ಕೋಟ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಇಂದು ಕುಂದಗನ್ನಡ ಭಾಗದಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳು ಸಂಘಟಿತಗೊಂಡಿದ್ದು, ಕೋಟದ ಮೂಡುಗಿಳಿಯಾರಿನಲ್ಲಿ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ. ಅಶೋಕ್ ನೀಲಾವರ ಕೆಸರಿನ ಕ್ರೀಡಾಂಗಣದಲ್ಲಿ ”ಕೆಸರಂಗ್” ಕ್ರೀಡಾಕೂಟ ಜರಗಿತು. ಈ ಸಂದರ್ಭ ಮಕ್ಕಳು, ಹಿರಿಯರು ಅತ್ಯಂತ ಸಂತಸದಲ್ಲಿ ಕೆಸರುಗದ್ದೆಯ ಆಟೋಟದಲ್ಲಿ ಭಾಗವಹಿಸಿ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಅತಿಥಿಗಳನ್ನು ಸಾಂಪ್ರದಾಯಿಕ ಶೈಲಿಯ ಡೋಲು, ಕೊಳಲು ವಾದನದೊಂದಿಗೆ ತಲೆಗೆ ಮಂಡಾಳೆ ತೋಡಿಸಿ ಟ್ರಸ್ಟ್ನ ಶಾಲು ಹೊದಿಸಿ ಕೃಷಿಭೂಮಿಗೆ ಸ್ವಾಗತಿಸಲಾಯಿತು. ಕುಂದಗನ್ನಡದ ರಾಯಭಾರಿ ಮನು ಹಂದಾಡಿ ಹಸಿರು ಕಣ, ಹಸಿರು ಬಳೆ, ಅರಿಶಿಣ, ಕುಂಕುಮ, ಕಾಡಿಗೆ, ಕೆಸ್ಕರ, ಶಾವಂತಿಗೆ ಹೂವನ್ನು ಕೃಷಿ ಭೂಮಿಗೆ ಸಮರ್ಪಿಸಿ ಆರತಿ ಎತ್ತಿ ಪೂಜೆ ಸಲ್ಲಿಸಿ ಕೃಷಿ ಭೂಮಿಯನ್ನು ಗರ್ಭಿಣಿ ಮಹಿಳೆಯರಿಗೆ ಹೋಲಿಸಿ ಭಾವನಾತ್ಮಕ ವಾಗಿ ಮಾತನಾಡಿದರು.
ಪತ್ರಕರ್ತ, ಕುಂದಾಪುರ ಕನ್ನಡ ನಿಘಂಟು ಪ್ರಧಾನ ಸಂಪಾದಕ ಪಂಜು ಗಂಗೊಳ್ಳಿಯವರು ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಠ ರೀತಿಯಲ್ಲಿ ಚಾಲನೆ ನೀಡಿ, ಭಾಷೆ ಉಳಿಸಬೇಕಾದರೆ ದೊಡ್ಡ ಸಾಹಸ ಮಾಡಬೇಕಿಲ್ಲ.ಯಾರೆಲ್ಲ ಭಾಷೆಯನ್ನು ಬಳಸುತ್ತಾರೆ. ಅವರೆಲ್ಲ ಭಾಷೆಯನ್ನು ಉಳಿಸಿದಂತೆ. ಕುಂದಗನ್ನಡ ಎನ್ನುವಂತದ್ದು ಹೃದಯದ ಭಾಷೆ ಎಂದರು. ವೈದ್ಯಾಧಿಕಾರಿ ಡಾ.ನಾಗೇಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ :ಕಂಬಳ ಕ್ಷೇತ್ರದ ಸಾಧಕ ಕೆದುಬರಿ ಗುರುವಪ್ಪ ಪೂಜಾರಿ ರಸ್ತೆ ಅಪಘಾತದಲ್ಲಿ ಸಾವು
ಕೆಸರಂಗ್ ಕ್ರೀಡಾಕೂಟದ ಪ್ರಯುಕ್ತ ಕೆಸರುಗದ್ದೆಯ ಓಟ, ಹ್ಗಗಜಗ್ಗಾಟ, ರಗೋಲಿ, ಕೆಸರಿನಲ್ಲಿ ವಾಲಿಬಾಲ್, ಅಡಿಕೆ ಹಳೆ ಸ್ಪರ್ಧೆ, ಕಂಬ ಸುತ್ತುವ ಆಟ ಮುಂತಾದ ಆಟೋಟಗಳು ನಡೆಯಿತು. ಮಕ್ಕಳು, ಹಿರಿಯರು ಅತ್ಯಂತ ಸಂತಸದಲ್ಲಿ ಆಟೋಟದಲ್ಲಿ ಭಾಗವಹಿಸಿ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಜೈ ಭಾರ್ಗವ ಬಳಗದ ರಾಜ್ಯಾಧ್ಯಕ್ಷ ಅಜಿತ್ ಶೆಟ್ಟಿ ಕಿರಾಡಿ, ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಹಿತಿ ನರೇಂದ್ರ ಕುಮಾರ್ ಕೋಟ, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಉದ್ಯಮಿ ಭೋಜ ಪೂಜಾರಿ, ಭರತ್ ಶೆಟ್ಟಿ, ವಿಶ್ವನಾಥ ಹೇರ್ಳೆ, ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿ ಪಡುಕರೆ, ಪ್ರವಿಣ್ ಯಕ್ಷಿಮಠ, ಸುಭಾಸ್ ಶೆಟ್ಟಿ ಗಿಳಿಯಾರು, ವಸಂತ್ ಗಿಳಿಯಾರ್, ಅಲ್ವಿನ್ ಅಂದ್ರಾದೆ, ಮತ್ತು ಜನಸೇವಾ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು. ಸುನೀಲ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು.