Advertisement

ಹೆಬ್ಬಾರಗುಡ್ಡ ಅಭಿವೃದ್ಧಿ ಕೇಳ್ಳೋರಿಲ್ಲ 

04:54 PM Mar 28, 2019 | Team Udayavani |
ಕುಮಟಾ: ವರ್ಷದ ಹಿಂದೆ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಗುಡ್ಡಗಾಡು ಕುಗ್ರಾಮ ಹೆಬ್ಟಾರಗುಡ್ಡಕ್ಕೆ ವಿದ್ಯುತ್‌ ಬಂತು. ಶಾಸಕಿ ರೂಪಾಲಿ ನಾಯ್ಕ ಉದ್ಘಾಟನೆಗೆ ಊರಿಗೆ ಬರಲಿಲ್ಲ. 4-5 ಕಿಮೀ ದೂರದಲ್ಲೇ ರಿಬ್ಬನ್‌ ಕಟ್‌ ಮಾಡಿ ಮರಳಿದರು. ಗುಡ್ಡ ಹತ್ತಲಾಗದ ಜನಪ್ರತಿನಿಧಿಗಳ, ಅಧಿಕಾರಿಗಳ ಕಷ್ಟ ಸ್ಥಳೀಯರು ಅರ್ಥಮಾಡಿಕೊಂಡರು. ಆದರೆ ಹಲವು ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹೆಬ್ಟಾರಗುಡ್ಡದ ದಿನನಿತ್ಯದ ಸಂಕಟ ಅರ್ಥವಾಗದೇ ಬಾಕಿ ಉಳಿದಿದೆ.
ಅಂಕೋಲಾ, ಯಲ್ಲಾಪುರ ಹಾಗೂ ಶಿರಸಿ ಈ ಮೂರೂ ತಾಲೂಕು ಗಡಿಯಲ್ಲಿ ಹೆಬ್ಟಾರಗುಡ್ಡವಿದೆ. ಇಲ್ಲಿನ ಸ್ಥಿತಿಗತಿಗಳು ಶತಮಾನಗಳ ಹಿಂದಕ್ಕೆ ಕರೆದೊಯ್ಯುತ್ತವೆ. ನಿಸರ್ಗ ನೀಡಿದ ಎಲ್ಲ ಕೊಡುಗೆಗಳಿದ್ದರೂ ಆಡಳಿತ ವ್ಯವಸ್ಥೆಯ ಹೃದಯಹೀನತೆಯಿಂದ ಹೆಬ್ಟಾರಗುಡ್ಡದ ಜನ ಎಲ್ಲಿಯೂ ಸಲ್ಲದವರಾಗಿ ಕಠೊರ ತಪಸ್ಸಿನಂಥ ಬದುಕು ನಡೆಸುತ್ತಿದ್ದಾರೆ. ಹೆಬ್ಟಾರಗುಡ್ಡ ಹಿಂದುಳಿದ ಸಿದ್ದಿ ಜನಾಂಗದವರೇ ಹೆಚ್ಚಿರುವ 26-28 ಕುಟುಂಬಗಳು ವಾಸಿಸುವ ಸೌಕರ್ಯರಹಿತ ಕುಗ್ರಾಮ. ಇಲ್ಲಿನ ನಿವಾಸಿಗಳಿಗೆ ಪಡಿತರಕ್ಕಾಗಿ 17 ಕಿ.ಮೀ ದೂರದ ರಾಮನಗುಳಿಗೆ ಬರಬೇಕು. ಸಾರ್ವಕಾಲಿಕ ರಸ್ತೆಯಿಲ್ಲ. ಬಸ್‌ ವ್ಯವಸ್ಥೆ ಇಲ್ಲ. ಭಾರ ಹೊತ್ತು ಕಾಲ್ನಡಿಗೆಯಲ್ಲಿ ಸಾಗಬೇಕು. ಸ್ವಂತ ಬೈಕ್‌ ಇದ್ದರೆ ಸ್ವಲ್ಪ ಅನುಕೂಲ. ದೂರವಾಣಿ ಇಲ್ಲವೇ ಇಲ್ಲ. ಅನಾರೋಗ್ಯವಾದರೆ ಕನಿಷ್ಠ 18-20 ಕಿಮೀ ದೂರದಲ್ಲಿ ಪ್ರಾಥಮಿಕ ಚಿಕಿತ್ಸೆಗಳು ಸಿಗುತ್ತವೆ. ಸದ್ಯ ಇಲ್ಲಿ 5-6 ವಿದ್ಯಾರ್ಥಿಗಳಿದ್ದರೂ ಹಿಂದೆ ಮುಚ್ಚಿದ್ದ ಶಾಲೆ ಮತ್ತೆ ತೆರೆದಿಲ್ಲ. ಊರಿನಲ್ಲಿ ಶೇ. 90ರಷ್ಟು ಅನಕ್ಷರಸ್ಥರೇ.
ಬಹಳಷ್ಟು ಅಧಿಕಾರಿಗಳಿಗೆ ಈ ಊರಿನ ಪರಿಚಯವೇ ಇಲ್ಲ. ಕುರ್ಚಿಯ ಮೇಲೆ ಕುಳಿತಲ್ಲೇ ಹೆಬ್ಟಾರಗುಡ್ಡದ ಅಭಿವೃದ್ಧಿ ಅಸಾಧ್ಯ ಎಂದು ತೀರ್ಮಾನಿಸಿದಂತಿದೆ. ಸಂಸದರು, ಶಾಸಕರು, ಸಚಿವರು ಊರೊಳಗೆ ಒಮ್ಮೆ ಕಾಲಿಟ್ಟಿದ್ದರೆ ಜನರ ಕಷ್ಟ ಅನುಭವಕ್ಕೆ ಬರುತ್ತಿತ್ತು. ಚುನಾವಣಾ ಸಂದರ್ಭದಲ್ಲಿ ಮತಯಾಚಿಸಲು ಬರುವುದಕ್ಕೂ ಗುಂಡಿಗೆ ಗಟ್ಟಿ ಇಲ್ಲದ ಅಭ್ಯರ್ಥಿಗಳಿಗೆ ಆತ್ಮಸಾಕ್ಷಿಯ ಅಳುಕು ಕಾಡಿರಬಹುದು ಎಂಬುದು ಜನರ ಮಾತು.
ಇಲ್ಲಿನ ಸಂಕಟಗಳ ಸರಮಾಲೆಗೆ ಸ್ಪಂದಿಸಬೇಕಾದವರ ಮಾನವೀಯತೆ, ಹೃದಯವಂತಿಕೆ ಸತ್ತು ಹೋಗಿದೆಯೆಂದು ಗುಡ್ಡದ ಜನ ಸದ್ಯ ನಿರ್ಲಿಪ್ತರಾಗಿದ್ದಾರೆ. ಆದರೆ ಅಟ್ಟ ಸೇರಿದ ನಿರೀಕ್ಷೆಗಳ ಮೂಟೆ ಮಾತ್ರ ಜರಿದುಬಿದ್ದರೂ ಜೀವಂತವಾಗಿದೆ.
ಮಳೆಗಾಲ ಬದುಕು ಭಯಂಕರ
ಮಳೆಗಾಲದಲ್ಲಿ ಇಲ್ಲಿನ ಬದುಕು ಇನ್ನೂ ಭಯಂಕರ. ಕಡಿದಾದ ಇಳುಕಲ ಕಚ್ಚಾ ರಸ್ತೆ ಮೊದಲ ಮಳೆಗೇ ಕೊಚ್ಚಿಹೋಗಿರುತ್ತದೆ. ಆ ಸಂದರ್ಭದಲ್ಲಿ ಹೊರ ಜಗತ್ತಿನೊಂದಿಗೆ ಸಂಪರ್ಕವೇ ಅಸಾಧ್ಯ. ಕಾಯಿಲೆ ಪೀಡಿತರನ್ನು ಕಂಬಳಿಯಲ್ಲಿ ಕಟ್ಟಿ ಹೊತ್ತು ತರುವುದು ಇಲ್ಲಿನವರಿಗೆ ಮಾಮೂಲು ಸಂಗತಿ. ಪ್ರತಿ ಮಳೆಗಾಲದ ನಂತರ ಊರಿನ ಜನರೇ ತಕ್ಕಮಟ್ಟಿಗೆ ರಸ್ತೆ ಸಂಚಾರ ಯೋಗ್ಯ ಮಾಡಿಕೊಳ್ಳುವುದು ಅನಿವಾರ್ಯ. ಹೀಗಾಗಿ ವರ್ಷದ ಮೊದಲ ದೊಡ್ಡ ಮಳೆಗೆ ಮುನ್ನವೇ ಮುಂದಿನ 4-5 ತಿಂಗಳ ಮುಂಜಾಗ್ರತೆ ಸಿದ್ಧತೆ ಮಾಡಿಕೊಳ್ಳುತ್ತಾರೆ.
ಸಾಕಷ್ಟು ಬಾರಿ ನಮ್ಮ ಶಾಸಕರನ್ನು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಮೂಲ ಸೌಕರ್ಯ ಕಲ್ಪಿಸುವಂತೆ ಹಲವು ಮನವಿಗಳನ್ನೂ ನೀಡಲಾಗಿದೆ. ಆದರೆ ಸ್ಥಳೀಯರ ಯಾವುದೇ ಕೋರಿಕೆಗೆ ಅಧಿಕಾರಗಳ, ಜನಪ್ರತಿನಿಧಿಗಳ ಉತ್ತರವಿಲ್ಲ. ಗ್ರಾಮಸ್ಥರು ಕಳೆದ ವಿಧಾನಸಭಾ ಚುನಾವಣೆಯನ್ನು ಬಹಿಸ್ಕರಿಸುವ ನಿರ್ಧಾರ ಕೈಗೊಂಡಾಗ ಸ್ಥಳಕ್ಕಾಗಮಿಸಿದ ಕೆಲ ಅಧಿಕಾರಿಗಳು ಸಾಕಷ್ಟು ಭರವಸೆ ನೀಡಿದ್ದರು. ಚುನಾವಣೆ ನಂತರ ಯಾವ ಯೋಜನೆಯೂ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ.
ಕೃಷ್ಣ ಗಾಂವ್ಕರ, 
ಗ್ರಾಮದ ಹಿರಿಯ
ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ಊರಿನ ನೆನಪಾಗುತ್ತದೆ. ಊರಿನ ಸಮಸ್ಯೆಗಳನ್ನು ಅವರ ಮುಂದಿಟ್ಟಾಗ ಊರೇ ಮರೆತುಹೋಗುತ್ತದೆ. ನಾವೇ ಆರಿಸಿತಂದ ಶಾಸಕರಿಗೆ ನಮ್ಮ ಊರಿನ ಪರಿಚವಿಲ್ಲ. ಮುಂದಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿಯತ್ತ ಮುನ್ನೆಡೆಸಲಿ ಎಂಬುದು ಗ್ರಾಮಸ್ಥರ ಆಶಯ.
ರವಿ ಪೂಜಾರಿ,
ಸ್ಥಳೀಯ ನಿವಾಸಿ
 ಕೆ. ದಿನೇಶ ಗಾಂವ್ಕರ 
Advertisement

Udayavani is now on Telegram. Click here to join our channel and stay updated with the latest news.

Next