ಕುಮಟಾ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇಂದು ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಿಸಿದೆ. ಈ ಹಿಂದಿನಿಂದಲೂ ಸಾಧನೆಯ ಹಾದಿಯಲ್ಲಿ ನಿರಂತರವಾಗಿ ಮುನ್ನುಗ್ಗುತ್ತಿದ್ದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಕುಮಟಾ ತಾಲೂಕಿನ ವಿಧ್ಯಾರ್ಥಿಗಳು ಈ ಬಾರಿ 100 ಕ್ಕೆ 100 ಪ್ರತಿಶತ ಅಂಕ ಗಳಿಸಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ತಾಲೂಕಿನ ವಿದ್ಯಾಗಿರಿಯಲ್ಲಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಕೊಲಾಬಾ ವಿಠೋಬಾ ಶಾನಭಾಗ ಕಲಭಾಗಕರ್ (ಸಿವಿಎಸ್ ಕೆ) ಪ್ರೌಢಶಾಲೆಯ ದೀಕ್ಷಾ ನಾಯ್ಕ, ಕಾರ್ತಿಕ ಭಟ್ಟ ಹಾಗೂ ಮೇಘನಾ ಭಟ್ಟ 625ಕ್ಕೆ 625 ಅಂಕ ಪಡೆದು ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ್ದಾರೆ.
ಈ ಹಿಂದೆಯೂ ಓರ್ವ ವಿದ್ಯಾರ್ಥಿನಿ ಈ ಸಾಧನೆ ಮಾಡಿದ್ದಳು. ಸಿವಿಎಸ್ ಕೆ ಪ್ರೌಢಶಾಲೆಯ ಸುಮಾರು 32 ವಿದ್ಯಾರ್ಥಿಗಳು ಈ ಬಾರಿ ರಾಜ್ಯ ಮಟ್ಟದ ರ‍್ಯಾಂಕಿಂಗ್‌ನಲ್ಲಿ ಟಾಪ್ ಟೆನ್ ಸ್ಥಾನದಲ್ಲಿದ್ದು, ಶಾಲೆಯ ಶಿಕ್ಷಕರು ಕೂಡ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗೆ ಕುಳಿತ 152 ವಿದ್ಯಾರ್ಥಿಗಳಲ್ಲಿ, 23 ವಿದ್ಯಾರ್ಥಿಗಳು 99% ಕ್ಕಿಂತ ಹೆಚ್ಚು, 45 ವಿದ್ಯಾರ್ಥಿಗಳು 98%, 78 ವಿದ್ಯಾರ್ಥಿಗಳು 95%, 111 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಅತ್ಯಂತ ಅಭೂತಪೂರ್ವ ಸಾಧನೆಗೈದ ಮೂವರು ವಿದ್ಯಾರ್ಥಿಗಳು ಸಂಸ್ಥೆಯ ಶಿಕ್ಷಕ ವೃಂದ ಮುಖ್ಯಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಸಂಸ್ಥೆಯಲ್ಲಿ ಸೇರಿ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಟ್ಟ ಪಾಲಕ ವೃಂದದವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ನೂರಕ್ಕೆ ನೂರು ಫಲಿತಾಂಶ ದಾಖಲಿಸಿರುವ ವಿದ್ಯಾರ್ಥಿಗಳು ಹಾಗೂ ಪಾಲಕರು ಸಂತಸ ಹಂಚಿಕೊಂಡಿದ್ದು, ಮಕ್ಕಳ ಈ ಸಾಧನೆಗೆ ಪಾಲಕರೂ ಸಂತಸ ವ್ಯಕ್ತಪಡಿಸಿದ್ದು, ಮಕ್ಕಳ ಜೊತೆಗೆ ಶಿಕ್ಷಕರು, ಶೈಕ್ಷಣಿಕ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ್ದಾರೆ.