ಪ್ರತಾಪ್ ಗಢ್: ಉತ್ತರಪ್ರದೇಶದ ಕುಂದಾ ಕ್ಷೇತ್ರದಲ್ಲಿ ಭಾನುವಾರ (ಫೆ.27) ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಗುಲ್ಶನ್ ಯಾದವ್ ಮೇಲೆ ಹಲ್ಲೆ ನಡೆಸಿದ ಪಕ್ಷೇತರ ಅಭ್ಯರ್ಥಿ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಹಾಗೂ ಇತರರ ವಿರುದ್ಧ ಎಫ್ ಐಆರ್ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಿಷ್ಕಿಂಧಾ ಅಂಜನಾದ್ರಿ ಬೆಟ್ಟ ಹುಂಡಿ ಎಣಿಕೆ: 28 ದಿನಗಳಲ್ಲಿ 9.92 ಲಕ್ಷ ರೂ ಸಂಗ್ರಹ
ಭಾರತೀಯ ದಂಡ ಸಂಹಿತೆ ಹಾಗೂ ಎಸ್ ಸಿ, ಎಸ್ ಟಿ ಕಾಯ್ದೆಯಡಿ ರಾಜಾ ಭಯ್ಯಾ ಹಾಗೂ ಇತರ 17 ಮಂದಿ ವಿರುದ್ಧ ಕುಂದಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜಾ ಭಯ್ಯಾ ಹಾಗೂ ಆತನ ಸಂಗಡಿಗರು ತನ್ನ ಕಾರಿನ ಮೇಲೆ ದಾಳಿ ನಡೆಸಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಗುಲ್ಶನ್ ಆರೋಪಿಸಿದ್ದಾರೆ.
ಈ ಘಟನೆ ಬಳಿಕ ಸಮಾಜವಾದಿ ಪಕ್ಷದ ನಿಯೋಗ ಲಕ್ನೋದಲ್ಲಿ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ, ರಾಜಾ ಭಯ್ಯಾ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿತ್ತು. ರಾಜಾ ಭಯ್ಯಾ ಕುಂದಾ ವಿಧಾನಸಭಾ ಕ್ಷೇತ್ರದ ಪ್ರಭಾವಿ ಶಾಸಕ, ಈ ದಾಳಿಯ ಹಿಂದೆ ತನ್ನ ಕೈವಾಡ ಇಲ್ಲ ಎಂಬುದಾಗಿ ರಾಜಾ ಭಯ್ಯಾ ನಿರಾಕರಿಸಿರುವುದಾಗಿ ವರದಿ ತಿಳಿಸಿದೆ.
ಉತ್ತರಪ್ರದೇಶ ರಾಜಕಾರಣದಲ್ಲಿ ರಾಜಾಭಯ್ಯಾ ಕಿಂಗ್ ಮೇಕರ್ ಎಂದೇ ಗುರುತಿಸಲ್ಪಟ್ಟಿದ್ದು, ಸಮಾಜವಾದಿ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಿರುವ ಆರೋಪ ತಳ್ಳಿ ಹಾಕಿರುವ ರಾಜಾ ಭಯ್ಯಾ, ಅಖಿಲೇಶ್ ಯಾದವ್ ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.