Advertisement

ಕಂಬಳ ಋತು ಯಶಸ್ವಿ ಮುಕ್ತಾಯ

04:04 AM Mar 18, 2019 | |

ಮಂಗಳೂರು: ವೇಣೂರು ಪೆರ್ಮುಡದ ಸೂರ್ಯಚಂದ್ರ ಜೋಡುಕರೆ ಕಂಬಳ ರವಿವಾರ ನಡೆಯುವುದರೊಂದಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಋತುವಿನ ಕಂಬಳಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಪ್ರಸಕ್ತ ಋತುವಿನ ಕಂಬಳ ನವೆಂಬರ್‌ನಲ್ಲಿ ಅರಂಭಗೊಂಡಿತ್ತು. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳು ಸೇರಿ ಒಟ್ಟು 18 ಕಂಬಳಗಳು ಆಯೋಜನೆಗೊಂಡಿದ್ದವು. 

Advertisement

ಕಾನೂನು ಸಮರಗಳ ನಡುವೆಯೂ ಕಂಬಳ ಕ್ರೀಡೆ ನಿರ್ವಿಘ್ನವಾಗಿ ಮುಕ್ತಾಯಗೊಂಡಿದರುವುದು ಕಂಬಳ ಪ್ರಿಯರಲ್ಲಿ ಸಮಾಧಾನ ಮೂಡಿಸಿದೆ. ಎಂಟು ತಿಂಗಳ ಬಳಿಕ ಮತ್ತೆ ನವೆಂಬರ್‌ನಲ್ಲಿ ಮುಂದಿನ ಕಂಬಳ ಋತು ಆರಂಭಗೊಳ್ಳಲಿದೆ.

ಬೆತ್ತ ಬಳಸದ ಪ್ರಯೋಗ
ಕಂಬಳದಲ್ಲಿ ಪ್ರಾಣಿಹಿಂಸೆ ಮಾಡಲಾಗುತ್ತಿದೆ ಎಂಬ ಪೀಪಲ್‌ ಫಾರ್‌ ದ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್‌ (ಪೆಟಾ) ಸಂಸೆœಯ ಆರೋಪಗಳ ಹಿನ್ನೆಲೆಯಲ್ಲಿ ಬೆತ್ತ ಹಿಡಿಯದೆ ಕೋಣಗಳನ್ನು ಓಡಿಸುವ ಪ್ರಯೋಗವನ್ನು ಈ ಬಾರಿ ಮಾಡಲಾ ಗಿದೆ. ಮೂಡುಬಿದಿರೆ, ಕಕ್ಕೆಪದವು ಹಾಗೂ ಪೈವಳಿಕೆ ಕಂಬಳಗಳಲ್ಲಿ ಕೋಣಗಳನ್ನು ಓಡಿಸುವಾಗ ಬೆತ್ತ ಬಳಕೆ ಮಾಡಿರಲಿಲ್ಲ. ಸುಮಾರು 4 ವರ್ಷಗಳ ಹಿಂದೆ ಕಟಪಾಡಿ ಕಂಬಳದಲ್ಲಿ ಈ ರೀತಿಯ ಪ್ರಯೋಗ ನಡೆದಿತ್ತು. ಸ್ಪಂಜ್‌ನಿಂದ ಆವರಿಸಿದ ಬೆತ್ತ  ರೂಪಿಸಿದ್ದರೂ ಇದನ್ನು ಕೋಣಗಳ ಮೇಲೆ ಸವರಿದಾಗ ದೊಡ್ಡ ಶಬ್ದ ಬರುವುದರಿಂದ ಬಳಕೆ ಮಾಡಿರಲಿಲ್ಲ.

ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಮಸೂದೆಗೆ ಕಳೆದ ವರ್ಷ ಫೆ. 10ರಂದು ರಾಷ್ಟ್ರಪತಿ ಅಂಕಿತ ಹಾಕಿ ಕಾನೂನು ಆಗಿ ಜಾರಿಗೊಂಡಿದ್ದರೂ ಕಂಬಳ ಕ್ರೀಡೆಯ ವಿರುದ್ಧ ಕಾನೂನು ಸಮರ ಮುಂದುವರಿದಿದೆ. ಇದರಿಂದಾಗಿ ಕಂಬಳ ಕ್ರೀಡೆ ಮೇಲೆ ಇರುವ ಆತಂಕದ ಕರಿಛಾಯೆ ಪೂರ್ಣ ನಿವಾರಣೆಯಾಗಿಲ್ಲ.

ಕಂಬಳಕ್ಕೆ ತಡೆ ಕೋರಿ ಪೆಟಾ (ಪೀಪಲ್‌ ಫಾರ್‌ ದ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್‌) ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಸಂವಿಧಾನ ಪೀಠದಲ್ಲಿ ವಿಚಾರಣೆಗೆ ಬಾಕಿ ಇದೆ. ತುಳುನಾಡಿನ ಜಾನಪದ ಕ್ರೀಡೆ ಕಂಬಳವು ಕಳೆದ 2 ವರ್ಷಗಳಿಂದ ಸುಗಮವಾಗಿ ಸಾಗುತ್ತಿದ್ದು, ಮುಂದೆಯೂ ಯಾವುದೇ ಅಡೆತಡೆ ಎದುರಾಗದು ಎಂಬ ವಿಶ್ವಾಸ ನಮ್ಮದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್‌. ಶೆಟ್ಟಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next