Advertisement

Kumbra: ನಾಪತ್ತೆಯಾಗಿದ್ದ ಯುವಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

10:46 PM Dec 08, 2023 | Team Udayavani |

ಪುತ್ತೂರು: ಕುಂಬ್ರದಲ್ಲಿ ಟಿಪ್ಪರ್‌ ಚಾಲಕನಾಗಿದ್ದ ಬಾಗಲಕೋಟೆ ಜಿಲ್ಲೆಯ ಯುವಕನೋರ್ವನನ್ನು ಇಪ್ಪತ್ತು ದಿನಗಳ ಹಿಂದೆ ಮೂವರು ಕರೆದುಕೊಂಡು ಹೋಗಿದ್ದು ಬಳಿಕ ಆತ ನಾಪತ್ತೆಯಾಗಿದ್ದ ಪ್ರಕರಣವೀಗ ಕೊಲೆಯಲ್ಲಿ ಅಂತ್ಯ ಕಂಡಿದೆ.

Advertisement

ಕುಂಬ್ರದ ಮಾತೃಶ್ರೀ ಅರ್ಥ್ ಮೂವರ್ ಸಂಸ್ಥೆಯಲ್ಲಿ ಟಿಪ್ಪರ್‌ ಡ್ರೈವರ್‌ ಆಗಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಬಾದಾಮಿ ಡಾಣಕಶಿರೂರು ಮೂಲದ ಹನುಮಂತ ಮಾದರ (22) ಕೊಲೆಯಾದ ಯುವಕ. ಆತನ ಮೃತದೇಹ ಆಗುಂಬೆ ಘಾಟ್‌ನ ಮೂರನೇ ತಿರುವಿನಲ್ಲಿ ಪತ್ತೆಯಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಇನ್ನೋರ್ವ ಪರಾರಿಯಾಗಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ.

ಏನಿದು ಘಟನೆ?
ಕೊಲೆಗೀಡಾದ ಹನುಮಂತ ಮಾದಾರನೂ ಆರೋಪಿಗಳಲ್ಲಿ ಓರ್ವನಾಗಿರುವ ಶಿವಪ್ಪ ಎಂಬಾತನ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿರುವುದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಶಿವಪ್ಪ ಮಾದರನೂ ಹನುಮಂತನ ಮಾವ ಮಂಜುನಾಥನಿಗೆ ಕರೆ ಮಾಡಿ ಹನುಮಂತನನ್ನು ಎಲ್ಲಿಗಾದರೂ ಕಳುಹಿಸು, ಇಲ್ಲದಿದ್ದರೆ ಸುಮ್ಮನೆ ಬಿಡಲ್ಲ ಎಂದಿದ್ದ ಎನ್ನಲಾಗಿದೆ. ಹೀಗಾಗಿ ಕುಂಬ್ರದಲ್ಲಿ ಜೆಸಿಬಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್‌ನನ್ನು ಸಂಪರ್ಕಿಸಿ ಹನುಮಂತನಿಗೆ ಅಲ್ಲಿ ಕೆಲಸ ಕೊಡಿಸಿದ್ದ. ಆತ ಕೆಲಸಕ್ಕೆ ಸೇರಿ ಆರು ದಿನಗಳಷ್ಟೇ ಆಗಿತ್ತು. ನ.17 ರಂದು ಈ ಮೂವರು ಆರೋಪಿಗಳು ಹನುಮಂತನನ್ನು ಕರೆದುಕೊಂಡು ಹೋಗಿದ್ದರು.

ಸ್ವಿಚ್‌ ಆಫ್‌
ನ. 17ರಂದು ಮಧ್ಯಾಹ್ನ ಶಿವಪ್ಪ ಮಂಜುನಾಥರಿಗೆ ಕರೆ ಮಾಡಿ ನಿನ್ನ ಅಕ್ಕನ ಮಗ ಸಿಕ್ಕಿದರೆ ಖಂಡಿತ ಬಿಡುವುದಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ. ಅದೇ ದಿನ ಸಂಜೆ 6.30 ಗಂಟೆಗೆ ಸಂತೋಷ್‌ಗೆ ಕರೆ ಮಾಡಿದ್ದ ಶಿವಪ್ಪನೂ ತನ್ನ ಸಹಚರರಾದ ಮಂಜುನಾಥ, ದುರ್ಗಪ್ಪ ಮಾದರ ಜತೆಗೆ ವಾಹನದಲ್ಲಿ ಕುಂಬ್ರಕ್ಕೆ ಬಂದು ಮಸೀದಿ ಬಳಿಯ ರೂಂನಲ್ಲಿದ್ದ ಹನುಮಂತ ಮಾದರನ‌ನ್ನು ಪುತ್ತೂರು ಕಡೆಗೆ ಕರೆದುಕೊಂಡು ಹೋಗಿದ್ದರು. ಆ ಬಳಿಕ ಹನುಮಂತನ ಮೊಬೈಲ್‌ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿತ್ತು. ಈ ಬಗ್ಗೆ ನ.19 ರಂದು ಬಾದಾವಿ ಪೊಲೀಸ್‌ ಠಾಣೆಯಲ್ಲಿ ಹನುಮಂತ ಮಾದರನ ತಾಯಿ ರೇಣವ್ವ ಮಾದರ ಹಾಗೂ ಮಾವ ಮಂಜುನಾಥ ದೂರು ನೀಡಿದ್ದರು.

ಆಗುಂಬೆ ಘಾಟಿಯಲ್ಲಿ ಪತ್ತೆ
ಹನುಮಂತ ನಾಪತ್ತೆಯಾಗಿರುವ ಬಗ್ಗೆ ಹನುಮಂತನ ತಾಯಿ ರೇಣವ್ವ ಹಾಗೂ ಮಾವ ಮಂಜುನಾಥ ಅವರು ಪುತ್ತೂರು ಗ್ರಾಮಾಂತರ ಠಾಣೆಗೆ ಬಂದು ನ.19 ರಂದು ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿ ನಾಪತ್ತೆ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದರು. ಹನುಮಂತನನ್ನು ಕರೆದುಕೊಂಡು ಹೋಗಿದ್ದ ಇಬರನ್ನು ವಶಕ್ಕೆ ಪಡೆದಾಗ ಕೊಲೆಯ ಮಾಹಿತಿ ಬಹಿರಂಗಗೊಂಡಿದೆ. ಆಗುಂಬೆ ಘಾಟ್‌ನ ಮೂರನೇ ತಿರುವಿನ ರಸ್ತೆ ಬಳಿ ಮೃತದೇಹ ಪತ್ತೆಯಾಗಿದ್ದು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಕತ್ತು ಹಿಸುಕಿ ಅಥವಾ ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಿರುವ ಶಂಕೆ ಮೂಡಿದೆ. ಬಂಧಿತರನ್ನು ಮಂಜುನಾಥ ಮತ್ತು ಶಿವಪ್ಪ ಎನ್ನಲಾಗಿದ್ದು ದುರ್ಗಪ್ಪ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಅನೈತಿಕ ಸಂಬಂಧ
ಕೊಲೆಗೆ ಹೇತು?
ಹನುಮಂತ ಮಾದರನೂ ಶಿವಪ್ಪ ಮಾದರನ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಸ್ವತಃ ಶಿವಪ್ಪ ಮಾದರನೇ ಆರೋಪಿಸಿದ್ದು ಹೀಗಾಗಿ ಇದೇ ಕಾರಣಕ್ಕೆ ಕೊಲೆ ಎಸಗಲಾಗಿದೆ ಎನ್ನಲಾಗಿದೆ. ಹನುಮಂತನ ಮಾವನಿಗೂ ಕರೆ ಮಾಡಿ ಅಕ್ರಮ ಸಂಬಂಧದ ಬಗ್ಗೆ ಶಿವಪ್ಪ ಹೇಳಿರುವುದರಿಂದ ಅನೈತಿಕ ಸಂಬಂಧವೇ ಕೊಲೆಗೆ ಕಾರಣವಾಗಿಬಹುದು ಎಂಬ ಶಂಕೆಗೆ ಪುಷ್ಠಿ ನೀಡಿದೆ.

ಸುಳಿವು ನೀಡಿದ ಗ್ರೂಪ್‌ ಫೋಟೋ
ಹನುಮಂತನನ್ನು ಊರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ವಾಹನದಲ್ಲಿ ಕುಂಬ್ರಕ್ಕೆ ಬಂದ ಮಂಜುನಾಥ, ಶಿವಪ್ಪ ಮತ್ತು ದುರ್ಗಪ್ಪನ ಪೋಟೋ ತೆಗೆದಿರಿಸುವಂತೆ ಟಿಪ್ಪರ್‌ ಮಾಲಕ ಮೋಹನ್‌ದಾಸ ರೈ ಅವರು ತನ್ನ ಕೆಲಸದವರಲ್ಲಿ ಹೇಳಿದ್ದರು. ಹಾಗಾಗಿ ಕೆಲಸದವರು ಆ ಮೂವರು ಪೋಟೋವನ್ನು ಮೊಬೈಲ್‌ನಲ್ಲಿ ತೆಗೆಸಿ ಇಟ್ಟುಕೊಂಡಿದ್ದರು. ಈ ಫೋಟೋವೇ ಆರೋಪಿಗಳನ್ನು ಹಿಡಿಯಲು ಪೊಲೀಸರಿಗೆ ನೆರವಾಗಿತ್ತು ಎನ್ನಲಾಗಿದೆ. ತನ್ನ ಸಂಸ್ಥೆಯಲ್ಲಿ ಯಾರೇ ಕೆಲಸಕ್ಕೆ ಸೇರಿದ್ದರೂ ಅವರ ಫೋಟೋ ಮತ್ತು ದಾಖಲೆಗಳನ್ನು ತೆಗೆದಿಟ್ಟುಕೊಳ್ಳುವ ಪರಿಪಾಠ ಹೊಂದಿದ್ದು ಇದೀಗ ಕೊಲೆ ಪ್ರಕರಣ ಪತ್ತೆಗೂ ಅನುಕೂಲಕವಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next