Advertisement

ಒಡೆದ ಕುಂಡಾಮೇಸ್ತ್ರಿ ಕಟ್ಟೆ : ಕೂಟುಹೊಳೆ ಹೂಳು ಮಯ

08:08 PM Apr 20, 2019 | sudhir |

ಮಡಿಕೇರಿ:ಬೇಸಿಗೆ ಕಾಲದಲ್ಲಿ ಮಡಿಕೇರಿ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಪರ್ಯಾಯವಾಗಿ ಬಳಸಿಕೊ ಳ್ಳಲಾಗುತ್ತಿದ್ದ ಕುಂಡಾಮೇಸ್ತ್ರಿ ಜಲಮೂಲಕ್ಕೆ ಅಡ್ಡಲಾಗಿ ಕಟ್ಟಲಾಗಿದ್ದ ಮರಳು ಚೀಲದ ತಡೆಗೋಡೆ ಕೊಚ್ಚಿ ಹೋಗಿದ್ದು, ನಗರದ ನಿವಾಸಿಗಳು ಇನ್ನೆರಡು ತಿಂಗಳು ನೀರಿನ ಬವಣೆಯನ್ನು ಅನುಭಸಬೇಕಾದ ದುಸ್ಥಿತಿ ಬಂದೊದಗಿದೆ.

Advertisement

ಗಾಳಿಬೀಡು ವ್ಯಾಪ್ತಿಯಲ್ಲಿ ಬುಧವಾರ ಮತ್ತು ಗುರುವಾರ ಉತ್ತಮ ಮಳೆಯಾಗಿದ್ದು, ನೀರಿನ ರಭಸಕ್ಕೆ ಕುಂಡಾ ಮೇಸ್ತ್ರಿ ಜಲಮೂಲದ ತಡೆಗೋಡೆ ಕೊಚ್ಚಿಹೋ ಗಿದ್ದು, ನೀರಿನ ಶೇಖರಣೆ ಅಸಾಧ್ಯವಾಗಿದೆ. ಇಲ್ಲಿಯವರೆಗೆ ಕುಂಡಾಮೇಸ್ತ್ರಿಯಿಂದ ಕೂಟುಹೊಳೆ‌ಗೆ ನೀರನ್ನು ಪಂಪ್‌ ಮಾಡಿ ಮಡಿಕೇರಿ ನಗರಕ್ಕೆ ಪೂರೈಸಲಾಗುತ್ತಿತ್ತು. ಇದೀಗ ಕುಂಡಾಮೇಸ್ತ್ರಿಯಿಂದ ಕೂಟು ಹೊಳೆಗೆ ಪಂಪ್‌ ಮಾಡಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ.

ಮಾತ್ರವಲ್ಲದೇ, ಕುಂಡಾಮೇಸ್ತ್ರಿಯ ಬಳಿ ವಿದ್ಯುತ್‌ ಪರಿವರ್ತಕದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಚೆಸ್ಕಾಂ ಸಿಬಂದಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಕುಂಡಾಮೇಸ್ತ್ರಿ ಜಲಮೂಲಕ್ಕೆ ಮತ್ತೆ ಮರಳಿನ ತಡೆಗೋಡೆ ನಿರ್ಮಿಸಲು ಎರಡರಿಂದ ಮೂರು ವಾರಗಳೇ ಬೇಕಾ ಗಬಹುದು. ಕಾಮಗಾರಿ ವಿಳಂಬವಾದರೆ ಮತ್ತಷ್ಟು ದಿನಗಳೇ ಆಗಬಹುದು. ಇದರಿಂದ ಮಡಿಕೇರಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ.

ಈಗಾಗಲೇ ನಗರದ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಮೇ ತಿಂಗಳಿನಲ್ಲಿ ಪರಿಸ್ಥಿತಿ ಮತ್ತಷ್ಟು ತೀವ್ರತೆಯನ್ನು ಪಡೆದುಕೊಳ್ಳಬಹುದು. ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಲಿದ್ದು, ಜನತೆ ಸಹಕರಿಸಬೇಕೆಂದು ನಗರಸಭಾ ಅಧಿಕಾರಿಗಳು ಮನವಿ ಮಾಡಿದ್ದಾರೆ.

Advertisement

ನಗರಕ್ಕೆ ನೀರು ಪೂರೈಸುವ ಪ್ರಮುಖ ನೀರು ಸಂಗ್ರಹಗಾರ ಕೂಟುಹೊಳೆ ಸಂಪೂರ್ಣ ಬತ್ತಿ ಹೋಗಿದೆ. ಈ ಬಾರಿಯ ಬಿರು ಬೇಸಿಗೆ ಮತ್ತು ಪ್ರಕೃತಿ ಕೋಪದ ಬಳಿಕ ಕುಸಿತವಾದ ಅಂತರ್ಜಲ ಮಟ್ಟದಿಂದ ಕೂಟು ಹೊಳೆಯ ನೀರಿನ ಮೂಲಗಳು ಕ್ಷೀಣಿಸಿವೆ. ಕಳೆದ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ಕೂಟುಹೊಳೆಯನ್ನು ಸೇರಿದ್ದು, ಹೂಳು ತುಂಬಿರುವುದರಿಂದ ಜಲಮೂಲ ಬತ್ತಿ ಹೋಗಿದೆ. ಪ್ರಸ್ತುತ 10ರಿಂದ 15 ಅಡಿಯಷ್ಟೇ ನೀರು ನಿಂತಿದ್ದು, ಡೆಡ್‌ ಸ್ಟೋರೇಜ್‌ ಪ್ರಮಾಣದಲ್ಲಿರುವ ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಪಂಪ್‌ ಮಾಡಲು ಕೂಡ ಸಾಧ್ಯವಿಲ್ಲದಂತಾಗಿದೆ. ಮಳೆನೀರು ಮತ್ತು ಕುಂಡಾಮೇಸ್ತ್ರಿ ಜಲ ಮೂಲದ ನೀರನ್ನೇ ನಂಬಿದ್ದ ಕೂಟುಹೊಳೆ ಇಂದು ಬರಿದಾಗಿದೆ.

ಕುಡಿಯುವ ನೀರಿನ ಉದ್ದೇಶಕ್ಕಾಗಿಯೇ ನಗರಸಭೆಗೆ ಕೋಟಿ, ಕೋಟಿ ಹಣ ಬಂದರೂ ಸದುಪಯೋಗವಾಗುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಶಾಶ್ವತ ಪರಿಹಾರ ಬೇಕು
ಪ್ರತಿವರ್ಷ ಇದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮಡಿಕೇರಿ ನಗರವನ್ನು ಕಾಡುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಶಾಶ್ವತ ಪರಿಹಾರ ಇಲ್ಲಿಯವರೆಗೆ ದೊರೆತ್ತಿಲ್ಲ. ಕನಿಷ್ಟ ಪಕ್ಷ ಕೂಟುಹೊಳೆಯಲ್ಲಿ ತುಂಬಿರುವ ಹೂಳನ್ನು ತೆಗೆಯಲಾದರೂ ಕ್ರಮ ಕೈಗೊಳ್ಳಬಹುದಾಗಿತ್ತು, ಅದನ್ನೂ ಕೂಡ ಮಾಡದ ನಗರಸಭೆ ನಿಷ್ಕ್ರಿàಯವಾಗಿದೆ ಎಂದು ನಾಗರೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next