ಮುಂಬಯಿ, ಆ. 4: ಕುಂದಾಪುರ ಪರಿಸರದ ಹಾಗೂ ಸುತ್ತಮುತ್ತಲಿನಲ್ಲಿ ಮಾತನಾಡುವ ವಿಶಿಷ್ಟವಾದ ಕನ್ನಡ ಭಾಷೆಯ ಕುಂದಾಪ್ರ ಕನ್ನಡ ಅದು ಗ್ರಾಮ್ಯ ಭಾಷೆಯ ಸೊಗಡನ್ನು ಹೊಂದಿರುವುದು ಅನನ್ಯ ಮತ್ತು ವಿಶೇಷತೆಯಾಗಿದೆ. ಅದನ್ನು ಕೇಳುವುದೇ ಒಂದು ರೀತಿಯ ಚೆಂದ ಎಂದು ಶಿಕ್ಷಕಿ ಕಸ್ತೂರಿ ಐನಾಪೂರೆ ನುಡಿದರು.
ಆ. 1ರಂದು ಡೊಂಬಿವಲಿಯ ಗೆಳೆಯರ ಸ್ವಾವಲಂಬನ ಕೇಂದ್ರದ ಸಭಾಗೃಹದಲ್ಲಿ ಕುಂದ ಕನ್ನಡ ಬಳಗ ಮುಂಬಯಿ ಹಾಗೂ ಕುಂದ ಪ್ರಭ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇವತ್ತು ಹಾಡಿದ ಎಲ್ಲ ಪುಟಾಣಿಗಳನ್ನು ನೋಡಿ ಆಶ್ಚರ್ಯದೊಂದಿಗೆ ಸಂತೋಷವಾಗುತ್ತಿದೆ. ಈ ರೀತಿ ಕನ್ನಡ ಭಾಷೆಯ ಬಗ್ಗೆ ಮನೆಯಲ್ಲಿ ಸಂಸ್ಕಾರ, ಪ್ರೋತ್ಸಾಹ ನೀಡಬೇಕು ಎಂದು ನುಡಿದರು.
ಪ್ರಾರಂಭದಲ್ಲಿ ಸ್ಥಳೀಯ ಮರಾಠಿಯವರಾದ ತುಕರಾಮ ಪಡೇಕರ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಸುಜಾತಾ ಕಾಮತ್, ವರಶ್ರೀ ಶೆಟ್ಟಿ, ಸಂಧ್ಯಾ ನಾಯಕ್, ಉಮಾ ಶೆಟ್ಟಿ, ಸಮೀಕ್ಷಾ ನಾಯಕ್ ಅವರು ಪ್ರಾರ್ಥನೆಗೈದರು. ಕುಂದ ಕನ್ನಡ ಬಳಗ ಮುಂಬಯಿ ಸಂಚಾಲಕ ಪ್ರೊ| ವೆಂಕಟೇಶ್ ಪೈ ಅವರು ಸ್ವಾಗತಿಸಿ, ಕುಂದಾಪುರ ಭಾಷೆಯ ಬಗ್ಗೆ ವಿವರಿಸಿದರು.
ಕುಂದ ಕನ್ನಡ ಬಳಗದ ಸಕ್ರಿಯ ಸದಸ್ಯೆ ಸುಧಾ ಪೈ ಅವರು ಮಾತನಾಡಿ, ತನ್ನ ಊರು ಹೆಮ್ಮಾಡಿ ಒಂದು ಚಿಕ್ಕಹಳ್ಳಿಯಾಗಿದ್ದು ನಮ್ಮ ಭಾಷೆಯೇ ಗ್ರಾಮ್ಯ ಭಾಷೆಯಾಗಿದೆ. ಮುಂಬಯಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಇದ್ದ ನನಗೆ ಈ ಕುಂದ ಕನ್ನಡ ಬಳಗವು ನನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತಿದೆ ಎಂದರು.
ವೃದ್ದಿ ಶೆಟ್ಟಿ, ಸಮೀಕ್ಷಾ ನಾಯಕ್, ಶ್ರುದ್ಧಿ ಶೆಟ್ಟಿ, ಪ್ರಥಮೇಶ್ ಕಾಮತ್, ವರಶ್ರೀ ಶೆಟ್ಟಿ ಅವರು ಕನ್ನಡ ಹಾಡುಗಳನ್ನು ಹಾಡಿದರು. ಉಮಾ ಶೆಟ್ಟಿ, ಲತಾ ಪೂಜಾರಿ ಇವರಿಂದ ಚಲನಚಿತ್ರ ಗೀತೆಗಳ ಗಾಯನ ನಡೆಯಿತು. ನಳಿನಾಕ್ಷೀ ಶೆಟ್ಟಿ, ಜ್ಯೋತಿ ಹೆಗ್ಡೆ ಅವರು ತಯಾರಿಸಿದ ಕುಂದಾಪುರ ಖಾದ್ಯಗಳ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು ವಿಜಯ ಭಂಡಾರಿ, ಅನಿತಾ ಭಂಡಾರಿ, ರೇಖಾಲಕ್ಷ್ಮೀ ಪ್ರಿಯಾಂಕಾ ನಾರ್ವೇಕರ್, ನೇಹಾ, ಸುನೀತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಾ ವೈದ್ಯ ವಂದಿಸಿದರು.