸಿಎಲ್‌ನ ಸಮುದಾಯ ಅಭಿವೃದ್ಧಿ ವಿಭಾಗದ ಜಂಟಿ ಸಹಯೋಗದಲ್ಲಿ ಈ ಘಟಕದ ಅಳವಡಿಕೆ ನಡೆದಿದೆ.  ರಾಜ್ಯದ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಅಳವಡಿಕೆಯಾಗಲಿದೆ. ಪ್ರಾಯೋಗಿಕ ಹಂತದಲ್ಲಿ ಘಟಕದಲ್ಲಿ ತುಸು ತಾಂತ್ರಿಕ ದೋಷ ಕಂಡು ಬಂದಿದ್ದು,  ಚೆನ್ನೈಯಿಂದ ತಂತ್ರಜ್ಞರು ಆಗಮಿಸಿ ರಿಪೇರಿ ಬಳಿಕ ಘಟಕ ಲೋಕಾರ್ಪಣೆಗೊಳ್ಳಲಿದೆ.
 
ಶುದ್ಧ ನೀರು
ಘಟಕದಲ್ಲಿ ಐದು ಹಂತಗಳಲ್ಲಿ ನೀರು ಶುದ್ಧಗೊಳ್ಳಲಿದೆ. ಆದರೆ ಇದಕ್ಕೆ ನಿರಂತರ ನೀರು ಸರಬರಾಜು ಹಾಗೂ ವಿದ್ಯುತ್‌ ಬೇಕು. ರಾಜ್ಯದ ಕೆಲವೆಡೆ ಘಟಕಗಳು ಪ್ರಾಯೋಗಿಕವಾಗಿ ಆರಂಭವಾಗಿದ್ದು ಅಲ್ಲಿ ನಾಣ್ಯ ಹಾಕಿದಾಗ ಅಸಮರ್ಪಕ ಪ್ರಮಾಣದ ನೀರು ಬರುತ್ತಿದೆ. ಆದ್ದರಿಂದ ಅಂತಹ ಲೋಪಗಳು ಇಲ್ಲಿ ಆಗದಂತೆ ಮುತುವರ್ಜಿ ವಹಿಸಬೇಕಿದೆ.  ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಸೇರಿದಂತೆ ಅಂತಾರಾಜ್ಯ ಸಾರಿಗೆ ಹಾಗೂ ರಾಜ್ಯದೊಳಗಿನ ಸಂಚಾರದ ಬಸ್‌ಗಳು, ಪ್ರಯಾಣಿಕರು ಆಗಮಿಸುವ ನಿಲ್ದಾಣವಾಗಿ ಗುರುತಿಸಿಕೊಂಡಿರುವ ಕುಂದಾಪುರ ನಿಲ್ದಾಣಕ್ಕೆ ಇಂತಹ ಘಟಕ ಅಗತ್ಯವಾಗಿದೆ.

ನಾಣ್ಯ ಹಾಕಿದರೆ ನೀರು
ನಾಣ್ಯ ಹಾಕಿ ತೂಕ ನೋಡುವ, ನಾಣ್ಯ ಹಾಕಿ ದೂರವಾಣಿ ಕರೆ ಮಾಡುವ ಮಾದರಿಯಲ್ಲೇ ನಾಣ್ಯ ಹಾಕಿ ನೀರು ಪಡೆಯುವ ಯಂತ್ರ ಇದಾಗಿದೆ. ಇದರಲ್ಲಿ ಸಂಗ್ರಹಗೊಂಡ ಹಣವನ್ನು ಕೆಎಸ್‌ಆರ್‌ಟಿಸಿ ಅದರ ನಿರ್ವಹಣೆಗಾಗಿ ಬಳಸಿಕೊಳ್ಳಲಿದೆ. ಘಟಕದಲ್ಲಿ 2 ರೂ.ಗೆ 1 ಲೀ. ಶುದ್ಧ ನೀರು ಹಾಗೂ 1 ರೂ.ಗೆ ಅರ್ಧ ಲೀ. ಶುದ್ಧ ನೀರು ಲಭಿಸಲಿದೆ. ಬಾಟಲ್‌ ಇದ್ದರೆ ನಾಣ್ಯ ಹಾಕಿ ನೀರು ತುಂಬಿಸಿಕೊಳ್ಳಲು ಅನುಕೂಲವಿದೆ.  

ಶೀಘ್ರ ಲೋಕಾರ್ಪಣೆ
ಕುಂದಾಪುರ ಬಸ್‌ ನಿಲ್ದಾಣದಲ್ಲಿ ನೂತನವಾಗಿ ಅಳವಡಿಸಿದ ನೀರಿನ ಘಟಕದಲ್ಲಿ ಸಣ್ಣ ತಾಂತ್ರಿಕ ದೋಷವಿದೆ. ಸಮರ್ಪಕವಾಗಿ ಕಾರ್ಯಾರಂಭಿಸಿದ ನಂತರ ಲೋಕಾರ್ಪಣೆಯಾಗಲಿದೆ. ಬಸ್‌ ನಿಲ್ದಾಣದಲ್ಲಿ ಹೊಸದಾಗಿ ಮಹಿಳಾ ವಿಶ್ರಾಂತಿ ಕೊಠಡಿ ಕಾಮಗಾರಿ ನಡೆದಿದೆ. ಇದು ಕೂಡಾ ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ.
– ರಾಜೇಶ್‌,
ಡಿಪೋ ಮೆನೇಜರ್‌ ಕೆಎಸ್‌ಆರ್‌ಟಿಸಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next