Advertisement

ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆಗೆ ಯತ್ನ: ಕೋಟ

11:10 PM Jul 07, 2019 | Sriram |

ಕುಂದಾಪುರ: ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ರಚನೆಗೆ ಈ ಹಿಂದೆಯೇ ಯತ್ನಿಸಿದ್ದು ಕೆಲವೊಂದು ಆಡಳಿತಾತ್ಮಕ ಕಾರಣಗಳಿಂದ ಬಾಕಿ ಯಾಗಿದೆ. ಪ್ರತಿಪಕ್ಷದಲ್ಲಿರಲಿ, ಆಡಳಿತ ಪಕ್ಷದಲ್ಲಿರಲಿ ಒಂದು ವರ್ಷದಲ್ಲಿ ಅಕಾಡೆಮಿ ಮಂಜೂರಿಗೆ ಎಲ್ಲ ಪ್ರಯತ್ನ ಮಾಡುವುದಾಗಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ರವಿವಾರ ಇಲ್ಲಿನ ಶಿವಪ್ರಸಾದ್‌ ಗ್ರಾಂಡ್‌ ಸಭಾಂಗಣದಲ್ಲಿ ಕಮಲಮ್ಮ ಅನಂತಕೃಷ್ಣ ವರ್ಣ ಪ್ರತಿಷ್ಠಾನ ಮಂಗಳೂರು,ಕುಂದಪ್ರಭ ಟ್ರಸ್ಟ್‌ ಕುಂದಾಪುರ ವತಿಯಿಂದ ಅಮ್ಮ ಕುಂದಾಪುರ ಕನ್ನಡ ಕಥಾ ಪ್ರಶಸ್ತಿ ಪ್ರದಾನ ಹಾಗೂ ಕುಂದಾಪ್ರ ಕನ್ನಡ – ಒಂದು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋಟ ಶಿವರಾಮ ಕಾರಂತ ಪ್ರಾಧಿಕಾರ ರಚನೆಗೂ ಯತ್ನಿಸಿದ್ದೆ. ಕುಂದಾಪ್ರ ಕನ್ನಡ ಅಕಾಡೆಮಿಗೂ ಯತ್ನಿಸಿದ್ದೆ. ಅಧಿವೇಶನದಲ್ಲಿ ಪ್ರಶ್ನೆಯನ್ನೂ ಕೇಳಿದ್ದೆ. ಆದರೆ ಭರವಸೆ ಮಾತ್ರ ದೊರೆತಿದೆ. ಅಧಿವೇಶನದಲ್ಲಿ ಕೊಟ್ಟ ಉತ್ತರವೇ ಅಂತಿಮ ಆದೇಶ ಎಂದು ಇಂದು ರಾಜಕಾರಣಿಗಳೂ ಭಾವಿಸಿಲ್ಲ, ಅಧಿಕಾರಿಗಳೂ ಭಾವಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಕುಂದಾಪ್ರ ಭಾಷೆಯ ವಿಸ್ತಾರ ದೊಡ್ಡದಿದೆ, ವ್ಯಾಪ್ತಿ ಬೃಹತ್ತಾಗಿದೆ ಎಂದರು.

ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಸೊಗಡು, ಪ್ರೀತಿ, ವಯ್ನಾರ, ಅಂದ ಇರುತ್ತದೆ. ಭಾಷೆ ಖುಷಿ ಕಟ್ಟಿಕೊಡುವ ವಾತಾವರಣ ನಿರ್ಮಿಸುತ್ತದೆ. ಚೌಕಟ್ಟು, ಸಂಸ್ಕೃತಿಯನ್ನು ಉಳಿಸುತ್ತದೆ. ಕುಂದಾಪ್ರ ಕನ್ನಡ ಭಾಷೆಯ ಸೊಗಡು, ವೈವಿಧ್ಯ ಅರ್ಥಗಳು ಆಪ್ತವಾಗುವಂತಹವು ಎಂದವರು ತಿಳಿಸಿದರು .

ಕಥೆಗಾರ ಮಂಜುನಾಥ ಹಿಲಿಯಾಣ ಅವರಿಗೆ ಜಿ. ಕುಶಲ ಹೆಗ್ಡೆ ಟ್ರಸ್ಟಿನ ಸ್ನೇಹಪ್ರಭಾ ರೈ ಅವರು ಪ್ರಶಸ್ತಿ ಪ್ರದಾನ ಮಾಡಿದರು.ವಿಶ್ರಾಂತ ಪ್ರಾಧ್ಯಾಪಕ ಕೋ. ಶಿವಾನಂದ ಕಾರಂತ ಅಭಿನಂದನಾ ಮಾತುಗಳನ್ನಾಡಿದರು.

Advertisement

ಪುರೋಹಿತ ಬಿ. ವಾದಿರಾಜ ವರ್ಣ, ಡಾ| ಎ.ವಿ. ನಾವಡ ಮೊದಲಾದವರು ಉಪಸ್ಥಿತರಿದ್ದರು.ಮಣಿಪಾಲ್‌ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌ ಅಧ್ಯಕ್ಷತೆ ವಹಿಸಿದ್ದರು.ಪ್ರತಿಷ್ಠಾನದ  ಸಂಚಾಲಕಿ ಡಾ| ಗಾಯತ್ರಿ ನಾವಡ ಪ್ರಸ್ತಾವಿಸಿ, ಕಮಲಮ್ಮ ಅನಂತಕೃಷ್ಣ ವರ್ಣ ಪ್ರತಿಷ್ಠಾನ ಮಂಗಳೂರು ವತಿಯಿಂದ ಮುದಿ, ಅನಾರೋಗ್ಯಪೀಡಿತ ಗೋವುಗಳ ರಕ್ಷಣೆಗೆ ನಿಧಿ ನೀಡಲಾಗುತ್ತಿದ್ದು ನೀಲಾವರ ಗೋಶಾಲೆಗೆ ನೀಡಲಾಗಿದೆ. ಮನೆ ಕೆಲಸ ಮಾಡುವ ಮಹಿಳೆಯರ 10 ಮಕ್ಕಳನ್ನು ಕನ್ನಡ ಮಾಧ್ಯಮದ ಶಿಕ್ಷಣಕ್ಕಾಗಿ ದತ್ತು ತೆಗೆದುಕೊಳ್ಳಲಾಗಿದೆ. ಕುಂದಾಪ್ರ ಭಾಷಾಭಿವೃದ್ಧಿಗಾಗಿ ಕುಂದಾಪ್ರ ಭಾಷಾ ಕಥಾ ಸ್ಪರ್ಧೆ ಹಾಗೂ 600 ಪುಟಗಳ ಕುಂದಾಪ್ರ ಕನ್ನಡ ಅಜ್ಜಿಕಥೆಗಳ ಸಂಪುಟ ಹೊರಬರುತ್ತಿದೆ ಎಂದರು.

ಕುಂದಪ್ರಭ ಟ್ರಸ್ಟಿನ ಅಧ್ಯಕ್ಷ ಯು. ಎಸ್‌. ಶೆಣೈ ಸ್ವಾಗತಿಸಿ, ಉಪನ್ಯಾಸಕ ವಿಶ್ವನಾಥ ಕರಬ ನಿರ್ವಹಿಸಿದರು. ಗಣೇಶ್‌ ನಾಯಕ್‌ ಸಮ್ಮಾನಿತರ ಪರಿಚಯ ಮಾಡಿದರು. ಕಥಾಸ್ಪರ್ಧೆಯಲ್ಲಿ ಆಕರ್ಷಕ ಬಹುಮಾನ ಪಡೆದವರನ್ನು ಪುರಸ್ಕರಿಸಲಾಯಿತು.

ಅಕಾಡೆಮಿಗೆ ಬೇಡಿಕೆ
ಕುಂದಾಪ್ರ ಕನ್ನಡವನ್ನು ಶಿರೂರಿನಿಂದ ಬ್ರಹ್ಮಾವರ ತನಕ ಮಾತನಾಡುವ ಭೌಗೋಳಿಕ ಪರಿಧಿ ಒಂದೆಡೆಯಾದರೆ, 5 ಲಕ್ಷ ಮತದಾರರು ಈ ಭಾಷಿಕರಿದ್ದಾರೆ. ದೇಶಾದ್ಯಂತ 25 ಲಕ್ಷ ಮಂದಿ ಕುಂದಾಪ್ರ ಕನ್ನಡ ಮಾತನಾಡುವವರು ಇದ್ದಾರೆ. ಆದ್ದರಿಂದ ಕುಂದಾಪ್ರ ಕನ್ನಡ ಬಾಷಾಭಿವೃದ್ಧಿಗೆ ಅಕಾಡೆಮಿಯ ಅಗತ್ಯವಿದೆ.
-ಯು.ಎಸ್‌. ಶೆಣೈ,
ಕುಂದಪ್ರಭ ಟ್ರಸ್ಟ್‌ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next