ತೆಕ್ಕಟ್ಟೆ: ಇಲ್ಲಿನ ಕುಂಭಾಶಿ ರಾ.ಹೆ.66 ಪ್ರಮುಖ ಭಾಗ ಪಾಕಶಾಲಾ ಹೋಟೆಲ್ ಸಮೀಪ ಹೋಂಡ ಡಿಯೋ ದ್ವಿಚಕ್ರ ವಾಹನ ,ಹುಂಡೈ ಗ್ರಾಂಡ್ ಐ10 ಕಾರು ಹಾಗೂ ಬಸ್‌ನ ನಡುವೆ ಸರಣಿ ಅಪಘಾತ ಸಂಭವಿಸಿ ಹೋಂಡ ಡಿಯೋ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಮಾ.26ರ ಮಧ್ಯಾಹ್ನ ಗಂಟೆ 12.45ರ ಸುಮಾರಿಗೆ ಸಂಭವಿಸಿದೆ.
ಘಟನೆ : ಇಲ್ಲಿನ ಪ್ರಮುಖ ಭಾಗದಲ್ಲಿರುವ ಪಾಕಶಾಲಾ ಹೋಟೆಲ್ ಸಮೀಪದ ಒಳ ಮಾರ್ಗದಿಂದ ಕಾರೊಂದು ಏಕಾಏಕಿ ರಾ.ಹೆ.66 ಪ್ರವೇಶಿಸಿದ್ದು , ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೋಂಡ ಡಿಯೋ ದ್ವಿಚಕ್ರ ವಾಹನಕ್ಕೆ ತಗುಲಿದೆ, ಪರಿಣಾಮ ದ್ವಿಚಕ್ರ ವಾಹನ ಸವಾರರು ಆಯಾತಪ್ಪಿ ರಸ್ತೆಗೆ ಉರುಳಿದಾಗ ಹಿಂದಿನಿಂದ ಬರುತ್ತಿದ್ದಂತೆ ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನದ ಮೇಲೆ ಹರಿದಿದೆ. ಘಟನೆಯ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಹುಂಡೈ ಗ್ರಾಂಡ್ ಐ10 ಕಾರಿನ ಬಲಭಾಗಗಳು ಕೂಡಾ ಸಂಪೂರ್ಣ ಜಖಂಗೊಂಡಿದೆ ಟಯರ್ ಪಂಕ್ಚರ್ ಆಗಿದೆ. ಅಪಫಾತ ಸಂಭವಿಸಿದ ಸಂದರ್ಭದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು ಅದೇ ಸಂದರ್ಭದಲ್ಲಿ ಲಾರಿಯೊಂದು ಎದುರಿನಲ್ಲಿ ಸಾಗುತ್ತಿದ್ದ ಸ್ವಿಫ್ಟ್ ಡಿಸಾೖಯರ್ ಕಾರಿಗೆ ಢಿಕ್ಕಿಯಾಗಿದ ಘಟನೆ ಕೂಡಾ ಸಂಭವಿಸಿದೆ.
ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಇಲ್ಲಿನ ಕೊರವಡಿ ಮಾಣಿಮನೆ ಬೆಟ್ಟು ನಿವಾಸಿ ಪ್ರಶಾಂತ್ ಪೂಜಾರಿ (28) ಹಾಗೂ ವಿಘ್ನೇಶ್ ಪೂಜಾರಿ (27) ಗಂಭೀರ ಗಾಯಗಳಾಗಿದ್ದು, ಪ್ರಶಾಂತ್ ಪೂಜಾರಿ ಅವರ ಸ್ಥಿತಿ ಗಂಭೀರವಾಗಿದ್ದು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಸಂಚಾರಿ ಪೊಲೀಸ್ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದೆ.
ಬೇಕಿದೆ ಸರ್ವೀಸ್ ರಸ್ತೆ : ಕುಂಭಾಶಿ ರಾ.ಹೆ.66 ರಸ್ತೆಯ ಎರಡು ಬದಿಯಲ್ಲಿ ವಿಸ್ತಾರವಾದ ಜಾಗಗಳೇ ಇಲ್ಲದೇ ಇರುವ ಪರಿಣಾಮ ಇಲ್ಲಿನ ಶಾಲಾ ಕಾಲೇಜಿಗೆ ತೆರಳು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ರಸ್ತೆಯ ಮೇಲೆ ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ನಿಯಮ ಮೀರಿ ರಸ್ತೆ ಇಕ್ಕೆಲಗಳಲ್ಲಿಯೇ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿ ತೆರಳುವುದರಿಂದ ಸಂಭವನೀಯ ಅವಘಡಗಳು ಸಂಭವಿಸಿ ಅದೆಷ್ಟೋ ಅಮಾಯಕ ಮುಗ್ಧ ಜೀವಗಳು ಬಲಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರ ಕುಂಭಾಶಿ -ಕೊರವಡಿ ಕ್ರಾಸ್‌ನ ಭಾಗದ ವರೆಗೆ ರಸ್ತೆಯ ಎರಡು ಕಡೆಗಳಲ್ಲಿ ವಿಸ್ತರಣೆಗೊಳಿಸಿ, ಸರ್ವೀಸ್ ರಸ್ತೆ ನಿರ್ಮಿಸುವ ಬಗ್ಗೆ ತುರ್ತುಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಯುವ ಮುಖಂಡ ಸುಮಂತ್ ಕೊರವಡಿ ಆಗ್ರಹಿಸಿದ್ದಾರೆ.