Advertisement

ಶಿಕ್ಷಣ ಕ್ಷೇತ್ರದಲ್ಲಿ ಕುಮಟಾ ತಾಲೂಕು ಮುಂದು: ನಾಯ್ಕ

02:14 PM Jun 08, 2019 | Team Udayavani |

ಕುಮಟಾ: ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರತಿಭಾ ಪುರಸ್ಕಾರ, ಶಿಷ್ಯವೇತನ ವಿತರಣೆ, ಗುರುವಂದನೆ, ಪಾಲಕರೊಂದಿಗೆ ಸಂವಾದ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

Advertisement

ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ತಾಲೂಕಿನಲ್ಲಿಂದು ಮಳೆಯಿಲ್ಲದೆ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ರ್‍ಯಾಂಕ್‌ಗಳ ಸುರಿಮಳೆ ಬರುತ್ತಿದೆ. ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯಲ್ಲಿಯೇ ಸಾಧನೆಗೈಯುತ್ತಿರುವ ಈ ಶಾಲೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಮಸಂತಸ ತಂದಿದೆ ಎಂದರು.

ಡಾ| ರವಿರಾಜ ಕಡ್ಲೆ ಮತ್ತು ಉಷಾ ದಂಪತಿ ಶಿಕ್ಷಕರನ್ನು ಸನ್ಮಾನಿಸಿದರು. ನಂತರ ಡಾ| ರವಿರಾಜ ಕಡ್ಲೆ ಮಾತನಾಡಿ, ಆಯ್ಕೆಯ ಯಾವುದೇ ಹೊಯ್ದಾಟವಿಲ್ಲದೇ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡು ನಮ್ಮ ಮಗನನ್ನು ಕಳುಹಿಸಿದ ನಿರೀಕ್ಷೆ ಹುಸಿಯಾಗದೇ ನಮಗೆ ತೃಪ್ತಿ ತಂದಿದೆ. ಈ ಶಾಲೆ ಈ ಭಾಗದ ಹೆಮ್ಮೆ ಎಂದ ಅವರು, ಶಾಲಾ ಶಿಕ್ಷಕ ವರ್ಗದವರನ್ನು ಶ್ಲಾಘಿಸಿದರು.

ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಮೋಹನ ಶಾನಭಾಗ ತಮ್ಮ ಮಾತೃಶ್ರೀ ಅವರ ಹೆಸರಿನಲ್ಲಿ ಶಿಷ್ಯವೇತನ ನೀಡಿದರು. ಆಯ್ದ ವಿದ್ಯಾರ್ಥಿಗಳಿಗೆ ಪ್ರತಿವರ್ಷದಂತೆ ನೋಟ್ಬುಕ್‌ಗಳನ್ನು ವಿತರಿಸಿ, ಆಡಳಿತ ಮಂಡಳಿ ಅನುಮೋದಿಸಿದರೆ ಈ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸುವಲ್ಲಿ ಶ್ರಮಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆನರಾ ಎಜ್ಯುಕೇಶನ್‌ ಸೊಸೈಟಿ ಸದಸ್ಯ ಕೃಷ್ಣದಾಸ ಪೈ ಶಾಲಾ ಪ್ರಗತಿ, ಸಾಧನೆಗೆ ಪ್ರೇರಕರಾದವರನ್ನು ಹಾಗೂ ಸಾಧಕರನ್ನು ಶ್ಲಾಘಿಸಿದರು.

Advertisement

ರಾಜ್ಯಮಟ್ಟದಲ್ಲಿ ರ್‍ಯಾಂಕ್‌ ಪಡೆದ ಪ್ರಣೀತ ರವಿರಾಜ ಕಡ್ಲೆ, ಶಾಲೆಗೆ ದ್ವಿತೀಯ ಸ್ಥಾನ ಪಡೆದ ವಿಶ್ವಾಸ ವೆಂಕಟೇಶ ಪೈ ಹಾಗೂ ತೃತೀಯ ಸ್ಥಾನ ಪಡೆದ ಗೌತಮಿ ಪರಮಯ್ಯ ಪಟಗಾರ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು. ನಿವೃತ್ತ ಶಿಕ್ಷಕಿ ಚಂದ್ರಕಲಾ ಮಾಪಾರಿ ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ನೀಡುವಂತೆ ರೂ. ಹತ್ತು ಸಾವಿರ ಮೊತ್ತವನ್ನು ಮುಖ್ಯಾಧ್ಯಾಪಕರಿಗೆ ಹಸ್ತಾಂತರಿಸಿದರು. ಮುಂದಿನ ದಿನಗಳಲ್ಲಿ ಅವಶ್ಯ ದತ್ತಿನಿಧಿ ಸ್ಥಾಪಿಸುವುದಾಗಿ ತಿಳಿಸಿದರು. ಮುಖ್ಯಾಧ್ಯಾಪಕ ಎನ್‌.ಆರ್‌. ಗಜು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸುರೇಶ ಪೈ ಫಲಿತಾಂಶ ವಿಶ್ಲೆಷಿಸಿದರು. ಕಿರಣ ಪ್ರಭು ಶಾಲೆಯ ಇತಿಹಾಸವನ್ನು ಪ್ರಸ್ತುತ ಪಡಿಸಿದರು. ವಿಷ್ಣು ಭಟ್ಟ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next