ತೆಕ್ಕಟ್ಟೆ : ಕುಂಭಾಶಿ ರಾ.ಹೆ.66 ಕೊರವಡಿ ಏಕದಂತ ಆಟೋ ಸರ್ವೀಸ್ ಸ್ಟೇಷನ್ ಎದುರು ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಟ್ಯಾಂಕರ್ ಢಿಕ್ಕಿಯಾಗಿ ಕಾರು ಸಂಪೂರ್ಣ ಜಖಂಗೊಂಡ ಘಟನೆ ನ.18ರಂದು ಬೆಳಗ್ಗೆ ಗಂಟೆ 8.40ರ ಸುಮಾರಿಗೆ ಸಂಭವಿಸಿದೆ.
ಘಟನೆ : ಕುಂದಾಪುರದಿಂದ ಕೋಟದ ಕಡೆಗೆ ಸಾಗುತ್ತಿದ್ದ ಮಾರುತಿ ಕಾರಿಗೆ ಅದೇ ಮಾರ್ಗದಿಂದ ಬರುತ್ತಿದ್ದ ಟ್ಯಾಂಕರ್ ಹಿಂಭಾಗಕ್ಕೆ ಬಂದು ಢಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಅಡ್ಡಲಾಗಿ ಬಂದು ಢಿಕ್ಕಿಯಾಗಿದೆ, ಘಟನೆಯ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು ಹಿಂಭಾಗದ ಚಕ್ರ ಮುರಿದು ಹೋಗಿದೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ.
ವಿರುದ್ಧ ದಿಕ್ಕಿನಿಂದ ಬಂದ ಗೂಡ್ಸ್ ವಾಹನ : ಮಾರುತಿ ಕಾರಿನಲ್ಲಿ ಕುಂದಾಪುರದ ಪ್ರಸಿದ್ದ ರಸಗೊಬ್ಬರದ ವ್ಯಾಪಾರಿಗಳಾದ ಕಾರಂತ ಸಹೋದರಿಯರು ಕೋಟದ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಗೂಡ್ಸ್ ವಾಹನವೊಂದು ಬಂದಿರುವ ಪರಿಣಾಮ ಕಾರು ಚಾಲಕ ಸಂಭವನೀಯ ಅವಘಡ ತಪ್ಪಿಸುವ ಭರದಲ್ಲಿ ಏಕಾಏಕಿ ಬಲಭಾಗಕ್ಕೆ ಚಲಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸರ್ವೀಸ್ ರಸ್ತೆ ಯೇ ಇಲ್ಲ ! : ರಾ.ಹೆ.66 ಚತುಷ್ಪಥ ಕಾಮಗಾರಿಯ ಸಂದರ್ಭದಲ್ಲಿ ಗ್ರಾಮೀಣ ಭಾಗದಿಂದ ಹಾದು ಹೋಗಿರುವ ಹೆದ್ದಾರಿಗೆ ಎರಡು ಕಡೆಗಳಲ್ಲಿ ಸರ್ವೀಸ್ ರಸ್ತೆಗಳೇ ಇಲ್ಲದೇ ಇರುವ ಪರಿಣಾಮ ಇಲ್ಲಿನ ಶಾಲಾ ಕಾಲೇಜು, ಆನೆಗುಡ್ಡೆ ಶ್ರೀ ವಿನಾಯಕ ದೇಗುಲ, ವಾಹನಗಳ ಶೋ ರೂಮ್ ಸೇರಿದಂತೆ ಗ್ರಾಮೀಣ ಸಂಪರ್ಕ ರಸ್ತೆಯಿಂದ ಕುಂಭಾಶಿ ಆನೆಗುಡ್ಡೆ ಪ್ರಮುಖ ಭಾಗಗಳಿಗೆ ಬರುವ ವಾಹನ ಸವಾರರು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿಗಳಿದೆ.
ಈ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಗೊಂದಲ ಏರ್ಪಟ್ಟು ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ಈ ಬಗ್ಗೆ ರಾ.ಹೆ. ಪ್ರಾಧಿಕಾರದವರು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಯುವ ಮುಖಂಡ ಸುಮಂತ್ ಕುಂಭಾಶಿ ಆಗ್ರಹಿಸಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಸಿಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
ಗ್ರೇಟ್ ಎಸ್ಕೇಪ್ ! :
ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಕಾರು ಏಕಾಏಕಿ ರಾ.ಹೆ. ಮಧ್ಯಭಾಗಕ್ಕೆ ಪ್ರವೇಶಿಸುತ್ತಿರುವುದನ್ನು ಅರಿತ ಟ್ಯಾಂಕರ್ ಚಾಲಕ ವಾಹನವನ್ನು ತತ್‌ಕ್ಷಣವೇ ನಿಯಂತ್ರಣ ತಂದಿರುವ ಪರಿಣಾಮ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಟ್ಯಾಂಕರ್ ಚಾಲಕನ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.