ಕುಮಟಾ: ಬೇಸಿಗೆಯಲ್ಲಿ ನೀರಿನ ಬವಣೆಯಿಂದ ಕಂಗೆಟ್ಟಿದ್ದ ಪಟ್ಟಣದ ಶಶಿಗುಳಿ ರಸ್ತೆಯ (ಮಿಶನರಿ ಕಾಲೋನಿ) ನಿವಾಸಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಾಧ್ಯಾಪಕ ದಿನಕರ ಎಂ. ಕಾಮತರು ಮಳೆ ನೀರು ಕೊಯ್ಲು ಹಾಗೂ ಇತರ ವಿಧಾನಗಳನ್ನು ಅಳವಡಿಸಿಕೊಳ್ಳುತ್ತ, ಬರಡಾಗಿದ್ದ ತಮ್ಮ ಬಾವಿಗಳಲ್ಲಿ ನೀರುಕ್ಕಿಸುವಲ್ಲಿ ಸಫಲರಾಗಿದ್ದಾರೆ.
ಶಿಕ್ಷಕರಾಗಿ ನಿವೃತ್ತರಾದ ಬಳಿಕ ಧಾರ್ಮಿಕ, ಸಾಮಾಜಿಕ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದ ದಿನಕರ ಕಾಮತರಿಗೆ ತಮ್ಮ ಸ್ವಂತದ ಭೂಮಿಯಲ್ಲಿ 2013ರಿಂದ ನೀರಿನ ಸಮಸ್ಯೆ ಆರಂಭವಾಗಿದೆ. ಇವರ ಮನೆ, ತೋಟ, ಗದ್ದೆ ಎಲ್ಲ ಕಡೆಗಳಲ್ಲಿನ ನಾಲ್ಕು ಬಾವಿಗಳೂ ಜನವರಿ ಹೊತ್ತಿಗೆ ಬತ್ತಲಾರಂಭಿಸಿ ತೀವ್ರ ಸಮಸ್ಯೆ ಎದುರಿಸಿದ್ದರು.
ಈ ಕುರಿತು ಅನುಭವ ಹಂಚಿಕೊಂಡ ದಿನಕರ ಕಾಮತರು, ನೀರಿನ ಸಮಸ್ಯೆಗೆ ಪರಿಹಾರವಾಗಿ ಮಳೆ ನೀರಿನ ಕೊಯ್ಲು ಮತ್ತಿತರ ವಿಧಾನಗಳಿವೆಯಾದರೂ ಸಫಲತೆಯ ಅನುಮಾನ ಇತ್ತು. ಆದರೂ ಧೈರ್ಯ ಮಾಡಿ ಮನೆ ಛಾವಣಿಗೆ ಬಿದ್ದ ಎಲ್ಲ ಮಳೆ ನೀರು ನೇರವಾಗಿ ಮನೆಯ ಸುತ್ತಲಿನ ಎರಡು ಬಾವಿಗಳಿಗೆ ಬೀಳುವಂತೆ 2016ರಲ್ಲಿ ಮಾಡಿದ್ದೆ. ಮಳೆ ನೀರು ನೇರ ಬಾವಿಗೆ ಇಳಿಸಿದ ಮೊದಲ ವರ್ಷ ಬದಲಾವಣೆ ಕಾಣಲಿಲ್ಲ. ಎರಡನೇ ವರ್ಷ ಮಳೆಗಾಲಕ್ಕೆ ಮುನ್ನ ಎರಡಡಿ ನೀರಿತ್ತು. ಈ ವರ್ಷ ಯಥೇಚ್ಛ ನೀರಿದೆ. ಅಂತರ್ಜಲ ಮಟ್ಟ ಸ್ಪಷ್ಟವಾಗಿ ಹೆಚ್ಚಿದೆ. ಈ ಬಾರಿ ನೀರಿಂಗಿಸುವುದನ್ನು ಇನ್ನಷ್ಟು ಉತ್ತಮ ಪಡಿಸುವುದಕ್ಕಾಗಿ ಬಾವಿಗಳ ಪಕ್ಕ ಗುಂಡಿಗಳನ್ನು ತೋಡಿ ಕಲ್ಲು, ಜಲ್ಲಿ, ಮರಳು ಮುಂತಾದವುಗಳ ಪದರ ನಿರ್ಮಿಸಿದ್ದೇನೆ. ಮಳೆ ನೀರು ಶುದ್ಧವಾಗಿ ಸಂಪೂರ್ಣ ಭೂಮಿಯಲ್ಲಿ ಸೇರಿಹೋಗಲಿದೆ. ನಮ್ಮ ಭೂಮಿಯಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮಳೆ ನೀರಿಂಗಿಸುವ ಕೆಲಸ ಮಾಡಿದ್ದೇನೆ ಎಂದಿದ್ದಾರೆ.
ಮಳೆ ನೀರು ಕೊಯ್ಲು ಉತ್ತಮ ಪರಿಹಾರ
ನಮ್ಮ ಹಾಳುಬಿದ್ದ ಗದ್ದೆಯಲ್ಲಿ ಬೇಸಾಯ ಪುನರಾರಂಭಿಸಿದಾಗ ಪಕ್ಕದ ಬಾವಿಯಲ್ಲಿ ಬೇಸಿಗೆಯಲ್ಲಿ ನೀರು ಉಳಿಯತೊಡಗಿದ್ದು ನನಗೆ ಪ್ರೇರಣೆಯಾಯಿತು ಎನ್ನುವ ಕಾಮತರು, ಕರೆಕಟ್ಟೆಗಳು ಮಾತ್ರವಲ್ಲ, ಈಗೀಗ ನಮ್ಮ ಹೊಳೆಗಳೂ ಬತ್ತುತ್ತಿವೆ. ನೀರಿನ ಸಮಸ್ಯೆಗೆ ಪಟ್ಟಣ ಪ್ರದೇಶಗಳಲ್ಲಿ ಮಳೆ ನೀರು ಕೊಯ್ಲು ಅತ್ಯುತ್ತಮ ಪರಿಹಾರ. ಪ್ರತಿ ಮನೆಯಲ್ಲೂ ಇಂಥ ಕೆಲಸವಾಗಬೇಕು. ಸ್ಥಳೀಯ ಆಡಳಿತ ಮಳೆ ನೀರು ಕೊಯ್ಲಿಗೆ ಜನರನ್ನು ಪ್ರೇರೇಪಿಸಬೇಕು. ಭೂಮಿಗೆ ಮಳೆ ನೀರು ಇಳಿಸಿ, ನೀರಿನ ಸ್ವಾವಲಂಬಿಯಾಗಬಹುದು ಎಂಬುದನ್ನು ನಾನು ಸ್ವತಃ ಪ್ರಯೋಗ ಮಾಡಿ ಕಂಡುಕೊಂಡಿದ್ದೇನೆ ಎಂದು ದಿನಕರ ಕಾಮತ ತಿಳಿಸಿದ್ದಾರೆ.