Advertisement

ರಾಸಾಯನಿಕ ವಸ್ತುಗಳಿಂದ ಕುಮುದ್ವತಿ ನದಿ ಕಲುಷಿತ

10:00 PM Dec 08, 2019 | Lakshmi GovindaRaj |

ನೆಲಮಂಗಲ: ಕುಮುದ್ವತಿ ನದಿಯಲ್ಲಿ ಮುಂಗಾರು ಮಳೆಯಿಂದ ಬಹಳಷ್ಟು ನೀರು ಸಂಗ್ರಹವಾಗಿ ಜಾನುವಾರಗಳು ಹಾಗೂ ಅಂತರ್ಜಲಕ್ಕೆ ಸಹಕಾರಿಯಾಗಿತ್ತು. ಆದರೆ ಖಾಸಗಿ ಕಂಪನಿಯೊಂದು ನೀರನ್ನು ವಿಷಯುಕ್ತಗೊಳಿಸಿದ್ದು, ಜಾನುವಾರುಗಳು ವಿಷಯುಕ್ತ ನೀರು ಕುಡಿಯುವ ಆತಂಕ ಗ್ರಾಮದ ಜನರಿಗೆ ಎದುರಾಗಿದೆ.

Advertisement

ತಾಲೂಕಿನ ಅರೆಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಅಲ್ಕೂರು ಗ್ರಾಮದ ಸಮೀಪದಲ್ಲಿ ಹಾದು ಹೋಗುವ ಕುಮುದ್ವತಿ ನದಿಗೆ ವಿಜಯನಗರದ ಜೆಎಸ್‌ಡಬ್ಲೂ ಎಂಬ ಕಂಪನಿಯು ರಾಸಾಯನಿಕ ವಸ್ತುಗಳು ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯವನ್ನು ರಾತ್ರಿ ವೇಳೆ ಸುರಿಯಲಾಗಿದೆ. ಇದರಿಂದ ಕೆಮಿಕಲ್‌ ಬಣ್ಣ, ಆಯಿಲ್‌ ಸೇರಿ ಮಿಶ್ರಿತ ನೀರು ಕುಡಿದು ಜಾನುವಾರುಗಳ ಅನಾರೋಗ್ಯಕ್ಕೆ ತುತ್ತಾಗಿವೆ.

ವಿಷಯುಕ್ತ ನೀರಿನ ಆತಂಕ: ಬೇಸಿಗೆಯ ದಣಿವಾರಿಸುವ ನದಿಗೆ ಚೆಕ್‌ ಡ್ಯಾಮ್‌ ನಿರ್ಮಿಸಿ, ನೀರಿನ ಸಂಗ್ರಹಣೆ ಹೆಚ್ಚಾಗುವಂತೆ ಮಾಡಲಾಗಿತ್ತು. ಆದರೆ ಕಂಪನಿ ಸುರಿದ ಕೆಮಿಕಲ್‌ನಿಂದ ಜಾನುವಾರುಗಳು ಕುಡಿಯುವ ನೀರು ವಿಷಯುಕ್ತವಾಗಿದೆ.ಸಮೀಪವಿರುವ ಕೊಳವೆ ಬಾವಿಗೆ ವಿಷಯುಕ್ತ ನೀರು ಸೇರಿದರೆ ಜನರ ಆರೋಗ್ಯ ಹದಗೆಟ್ಟು ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಅಲ್ಕೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರು ಸಾವು: ಜೆಎಸ್‌ಡಬ್ಲೂ ಎಂಬ ಕಂಪನಿಯು ವಿಷಯುಕ್ತ ವಸ್ತುಗಳನ್ನು ಕುಮುದ್ವತಿ ನದಿಯಲ್ಲಿನ ಸುರಿದ ಕಾರಣ ನದಿಯ ವಿಷಯುಕ್ತ ನೀರು ಕುಡಿದು ಐದು ದಿನಗಳ ಹಿಂದೆ ಕರು ಮೃತವಾಗಿದೆ. ತಕ್ಷಣ ನದಿಯಲ್ಲಿನ ತ್ಯಾಜ್ಯ ತೆಗೆದು ವಿಷಯುಕ್ತ ನೀರಿನಿಂದ ಜಾನುವಾರಗಳಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಜಾನುವಾರಗಳಿಗೆ ನೀರಿನ ಮೂಲ: ಕುಮುದ್ವತಿ ನದಿ ಸುತ್ತಮುತ್ತಲು ಹುಲ್ಲುಗಾವಲು, ಗೋಮಾಳ, ಪಾಳುಬಿದ್ದ ಜಾಗ ಇರುವುದರಿಂದ 30ಕ್ಕೂ ಹೆಚ್ಚು ಗ್ರಾಮದ ಸಾವಿರಾರು ದನಕರುಗಳು, ಮೇಕೆ, ಕುರಿಗಳು ಮೇವಿಗೆ ಆಶ್ರಯವಾಗಿದೆ.ಮೇವು ತಿಂದ ನಂತರ ಕುಡಿಯುವ ನೀರಿಗೆ ನದಿಯ ನೀರು ಅನಿವಾರ್ಯವಾಗಿದೆ.

Advertisement

ಪ್ರತಿಭಟನೆ: ಖಾಸಗಿ ಕಂಪನಿಗಳು ವಿಷಯುಕ್ತ ವಸ್ತುಗಳನ್ನು ಸುರಿದು ಹೋದರು ಗ್ರಾಪಂ ಹಾಗೂ ತಾಲೂಕು ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ರಾಸಾಯನಿಕ ಮಿಶ್ರಿತ ನೀರಿನಿಂದ ನಮ್ಮ ಜಾನುವಾರುಗಳನ್ನು ರಕ್ಷಣೆ ಮಾಡಿ ಎಂದು ಗ್ರಾಮದ ಜನರು ನದಿಯ ಸಮೀಪ ಪ್ರತಿಭಟನೆ ನಡೆಸಿದರು.

ಕುಮುದ್ವತಿ ನದಿ 30ಕ್ಕೂ ಹೆಚ್ಚು ಗ್ರಾಮಗಳ ಜಾನುವಾರಗಳಿಗೆ ಕುಡಿಯುವ ನೀರಿನ ಮೂಲ, ಜೆಎಸ್‌ಡಬ್ಲೂ ಎಂಬ ಕಂಪನಿ ಪದೇ ಪದೇ ರಾಸಾಯನಿಕ ಸುರಿದು ಹೋಗುವ ಮೂಲಕ ನೀರನ್ನು ವಿಷಯುಕ್ತಮಾಡಿದ್ದು, ನೀರು ಕುಡಿದ ಕರು ಮೃತಪಟ್ಟಿದೆ, ತಕ್ಷಣ ಗ್ರಾಪಂ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು.
-ಶ್ರೀನಿವಾಸ್‌, ಗ್ರಾಮಸ್ಥ

ನದಿಗೆ ಖಾಸಗಿ ಕಂಪನಿ ವಿಷಯುಕ್ತ ವಸ್ಯಗಳನ್ನು ಸುರಿದಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುತಿದ್ದೇನೆ, ಸ್ಥಳ ಪರಿಶೀಲಿಸಿ ಸೂಕ್ತಕ್ರಮಕೈಗೊಳ್ಳುತ್ತೇನೆ .
-ಎಂ. ಶ್ರೀನಿವಾಸಯ್ಯ, ತಹಶೀಲ್ದಾರ್‌

ಸ್ಥಳಕ್ಕೆ ಭೇಟಿ ನೀಡಿ ವಾಸ್ತವತೆಯಬಗ್ಗೆ ಮಾಹಿತಿ ಪಡೆದಿದ್ದೇನೆ, ಕಂಪನಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗುವುದು.
-ಶೈಲೇಂದ್ರ, ಗ್ರಾಮಪಂಚಾಯಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next