ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪೋಲಾಗುವ ನೀರನ್ನು ಬಳಸುವ, ಉಳಿಸುವ ಮೂಲಕ ಪಠ್ಯಶಿಕ್ಷಣದ ಜತೆಗೆ ಜಲಶಿಕ್ಷಣವನ್ನೂ ನೀಡಲಾಗುತ್ತಿದೆ. ಈ ಮೂಲಕ ಕಾಲೇಜು ಶಿಕ್ಷಣದೊಂದಿಗೆ ನೀರು ಉಳಿಸುವ ಪಾಠ, ಪ್ರಯೋಗವನ್ನೂ ಮಾಡಿ ತೋರಿಸಲಾಗಿದೆ.
ಎರಡನೇ ವರ್ಷ
ಪದವಿಯಲ್ಲಿ ಒಟ್ಟು 2350 ಮತ್ತು ಪ.ಪೂ. ಕಾಲೇಜಿನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ ಕಳೆದ ವರ್ಷದಿಂದ ನೀರಿಂಗಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ವರ್ಷ ಎರಡನೇ ಮಳೆಗಾಲವಾಗಿದ್ದು ನೀರಿಂಗಿಸುವಿಕೆ ನಡೆಯುತ್ತಿದೆ.
ನೀರಿಂಗಿಸುವ ಮಾದರಿ
ಕಾಲೇಜು ಕಟ್ಟಡ ಸಂಕೀರ್ಣದ ನಡುವೆ ಮಾಧವ ಮಂಟಪ ಎದುರು 200 ಮೀ. ಓಟದ ಟ್ರಾಕ್‌ನ ವಿಶಾಲ ಮೈದಾನವಿದೆ. ಇಲ್ಲಿ ಮೈದಾನದಲ್ಲಿ ಹರಿಯುವ ನೀರನ್ನು ಪೋಲಾಗಲು ಬಿಡದೇ, ಚರಂಡಿ ಸೇರಲು ಬಿಡದೇ ಪೈಪ್ ಮೂಲಕ ಸಂಗ್ರಹಿಸಲಾಗುತ್ತದೆ. ಜತೆಗೆ ಕಟ್ಟಡವೊಂದರಿಂದ ಸಂಗ್ರಹವಾಗುವ ನೀರನ್ನೂ ಇದಕ್ಕೆ ಸೇರಿಸಲಾಗುತ್ತದೆ. ಆ ನೀರನ್ನು ಕಸಕಡ್ಡಿ ಸೇರದಂತೆ ಮಾಡಿ 4 ಅಡಿ ಅಗಲ, 8 ಅಡಿ ಆಳದ ರಿಂಗ್ ಅಳವಡಿಸಿದ ಬಾವಿಗೆ ಬಿಡಲಾಗಿದೆ. ಅಲ್ಲಿ ಸಂಗ್ರಹವಾದ ನೀರನ್ನು 10 ಅಡಿ ಅಗಲ, 15 ಅಡಿ ಆಳದ ಬಾವಿಗೆ ಬಿಡಲಾಗುತ್ತದೆ. ಸುಮಾರು 15 ಸಾವಿರ ಲೀ. ನೀರು ಭೂಮಿಗೆ ಇಂಗುತ್ತದೆ ಎನ್ನುವುದು ಒಂದು ಅಂದಾಜು. ಇದರ ನಿರ್ಮಾಣದ ಹಿಂದಿನ ಆಸಕ್ತಿ ಡಾ| ನಾರಾಯಣ ಸ್ವಾಮಿ ಅವರು. ಪ್ರೇರಕ ಶಕ್ತಿ ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ ಅವರು.
ಹಸಿರಿನೆಡೆಗೆ
ಕಾಲೇಜು ಆಡಳಿತ ಮಂಡಳಿ ಹಸಿರಿನೆಡೆಗೆ ನಡಿಗೆ ಎನ್ನುವ ತತ್ವದಲ್ಲಿ ವಿಶ್ವಾಸವಿಟ್ಟಿದೆ. ಆದ್ದರಿಂದ ಕಳೆದ ವರ್ಷ ಸುಮಾರು 76 ಲಕ್ಷ ರೂ. ವ್ಯಯಿಸಿ ಸೋಲರ್ ಅಳವಡಿಸಲಾಗಿದೆ. ಕಾಲೇಜಿಗೆ 120 ಕೆವಿ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಇದ್ದು ಮೆಸ್ಕಾಂ ಸಂಪರ್ಕವಿದೆ. 110 ಕೆವಿ ಸಾಮರ್ಥ್ಯದ ಸೋಲಾರ್ ಅಳವಡಿಸಿದ್ದು ಕಾಲೇಜಿನ ಅವಶ್ಯಕತೆಯ ಶೇ.70ರಷ್ಟು ಸೂರ್ಯನ ಇಂಧನವೇ ಸಾಕಾಗುತ್ತದೆ. ಕಾಗದ ಪತ್ರಗಳ ಬಳಕೆ ಕಡಿಮೆಗೊಳಿಸಿ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ.