Advertisement

ಕುಂಭಾಸಿ ಮಕ್ಕಳ ಮನೆ: ಬುಟ್ಟಿ ತಯಾರಿಕೆ ಕಲಿಕೆ ಕಾರ್ಯಾಗಾರ

09:07 AM Jul 19, 2019 | sudhir |

ತೆಕ್ಕಟ್ಟೆ : ಕೊರಗ ಸಮುದಾಯ ಕಲೆ ಮತ್ತು ಸಂಸ್ಕೃತಿಗೆ ಅದರದ್ದೇ ಆದ ವಿಶಿಷ್ಟತೆ ಇದೆ. ಪ್ರಕೃತಿಯಲ್ಲಿನ ಲಭ್ಯ ವಸ್ತುಗಳನ್ನೇ ಬಳಸಿಕೊಂಡು ಸಾಂಪ್ರದಾಯಿಕ, ಆಕರ್ಷಕ ಶೈಲಿಯ ದಿನಬಳಕೆಯ, ಆಲಂಕಾರಿಕ ವಸ್ತುಗಳನ್ನು ತಯಾರಿಸುವುದರಲ್ಲಿ ಅವರು ಸಿದ್ಧಹಸ್ತರು. ಆಧುನಿಕ ಕಾಲದಲ್ಲಿ ಇಂತಹ ಉತ್ಪನ್ನಗಳ ನಿರ್ಮಾಣ, ಕೌಶಲ ಕ್ಷೀಣಿಸುತ್ತಿದ್ದು, ಅದರ ಉಳಿವಿಗಾಗಿ ಇಲ್ಲೊಂದು ಕಡೆ ಸದ್ದಿಲ್ಲದೆ ಕೆಲಸ ನಡೆಯುತ್ತಿದೆ.

Advertisement

ಬುಟ್ಟಿ ತಯಾರಿಕೆ ಕಲಿಕೆ
ಈ ನಿಟ್ಟಿನಲ್ಲಿ ಕೊರಗ ಶ್ರೇಯೋಭಿವೃದ್ಧಿ ಸಂಘ (ರಿ.) ಕುಂದಾಪುರ, ಜಿಲ್ಲಾ ಕೊರಗ ಸಂಘಟನೆ ಉಡುಪಿ, ಐಟಿಡಿಪಿ ಉಡುಪಿ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ಮಕ್ಕಳ ಮನೆ ಕುಂಭಾಸಿ ಇವರ ಜಂಟಿ ಆಶ್ರಯದಲ್ಲಿ ಕುಂಭಾಸಿ ಮಕ್ಕಳ ಮನೆಯಲ್ಲಿ ಸಾಂಪ್ರದಾಯಿಕ ಹಾಗೂ ನವೀನ ವಿನ್ಯಾಸದ ಬುಟ್ಟಿ ತಯಾರಿಕಾ ಕಲಿಕೆ ಸನಿವಾಸ ನಡೆಯುತ್ತಿದ್ದು, ಈ ಶಿಬಿರಕ್ಕೆ ಜು.15ರಂದು ಚಾಲನೆ ದೊರಕಿದೆ.

ಸಂಪ್ರದಾಯಕ್ಕೆ ಆಧುನಿಕ ಸ್ಪರ್ಶ
ಕುಂದಾಪುರ ಹಾಗೂ ಉಡುಪಿ ತಾಲೂಕಿನ ಕೊರಗ ಸಮುದಾಯದ ಸುಮಾರು 15 ಮಂದಿಗೂ ಅಧಿಕ ಯುವಕ ಯುವತಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದು 1 ತಿಂಗಳು ಸಂಪನ್ಮೂಲ ವ್ಯಕ್ತಿಗಳಾದ ಬಾಬು ಕೊರಗ ಜಪ್ತಿ, ದೀಪಾ ಹಾಗೂ ಕೇರಳ ಮೂಲದ ಬಿದಿರು ಕಲಾವಿದರಿಂದ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಪಡೆಯಲಿದ್ದಾರೆ. ಗೃಹೋಪಯೋಗಿ ವಸ್ತುಗಳಾದ ಹೂವಿನ ಕುಂಡ, ಲೈಟ್‌ಶೇಡ್‌, ಫ್ರೂಟ್‌ ಟ್ರೇ, ಹೇರ್‌ ಬ್ಯಾಂಡ್‌, ಬಿದಿರಿನ ಚಮಚ, ಪೆನ್‌ ಹೋಲ್ಡರ್‌, ಪಾತ್ರೆಗಳನ್ನು ಇರಿಸುವ ಬುಟ್ಟಿ ಮುಂತಾದ ವಸ್ತುಗಳನ್ನು ತಯಾರಿಸುವುದರೊಂದಿಗೆ ಹೊಸತನ ಹುಡುಕುವಲ್ಲಿ ಅಧ್ಯಯನ ಶೀಲರಾಗಿದ್ದಾರೆ.

Advertisement

ಮೂಲ ವಸ್ತುಗಳ ಕೊರತೆ
ನಮ್ಮ ಕುಲ ಕಸುಬು ಬುಟ್ಟಿ ತಯಾರಿಕೆ ಮಾಡುವಲ್ಲಿ ನನ್ನ ತಂದೆ ತಾಯಿ ಅತ್ಯಂತ ಪರಿಣತರಾಗಿದ್ದು ಅದರಲ್ಲಿಯೇ ಜೀವನ ನಿರ್ವಹಿಸುತ್ತಿದ್ದರು. ಕಷ್ಟವಿದ್ದರಿಂದ ಶಾಲೆಗೆ ಹೋಗಿಲ್ಲ. ಹಿಂದೆ ಕುಂದಾಪುರ ಸಂತೆಗೆ ಬಿದಿರಿನಿಂದ ಮಾಡಿದ ಬುಟ್ಟಿ, ಗೆರಸಿ, ಸಿಬಲು , ಹೆಡಿಗೆ ಮಾರಲು ಹೋಗುತ್ತಿದ್ದೆವು. ಕಳೆದ 20 ವರ್ಷಗಳಿಂದ ಬುಟ್ಟಿ ತಯಾರಿಸುತ್ತಿದ್ದೇವೆ. ಆದರೆ ಬದಲಾದ ಕಾಲದಲ್ಲಿ ತಯಾರಿಕೆಗೆ ಬೇಕಾದಂತಹ ಮೂಲ ವಸ್ತುಗಳ ಕೊರತೆ ಎದುರಿಸುತ್ತಿದ್ದೇವೆ.
-ಬಾಬು ಕೊರಗ ಜಪ್ತಿ, ಹಿರಿಯ ಸಂಪನ್ಮೂಲ ವ್ಯಕ್ತಿ

ಉಳಿಯುವಿಕೆಗಾಗಿ ಕಾರ್ಯಾಗಾರ
ಕೊರಗ ಸಮುದಾಯ ಕಲೆ ಮತ್ತು ಸಂಸ್ಕೃತಿಗಳ ಉಳಿವಿಗಾಗಿ ಶಿಕ್ಷಣದ ಜತೆಗೆ ಇಂತಹ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಇಂತಹ ಕಾರ್ಯಾಗಾರವನ್ನು ಆಯೋಜಿಸಿದ್ದೇವೆ. ಇಂತಹ ಕಲೆಗಳು ಅಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
-ಗಣೇಶ್‌ ವಿ., ಅಧ್ಯಕ್ಷರು, ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next