Advertisement

ಕುಂದಗೋಳ: ಮೊಹರಂ ಭಕ್ತಿ ಸಂಗಮ- ಮುಸ್ಲಿಮರೇ ಇಲ್ಲದ ಹಳ್ಳಿಗಳಲ್ಲೂ ಹಬ್ಬದಾಚರಣೆ

01:53 PM Jul 29, 2023 | Team Udayavani |

ಕುಂದಗೋಳ: ತಾಲೂಕಿನಾದ್ಯಾಂತ ಹಲವಾರು ಗ್ರಾಮಗಳಲ್ಲಿ ಮೊಹರಂ ಭಕ್ತಿ ಭಾವದಿಂದ ಆಚರಣೆಗೊಳ್ಳುತ್ತದೆ. ಮುಸ್ಲಿಂ ಬಾಂಧವರಿಲ್ಲದ ಗ್ರಾಮಗಳಲ್ಲೂ ತಮ್ಮದೇ ವಿಶಿಷ್ಟ ರೀತಿಯಲ್ಲಿ ಹಿಂದೂಗಳು ಹಬ್ಬ ಆಚರಿಸುತ್ತ ಬರುತ್ತಿದ್ದಾರೆ. ಇಲ್ಲಿನ ಮಣ್ಣಿನ ವೈಶಿಷ್ಟ್ಯವೇ ಅಂತಹದ್ದು. ಇಲ್ಲಿ ನಡೆಯುವ ಧಾರ್ಮಿಕ ಸಂಪ್ರದಾಯಗಳು ರಾಜ್ಯದಲ್ಲಿಯೇ ಮಾದರಿಯಾಗುತ್ತಿವೆ.

Advertisement

ಯರಗುಪ್ಪಿಯ ಮೊಹರಂ ಎಂದಾಕ್ಷಣ ಅಲ್ಲಿ ಸೇರುವ 4 ಗ್ರಾಮಗಳ 7 ಡೋಲಿಗಳೇ ನೋಡುಗರ ಮನಸ್ಸನ್ನು ಸೂರೆಗೊಳ್ಳುತ್ತವೆ. ಈ ಕ್ಷಣ ಜು.30ರಂದು ಕೂಡಿಬರುತ್ತಿದೆ. ಹೈಸ್ಕೂಲ್‌ ಮೈದಾನಕ್ಕೆ ಸೂರ್ಯ ಅಸ್ತಂಗತನಾಗುವುದರೊಳಗೆ ಯರಗುಪ್ಪಿಯ 3, ಚಿಕ್ಕನರ್ತಿಯ 2, ಯರಿನಾರಾಯಣಪುರ ಮತ್ತು ಮುಳ್ಳೊಳ್ಳಿಯ ತಲಾ ಒಂದೊಂದು ಸೇರಿ ಒಟ್ಟು 7 ಡೋಲಿಗಳು ಹೆಜ್ಜೆಮೇಳಗಳ
ಸಂಭ್ರಮದಲ್ಲಿ ಹೊಳೆಗೆ ಹೋಗುವ ಮೂಲಕ ಮೊಹರಂ ಕೊನೆಗೊಳ್ಳುತ್ತದೆ.

ಯರಗುಪ್ಪಿಯಲ್ಲಿ ಡೋಲಿಗಳು ಒಂದು ದಿನ ತಡವಾಗಿ ಜು.30ರಂದು ಹೊಳೆಗೆ ಹೋಗುತ್ತವೆ. ಆದರೆ ತಾಲೂಕಿನಲ್ಲಿರುವ ಉಳಿದೆಲ್ಲಾ ಡೋಲಿಗಳ ದೇವರುಗಳು ಜು. 29ರಂದೇ ಹೊಳೆಗೆ ಹೋಗುತ್ತವೆ. ನಮ್ಮೂರನ್ಯಾಗ ಹಿಂದಿನಿಂದ ಈ ಹಬ್ಬಾ ಆಚರಿಸಾಕತ್ತೇವಿ. ನಮ್‌ ಹಿರ್ರಿಯರು ಮಾಡಿಕೊಂಡು ಬರುತ್ತಿರುವ ಸಂಪ್ರದಾಯ ಬಿಟ್ಟಿಲ್ಲ. ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಮರು ಸೇರಿ ವಿಜೃಂಭಣೆಯಿಂದ ಆಚರಿಸ್ತೇವೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಎಂ.ಐ. ಮುದ್ದಣ್ಣವರ. ಇಲ್ಲಿನ ಮಕಾನನ್ನು ಗ್ರಾಮದ ಜನರ ದೇಣಿಗೆಯಿಂದ ನಿರ್ಮಿಸಲಾಗಿದ್ದು, ಪ್ರತಿ ಜನಾಂಗದವರು ಈ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದರು.

ಹಿಂದೂಗಳಿಂದಲೇ ಆಚರಣೆ: ಪಟ್ಟಣದ ಸ್ಥಳೀಯ ಗಾಣಿಗ ಮನೆತನದವರಾದ ರೇವಣಸಿದ್ಧಪ್ಪ ಬಸಪ್ಪ ಹೊಳಿಯವರ
ಮುಂದಾಳತ್ವದಲ್ಲಿ ಹಟೇಲಪಾಶಾ ಪಾಂಜಾ ಸ್ಥಾಪಿಸಿ ಮುಸ್ಲಿಂ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಹಬ್ಬ ನಡೆಯುತ್ತವೆ.
ಇನ್ನು ಮುಸ್ಲಿಮರೇ ಇಲ್ಲದ ಗೌಡಗೇರಿ, ಕೊಡ್ಲಿವಾಡ, ರಟಗೇರಿ, ಹೊಸಕಟ್ಟಿ, ವಿಠಲಾಪುರಗಳಲ್ಲಿ ಮೊಹರಂ ಹಬ್ಬದಾಚರಣೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಹಿಂದೂಗಳೇ ಮಸೂತಿಗಳನ್ನು ಕಟ್ಟಿಸಿ, ಹಬ್ಬದಂದು ಮುಸ್ಲಿಂ ಗುರುಗಳೊಬ್ಬರನ್ನು ಕರೆಸಿ ದೇವರುಗಳನ್ನು ಪ್ರತಿಷ್ಠಾಪಿಸಿ, ಡೋಲಿಗಳನ್ನು ಶೃಂಗರಿಸಿ ಹೊತ್ತುಕೊಂಡು, ಮಸೂತಿ ಮುಂದಿನ ಅಗ್ನಿಕುಂಡದಲ್ಲಿ ಹಾಯ್ದು, ಮನೆ ಮನೆಗೆ ಭೇಟಿಕೊಟ್ಟು ಭಕ್ತರ ಇಷ್ಟಾರ್ಥವನ್ನು ಪೂರೈಸಿ, ಕೊನೆಗೆ ದೇವರುಗಳೆಲ್ಲ ಹೊಳೆಗೆ ಹೋಗುವುದರೊಂದಿಗೆ ಹಬ್ಬವು ಕೊನೆಗೊಳ್ಳುತ್ತದೆ.

ಗೌಡಗೇರಿಯಲ್ಲಿ ಮುಸ್ಲಿಂ ಬಾಂಧವರು ಇಲ್ಲದಿದ್ದರೂ ಅಲ್ಲಿನ ಜನರು ನೂರಾರು ವರ್ಷಗಳಿಂದ ಮೊಹರಂ ಹಬ್ಬವನ್ನು
ಭಕ್ತಿಭಾವದಲ್ಲಿ ಆಚರಿಸುತ್ತಿದ್ದಾರೆ. ಗ್ರಾಮದ ಮಧ್ಯಭಾಗದಲ್ಲಿ ಮಕಾನ್‌ ನಿರ್ಮಿಸಿದ್ದಾರೆ. ಪ್ರತಿವರ್ಷ ಇದರಲ್ಲಿಯೇ ಡೋಲಿಯನ್ನು ಶೃಂಗರಿಸಿ, ಲೋಹದ ಪಂಜಾಗಳನ್ನು ವಸ್ತ್ರಗಳಿಂದ ವಿಶಿಷ್ಟ ರೀತಿಯಲ್ಲಿ ಅಲಂಕರಿಸಿ, ಶ್ರೀಗಂಧದಿಂದ
ಪೂಜಿಸುತ್ತಾರೆ. ಇಷ್ಟಾರ್ಥ ಈಡೇರಿಕೆಗೆ ದೇವರನ್ನು ಬೇಡಿಕೊಳ್ಳುತ್ತಾರೆ

Advertisement

*ಶೀತಲ್‌ ಎಸ್‌.ಎಂ

Advertisement

Udayavani is now on Telegram. Click here to join our channel and stay updated with the latest news.

Next