Advertisement

ರಾಜ್‌ಗಿಂತ ಅಂಬಿಗೆ ಹೆಚ್ಚು ಗೌರವ ನೀಡಿದ ಕುಮಾರ

12:49 PM Apr 14, 2019 | keerthan |

ಮದ್ದೂರು: ಅಂಬರೀಶ್‌ ಮಾಡದೇ ಬಿಟ್ಟಿರುವ ಅರ್ಧ ಕೆಲಸವನ್ನು ನಾವು ಮುಂದುವರೆಸಲು ಬಂದಿದ್ದೇವೆ ಎನ್ನುತ್ತಿದ್ದಾರೆ. ಅದು ಯಾವುದು, ಏನು ಕೆಲಸ ಅಂತ ನನಗೆ ಅರ್ಥವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಟಾಂಗ್‌ ನೀಡಿದರು.

Advertisement

ಮದ್ದೂರು ವಿಧಾನಸಭಾ ಕ್ಷೇತ್ರದ ಕ .ಹೊನ್ನಲಗೆರೆಯಲ್ಲಿ ನಿಖೀಲ್‌ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಅಂಬರೀಶ್‌ ಅವರಿಗೆ ರಾಜ್‌ಕುಮಾರ್‌ ಅವರಿಗಿಂತ ಹೆಚ್ಚಿನ ಗೌರವವನ್ನು ಕುಮಾರಣ್ಣ ಕೊಟ್ಟಿದ್ದಾರೆ. ಅದನ್ನು ಅವರು ಮರೆಯಬಾರದು. ಅಂಬರೀಶ್‌ಗೆ ರಾಜಕೀಯ ಜನ್ಮ
ನೀಡಿದ್ದು ನಾವು ಎಂದರು.

ಕಾವೇರಿ ನೀರಿಗಾಗಿ 25 ವರ್ಷ ಹೋರಾಟ ನಡೆಸಿದ್ದೇನೆ. ಕಾವೇರಿ ವಿಚಾರದಲ್ಲಿ ಅನ್ಯಾಯವಾದಾಗಲೆಲ್ಲಾ ಬೀದಿಗಿಳಿದು ಹೋರಾಟ ಮಾಡಿದ್ದೇವೆ. ಕನ್ನಂಬಾಡಿ
ಕಟ್ಟೆಯನ್ನು ಮೈಸೂರು ಮಹಾರಾಜರು ಕಟ್ಟಿಸಿದರು. ಕೇಂದ್ರದವರು ನಮ್ಮ ನೀರನ್ನು ನಮಗೇ ಬಿಡುವುದಕ್ಕೆ ತಗಾದೆ ತೆಗೆಯುತ್ತಾರೆ. ನಮ್ಮ ರೈತರಿಗೆ ಎರಡು ಬೆಳೆ ಬೆಳೆಯೋಕೆ ಸಾಧ್ಯವಿಲ್ಲ. 48 ಟಿಎಂಸಿ ನೀರನ್ನೂ ತಮಿಳುನಾಡಿಗೆ ಬಿಡಿ ಅಂತಾರೆ. ಈ ಬಗ್ಗೆ ಉಗ್ರ ಹೋರಾಟವನ್ನೇ ನಡೆಸಿದ್ದೇವೆ. ಇಷ್ಟೆಲ್ಲಾ ಹೋರಾಟ ನಡೆಸಿದ್ದು ರೈತರ ಸಲುವಾಗಿ, ಅವರ ಬದುಕಿನ ಸಲುವಾಗಿ ಎಂದರು.

ನಮ್ಮ ರಾಜ್ಯದ ಜನರು ಕುಡಿಯುವ ನೀರಿಗಾಗಿ ಸುಪ್ರೀಂಕೋರ್ಟ್‌ ಮುಂದೆ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಬಂದೊದಗಿದೆ. ತಮ್ಮ ನಿರಂತರ ಹೋರಾಟದ ಫ‌ಲವಾಗಿ ಇಂದು 14 ಟಿಎಂಸಿ ನೀರು ಹೆಚ್ಚುವರಿಯಾಗಿ ರಾಜ್ಯಕ್ಕೆದಕ್ಕಿದೆ. ರಾಜ್ಯದಿಂದ 18 ಮಂದಿ ಬಿಜೆಪಿ ಸಂಸದರಿದ್ದು ನಾಲ್ವರು ಕೇಂದ್ರ ಸಚಿವರಿದ್ದರೂ ರಾಜ್ಯದ ಪರ ಧ್ವನಿ ಎತ್ತದೆ ದೇವೇಗೌಡ ಏಕಾಂಗಿಯಾಗಿ ಹೋರಾಟ ನಡೆಸಿದ್ದೇನೆ. ಮುಂದೆಯೂ ರಾಜ್ಯಕ್ಕಾಗಿ ಹೋರಾಡುವ ಶಕ್ತಿಯಿದೆ.

ಇದಕ್ಕಾಗಿ ಮಧುಬಂಗಾರಪ್ಪ, ಪ್ರಜ್ವಲ್‌ ರೇವಣ್ಣ, ನಿಖೀಲ್‌ ಕುಮಾರಸ್ವಾಮಿ ಯಂತಹ ಯುವಕರನ್ನು ತಮ್ಮೊಟ್ಟಿಗೆ ಕಳುಹಿಸುವಂತೆ ಮನವಿ ಮಾಡಿದರು. ನನ್ನ 60 ವರ್ಷದ ರಾಜಕೀಯದಲ್ಲಿ ನಿಖೀಲ್‌ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಟೀಕೆಗಳಿಂದ ಹೆಚ್ಚು ನೋವಾಗಿದೆ. ನಾನು ಯಾರಿಗೂ ಅನ್ಯಾಯ ಮಾಡದೆ ಸೂಕ್ತ ಸ್ಥಾನಮಾನ ನೀಡಿದ್ದೇನೆ. ನಮ್ಮ ಪಕ್ಷ ಮತ್ತು ಕುಟುಂಬವನ್ನು ನಂಬಿದಯಾವೊಬ್ಬರಿಗೂ ಮೋಸಮಾಡಿದ  ಉದಾಹರಣೆ ಇಲ್ಲ. ಎಸ್‌.ಡಿ.ಜಯರಾಂ, ಎಂ.ಎಸ್‌.ಸಿದ್ದರಾಜು ಮರಣಾನಂತರ ಅವರ ಪತ್ನಿಯರಿಗೆ ಅವಕಾಶ ಕಲ್ಪಿಸಿದ್ದಾಗಿ ವಿವರಿಸಿದರು. ರಾಜ್ಯದ ಜನ ಇಂದಿನ ಎಲ್ಲಾ ಪರಿಸ್ಥಿತಿಯನ್ನು ಅವಲೋಕಿಸಿ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಮತಹಾಕಿ ತಮ್ಮ ಕೈ ಬಲಪಡಿಸುವಂತೆ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next