Advertisement

ಹಳ್ಳಿಗರಿಗೆ ದೊರೆಯದ ವಿದ್ಯುತ್‌ ಯೋಜನೆ

03:54 PM Sep 28, 2019 | Team Udayavani |

ಕೆ. ದಿನೇಶ ಗಾಂವ್ಕರ
ಕುಮಟಾ:
ಕೇಂದ್ರ ಸರ್ಕಾರದ ಜನಪರ ಯೋಜನೆಗಳಲ್ಲೊಂದಾದ ದೀನದಯಾಳ ಉಪಾಧ್ಯಾಯ ಗ್ರಾಮೀಣ ವಿದ್ಯುತ್‌ ಯೋಜನೆ ತಾಲೂಕಾದ್ಯಂತ ಜಾರಿಯಾಗಿ 2 ವರ್ಷಗಳಾದರೂ ಹಲವು ಮನೆಗಳು ಇನ್ನೂ ಕತ್ತಲೆಯಲ್ಲೇ ಕಾಲ ಕಳೆಯಬೇಕಾದ ದುಸ್ಥಿತಿಯಿದೆ.

Advertisement

ತಾಲೂಕಿನ ಸೊಪ್ಪಿನಹೊಸಳ್ಳಿ, ಮಳವಳ್ಳಿ, ಧಾರೇಶ್ವರ, ಶಿರಗುಂಜಿ ಹೀಗೇ ವಿವಿಧ ಗ್ರಾಮಗಳಲ್ಲಿ ವಿದ್ಯುತನ್ನೇ ಕಾಣದ ಹಲವು ಬಿಪಿಎಲ್‌ ಕಾರ್ಡುದಾರರ ಕುಟುಂಬಗಳಿಗೆ ವಿದ್ಯುತ್‌ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಯಾಗಿ 2 ವರ್ಷಗಳು ಕಳೆದಿವೆ. ತಾಲೂಕಿನ ಗ್ರಾಮೀಣ ಭಾಗದ 191 ಮನೆಗಳು ಈ ಯೋಜನೆಯಲ್ಲಿ ಆಯ್ಕೆಯಾಗಿದ್ದವು. ಇದರಲ್ಲಿ ಈಗಾಗಲೇ 146 ಮನೆಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲಾಗಿದ್ದು, ಇನ್ನುಳಿದ 45 ಬಿಪಿಎಲ್‌ ಕಾರ್ಡುದಾರರ ಮನೆಗಳಿಗೆ ಇನ್ನೂ ಬೆಳಕಿನ ಭಾಗ್ಯ ದೊರೆತಿಲ್ಲ.

ಎರಡು ವರ್ಷದ ಹಿಂದೆ ದೀನದಯಾಳ ಉಪಾಧ್ಯಾಯ ಗ್ರಾಮೀಣ ವಿದ್ಯುತ್‌ ಯೋಜನೆ ಕಾಮಗಾರಿ ಗುತ್ತಿಗೆ ಪಡೆದ ಬಜಾಜ್‌ ಇಲೆಕ್ಟ್ರಿಕಲ್‌ ಕಂಪನಿ ಕಾಮಗಾರಿ ಪ್ರಾರಂಭಿಸಿತ್ತಾದರೂ ಪೂರ್ಣಗೊಳಿಸದೇ ಸತಾಯಿಸುತ್ತಿರುವುದು ಬೆಳಕಿಗೆ ಬಂದಿದೆ.

ಶೇ. 77 ಮನೆಗಳಿಗೆ ಈಗಾಗಲೇ ವಿದ್ಯುತ್‌ ಒದಗಿಸಿದ್ದರೂ ಸಹ ಇನ್ನುಳಿದ ಶೇ. 23 ಮನೆಗಳಿಗೆ ವಿದ್ಯುತ್‌ ಕಲ್ಪಿಸುವಲ್ಲಿ ಗುತ್ತಿಗೆ ಪಡೆದ ಕಂಪನಿ ಮೀನಾಮೇಷ ಎಣಿಸುತ್ತಿದೆ ಎಂಬುದು ವಿದ್ಯುತ್‌ ವಂಚಿತ ಕುಟುಂಬಗಳ ಆರೋಪವಾಗಿದೆ. ಕೆಲ ಮನೆಗಳಿಗೆ ಈಗಾಗಲೇ ವಿದ್ಯುತ್‌ ಮೀಟರ್‌ ಹಾಗೂ ವಾಯರಿಂಗ್‌ ಅಳವಡಿಕೆ ಮಾಡಲಾಗಿದೆ. ಮನೆಯವರು ಬಲ್ಬ್ಗಳನ್ನೂ ಸಹ ತಂದಿಟ್ಟುಕೊಂಡು ಬೆಳಕನ್ನು ನೋಡಲು ಕಾದು ಕುಳಿತಿದ್ದಾರೆಯೇ ವಿನಃ ಬೆಳಕು ಮಾತ್ರ ಇನ್ನೂ ಬಂದಿಲ್ಲ.

ವಿದ್ಯುತ್‌ ನಿಂದ ವಂಚಿತರಾದ ಈ 45 ಮನೆಗಳು ದೂರದಲ್ಲಿರುವುದರಿಂದ 190 ವಿದ್ಯುತ್‌ ಕಂಬದ ಅವಶ್ಯಕತೆಯಿತ್ತು. ಬಜಾಜ್‌ ಕಂಪನಿಯವರು 190 ಕಂಬಗಳನ್ನು ಅಳವಡಿಸಿ, ವಿದ್ಯುತ್‌ ಲೈನನ್ನು ಜೋಡಿಸಬೇಕಿತ್ತು. ಆದರೆ ಕಂಪನಿಯವರು ಸ್ಥಳೀಯ ಗುತ್ತಿಗೆದಾರರಿಗೆ ತುಂಡು ಗುತ್ತಿಗೆಯನ್ನು ನೀಡಿ,
ಈ ಎಲ್ಲ ಕಾಮಗಾರಿಗಳನ್ನೂ ಮಾಡಿಸಿದ್ದರಾದರೂ ದುಡಿಸಿಕೊಂಡ ಗುತ್ತಿಗೆದಾರರಿಗೆ ಹಣವನ್ನು ನೀಡಲಿಲ್ಲ. ಹೀಗಾಗಿ ಇವರ ಕೆಲಸಕ್ಕೆ ಸ್ಥಳೀಯರಾರೂ ಸಿಗುತ್ತಿಲ್ಲವೆಂಬ ದೂರುಗಳು ಕೇಳಿ ಬರುತ್ತಿದೆ.

Advertisement

ಈಗಾಗಲೇ ಗುತ್ತಿಗೆ ಪಡೆದ ಬಜಾಜ್‌ ಕಂಪನಿಯ ವಿರುದ್ಧ ಫಲಾನುಭವಿಗಳು 3-4 ಬಾರಿ ಹೋರಾಟ ನಡೆಸಿದ್ದಾರೆ. ಮೊದಲ ಬಾರಿಗೆ ನಡೆದ ಪ್ರತಿಭಟನೆಯಲ್ಲಿ ಶಾಸಕ ದಿನಕರ ಶೆಟ್ಟಿ ಪಾಲ್ಗೊಂಡು, 1 ವಾರದಲ್ಲಿ ಕೆಲಸ ಮುಗಿಸಿಕೊಡುವಂತೆ ಬಜಾಜ್‌ ಕಂಪನಿಯಿಂದ ಲಿಖೀತವಾಗಿ ಬರೆಯಿಸಿಕೊಂಡಿದ್ದರು. ಇತ್ತೀಚಿಗೆ ನಡೆದ ಹೋರಾಟದಲ್ಲಿ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಪಾಲ್ಗೊಂಡಿದ್ದು, ಬಜಾಜ್‌ ಕಂಪನಿಯೊಂದಿಗೆ ಚರ್ಚಿಸಿದ್ದರು. ಈ ಸಂದರ್ಭದಲ್ಲಿಯೂ ಕೂಡ 1 ವಾರದಲ್ಲಿ ಕಾಮಗಾರಿ ಮುಗಿಸಿಕೊಡುವ ಭರವಸೆಯನ್ನು ಕಂಪನಿಯವರು ನೀಡಿದ್ದರು. ಆದರೆ ಫಲಾನುಭವಿಗಳ ಯಾವ ಹೋರಾಟಕ್ಕೂ ಬೆಲೆ ದೊರೆತಿಲ್ಲ. 45 ಅರ್ಹ ಫಲಾನುಭವಿಗಳು ವಿದ್ಯುತ್‌ಗಾಗಿ ಹೆಸ್ಕಾಂ ಇಲಾಖೆಗೆ ಓಡಾಡುವುದೇ ಆಗಿದೆ ಬಿಟ್ಟರೆ ಉತ್ತಮ ಫಲಿತಾಂಶ ಮಾತ್ರ ಇನ್ನೂ ಬಂದಿಲ್ಲ.

ಬಜಾಜ್‌ ಕಂಪನಿ ಶೀಘ್ರವೇ ಕಾಮಗಾರಿ ಮುಗಿಸುವಲ್ಲಿ ಹೆಸ್ಕಾಂ ಇಲಾಖೆಯು ಮೇಲುಸ್ತುವಾರಿ ವಹಿಸಿಕೊಂಡು ಕತ್ತಲೆಯಲ್ಲಿ ದಿನ ಕಳೆಯುವ ಬಡ ಜನತೆಗೆ ಬೆಳಕನ್ನು ನೀಡುವಲ್ಲಿ ಮುಂದಾಗಬೇಕಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next