ಚನ್ನರಾಯಪಟ್ಟಣ/ಬಾಗೂರು: ಆಲಗೊಂಡನಹಳ್ಳಿ ಏತ ನೀರಾವರಿ ಯೋಜನೆಯಿಂದ ಕುಂಬಾರಹಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಎರಡು ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ ನೀಡಿದರು.
ತಾಲೂಕಿನ ಬಾಗೂರು ಹೋಬಳಿ ಕುಂಬಾರಹಳ್ಳಿ ಗ್ರಾಮದ ದೊಡ್ಡಮ್ಮ ದೇವಿ, ಚಿಕ್ಕಮ್ಮ ದೇವಿಯ ದೇವಾಲಯಗಳ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಈಗಾಗಲೇ ಮೈತ್ರಿ ಸರ್ಕಾರವು ಆಲಗೊಂಡನಹಳ್ಳಿ ಏತನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಿದೆ ಇದೇ ಯೋಜನೆಗೆ ಹೆಚ್ಚುವರಿಯಾಗಿ ಎರಡು ಕೋಟಿ ಅನುದಾನ ನೀಡಿ ಕುಂಬಾರಹಳ್ಳಿ ಕೆರೆಗೆ ನೀರು ತುಂಬಿಸಲಾಗುವುದು ಎಂದರು.
ಕೃಷ್ಣಾಪುರ ರಸ್ತೆ ಅಭಿವೃದ್ಧಿ: ಕುಂಬಾರಹಳ್ಳಿ ಗ್ರಾಮ ದಿಂದ ಕೃಷ್ಣಾಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತದೆ. ಗ್ರಾಮದಲ್ಲಿ ಹಲವು ಅಭಿವೃದ್ಧಿ ಕೆಲಸವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ ಬಾಗೂರು ಹೋಬಳಿಯ ಬಿ.ಕಾಳೇನಹಳ್ಳಿ, ಬ್ಯಾಡರಹಳ್ಳಿ ಕೆರೆಗಳನ್ನು ತುಂಬಿಸುವ ಯೋಜನೆಗೆ ವರದಿ ಸಿದ್ಧಪಡಿಸುವಂತೆ ನೀರಾವರಿ ಇಲಾಖೆ ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ, ಕೂರದಹಳ್ಳಿ, ಕೆ.ಮಲ್ಲೇನಹಳ್ಳಿ ಕೆರೆಗಳು ತುಂಬಿರುವುದ ರಿಂದ ಅಂತರ್ಜಲ ಮಟ್ಟ ಏರಿಕೆಯಾಗಿದೆ ಎಂದರು.
ಶಿಕ್ಷಣದೊಂದಿಗೆ ಸಂಸ್ಕಾರ ಕೊಡಿ: ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆದಿಚುಂಚನ ಗಿರಿ ಹಾಸನ ಶಾಖಾ ಮಠದ ಕಾರ್ಯದರ್ಶಿ ಶಂಭುನಾಥ ಸಾಮೀಜಿ ನೆರೆದಿದ್ದ ಭಕ್ತರಿಗೆ ಆಶೀರ್ವಚನೆ ನೀಡಿ ಗುರಿಯಿದ್ದರೆ ಅಲ್ಲಿ ಗುರುವು ಇರುತ್ತಾನೆ, ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೊಡಬೇಕು ಆಗ ಮಾತ್ರ ಅವರು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಕುಂಬಾರಹಳ್ಳಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ರೂ. ಅನುದಾನ ನೀಡಲಾಗಿತ್ತು ಗ್ರಾಮದ ಅಭಿವೃದ್ಧಿಗೆ ಸಹಕಾರ ಮಾಡುತ್ತೇನೆ. ಗ್ರಾಮದ ಎಲ್ಲರೂ ಒಗ್ಗಟ್ಟಿನಿಂದ ಶ್ರಮವಹಿಸಿ ದೇಗುಲವನ್ನು ನಿರ್ಮಾಣ ಮಾಡಿದ್ದೀರ ಇದೇ ಮಾದರಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿ ಹೇಳಿದರು.
ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಆರ್. ಮಂಜೇಗೌಡ, ಕುಂಬಾರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಮೇಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಶಿವಣ್ಣ, ನಿರ್ದೇಶಕ ಎಂ.ಶಂಕರ್, ಯುವ ಕಾಂಗ್ರೇಸ್ ಅಧ್ಯಕ್ಷ ಯುವರಾಜ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಮೂರ್ತಿ, ಗ್ರಾಮಸ್ಥರಾದ ಕುಮಾರ್.ಕೆ.ಟಿ.ಪ್ರಕಾಶ್, ಕೃಷ್ಣೇಗೌಡ, ನಂಜೇಗೌಡ ಮೊದಲಾದವರು ಉಪಸ್ಥಿತರಿದ್ದರು.