Advertisement
ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ. 3ರಲ್ಲಿರುವ ವೈಟ್ ಪೆಟಲ್ಸ್‌ನಲ್ಲಿ ಆ. 17 ಮತ್ತು 18ರಂದು ನಡೆಯಲಿರುವ ಈ ಹಬ್ಬದ ಕುರಿತು ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಬಾರ್ಕೂರು ಅವರು ಆ.13ರ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
Related Articles
Advertisement
ಇದು ಕುಂದಾಪ್ರ ಕನ್ನಡ ಹಬ್ಬವಾದರೂ ಸಮಸ್ತ ಕನ್ನಡಿಗರ ಸಂಭ್ರಮ. ಹೀಗಾಗಿ ಈ ಹಬ್ಬಕ್ಕೆ ನಾವು ಎಲ್ಲರನ್ನೂ ಆಹ್ವಾನಿಸುತ್ತಿದ್ದು, 2 ದಿನಗಳ ಹಬ್ಬದಲ್ಲಿ ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಒಂದು ಸಾವಿರ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಅದಾಗ್ಯೂ ಅನುಕೂಲದ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ಮೂಲಕ ಆಗಮಿಸುವುದು ಉತ್ತಮ. ಶನಿವಾರ ಮಧ್ಯಾಹ್ನ 2 ರಿಂದ ರಾತ್ರಿ 10.30 ಮತ್ತು ಭಾನುವಾರ ಬೆಳಗ್ಗೆ 9.30ರಿಂದ ರಾತ್ರಿ 10.30ರ ವರೆಗೆ ನಿರಂತರ ಕಾರ್ಯಕ್ರಮಗಳಿದ್ದು, ಈ ಹಬ್ಬಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ ಎಂದು ದೀಪಕ್ ಹೇಳಿದರು.
ಹಬ್ಬಕ್ಕೆ ತಾರಾ ಮೆರುಗು
ಕುಂದಾಪುರ ಕನ್ನಡ ಹಬ್ಬದಲ್ಲಿ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಆಗಮಿಸಲಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಅವರನ್ನೂ ಆಹ್ವಾನಿಸಲಾಗಿದ್ದು, ಅವರೂ ಬರುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದೇ ಮೊದಲು
ಈ ಹಬ್ಬ ಕುಂದಾಪುರ ಸಂಸ್ಕೃತಿಯನ್ನು ವಿಶೇಷ ರೀತಿಯಲ್ಲಿ ಪ್ರಸ್ತುತಪಡಿಸುವ ಪ್ರಯತ್ನ. ಆ ಪೈಕಿ ಪ್ರಮುಖ ಆಕರ್ಷಣೆಯಾಗಿ ಜೋಡಾಟ ಇರಲಿದೆ. ಇದು ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಒಂದೇ ಪ್ರಸಂಗ ಏಕಕಾಲದಲ್ಲಿ ಎರಡು ರಂಗಸ್ಥಳಗಳಲ್ಲಿ ಸ್ಪರ್ಧೆಯ ಮೇಲೆ ನಡೆಯುವ ಈ ಪ್ರದರ್ಶನವನ್ನು ನೋಡಲು ಊರಿನಿಂದಲೇ 2 ಸಾವಿರಕ್ಕೂ ಅಧಿಕ ಮಂದಿ ಆಗಮಿಸುತ್ತಿದ್ದಾರೆ.
ಮತ್ತೊಂದೆಡೆ ಭಾನುವಾರ ಸಂಜೆ 7.30ಕ್ಕೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಂದ ʼರವಿ ಬಸ್ರೂರ್ ನೈಟ್ಸ್ʼ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಇರಲಿದೆ. ಇದು ಕೂಡ ಇದೇ ಪ್ರಥಮ ಬಾರಿಗೆ ನಡೆಯುತ್ತಿರುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ಮಾಹಿತಿ ನೀಡಿದರು.
ದಿನವಿಡೀಯ ವಿಶೇಷ: ʼಹೊಟ್ಟಿ ಕಂಡದ್ದ್ ನಾವೇ ಸೈʼ ಎಂಬ ಹೆಸರಿನಲ್ಲಿ ಕರಾವಳಿ ಖಾದ್ಯಮೇಳ ಇರಲಿದ್ದು, ವಿಶೇಷ ತಿಂಡಿ-ತಿನಿಸುಗಳು ಲಭ್ಯ ಇರಲಿವೆ. ಅಲ್ಲದೆ ಕಡಲೂರಿನ ವಸ್ತು, ಒಡವೆ, ವಸ್ತ್ರಪ್ರದರ್ಶನ ಮತ್ತು ಮಾರಾಟದ ʼಕುಂದಾಪ್ರ ಸಂತಿʼ ಕೂಡ ಇರಲಿದೆ.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಲೆಕ್ಕಪರಿಶೋಧಕ ವಿಜಯ್ ಶೆಟ್ಟಿ, ಕ್ರೀಡಾ ಸಂಚಾಲಕ ಚಂದ್ರಶೇಖರ್ ಉಪಸ್ಥಿತರಿದ್ದರು.