ಬೀದರ: ನಗರದ ಶ್ರೀ ಶುಕ್ಲತೀರ್ಥ ಶಿವಮಂದಿರದಲ್ಲಿ ಶ್ರಾವಣ ಮಾಸದ ಭಜನೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಿಮಿತ್ತ ನಾವದಗೇರಿ ಹನುಮಾನ ಮಂದಿರದಿಂದ ಕುಂಭ ಕಳಸದ ಭವ್ಯ ಮೆರವಣಿಗೆ ಶನಿವಾರ ನಡೆಯಿತು.
ಶ್ರೀ ದತ್ತಗಿರಿ ಮಹಾರಾಜ ಆಶ್ರಮ, ಶ್ರೀ ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ತಾಲೂಕಿನ ಚಾಂಬೋಳ ಸಂಸ್ಥಾನ ಮಠದ ಶ್ರೀ ರುದ್ರಮಣಿ ಪಟ್ಟದ್ದೇವರು, ಗಾದಗಿಯ ಶ್ರೀ ಗುರು ವೈಜಿನಾಥ ಶಿವಾಚಾರ್ಯರು, ಶ್ರೀ ಸಿದ್ಧಲಿಂಗ ಅಪ್ಪಾ, ಶ್ರೀ ನಿರ್ಮಲಾನಂದ ಸ್ವಾಮಿ ಅವರು ಭಾಗವಹಿಸಿದ್ದರು.
ನಾವದಗೇರಿ ಹನುಮಾನ ಮಂದಿರದಿಂದ ನೂರಾರು ಮಹಿಳೆಯರು ತುಂಬಿದ ಕಳಸ ಹೊತ್ತು ಮೆರವಣಿಗೆಗೆ ಮೆರಗು ತಂದರು. ಡೊಳ್ಳು ಕುಣಿತ, ಹಲಗೆ ಕುಣಿತ, ಧ್ವಜ ಕುಣಿತ ಜನಮನ ಸೆಳೆದವು.
ಶುಕ್ಲತೀರ್ಥ ಸೇವಾ ಸಮಿತಿ ಗೌರವಾಧ್ಯಕ್ಷ ಓಂಪ್ರಕಾಶ ಬಜಾರೆ ಹಾಗೂ ಉಪಾಧ್ಯಕ್ಷಶಿವರಾಜ ಬೆನಕನಳ್ಳಿಕರ್ ದಂಪತಿಗಳ ನೇತೃತ್ವದಲ್ಲಿ ರುದ್ರಾಭಿಷೇಕ ಮುಂತಾದ ಧಾರ್ಮಿಕ ಪೂಜೆಗಳು ನಡೆದವು.
ಬರದಿಪುರದ 11 ಪೂಜಾರಿಗಳು ಹೋಮ, ಹವನ ನಡೆಸಿಕೊಟ್ಟರು. ಭಕ್ತಾದಿಗಳು ಶಿವಮಂದಿರದಲ್ಲಿ ದೇವರ ದರ್ಶನ ಪಡೆದು ಮಹಾ ಪ್ರಸಾದ ಸ್ವೀಕರಿಸಿದರು. ಎಪಿಎಂಸಿ ಉಪಾಧ್ಯಕ್ಷ ಮಾರುತಿರಾವ ಕೋಲಿ, ಸಮಿತಿಯ ರಾಜಕುಮಾರ ಗುನ್ನಳ್ಳಿಕರ್, ಸಂಗಪ್ಪ ಬಿಕ್ಲೆ, ಅನೀಲ ರಾಜಗೀರಾ, ಭೀಮಾಶಂಕರ ಪಾಟೀಲ, ಶ್ರಾವಣಕುಮಾರ, ದೀಪಕ ಮೇಳೆ, ವೀರಶೆಟ್ಟಿ ಹಳೆಂಬರ ಮತ್ತು ಬಸವರಾಜ ಮಂಠಾಳೆ, ಫರ್ನಾಂಡಿಸ್ ಹಿಪ್ಪಳಗಾಂವ, ವಿಜಯಕುಮಾರ ಸೋನಾರೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.