Advertisement

ರಾಹುಲ್‌ ಭೇಟಿಯಾಗ್ತಾರಾ ಎಚ್‌ಡಿಕೆ ?

07:01 AM Dec 27, 2018 | |

ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಗುರುವಾರ ಸಂಪುಟ ಪುನಾರಚನೆ ನಂತರದ ಬೆಳವಣಿಗೆಗಳ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ರಾಹುಲ್‌ಗಾಂಧಿಯವರನ್ನು ಭೇಟಿ ಮಾಡುವ ಪೂರ್ವನಿಗದಿತ ಕಾರ್ಯಕ್ರಮ ಇಲ್ಲದಿದ್ದರೂ ಅವಕಾಶ ಕೋರಿದ್ದು ಅನುಮತಿ ದೊರೆತರೆ ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.

Advertisement

ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಪಟ್ಟಿ, ಸಂಸದೀಯ ಕಾರ್ಯದರ್ಶಿಗಳ ಪಟ್ಟಿ, ದೆಹಲಿ ರಾಜಕೀಯ ಪ್ರತಿನಿಧಿ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ನೇಮಕ ಸಂಬಂಧ ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿಯಾದ ತಮ್ಮ ಬಳಿ ಚರ್ಚಿಸದೆ ತೀರ್ಮಾನಿಸಿದ್ದಾರೆ ಎಂದು ಕುಮಾರಸ್ವಾಮಿ ಅಸಮಾಧಾನಗೊಂಡಿದ್ದು ಆ ಬಗ್ಗೆಯೂ  ರಾಹುಲ್‌ ಬಳಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ವಿ.ಮುನಿಯಪ್ಪ ಅವರ ಹೆಸರು ಶಿಫಾರಸು ಮಾಡಿರುವುದು ಸಹ ಕುಮಾರ ಸ್ವಾಮಿ ಹಾಗೂ ದೇವೇಗೌಡರ ಬೇಸರಕ್ಕೆ ಕಾರಣವಾಗಿದೆ. ಜೆಡಿಎಸ್‌ ಮುಖ್ಯಮಂತ್ರಿಗೆ ಕಾಂಗ್ರೆಸ್‌ ರಾಜಕೀಯ ಕಾರ್ಯದರ್ಶಿ ಯಾಕೆ ಎಂದು ಗೌಡರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿಯವರು ಮಧು ಬಂಗಾರಪ್ಪ ಅಥವಾ ಸುರೇಶ್‌ಬಾಬು ಅವರನ್ನು ರಾಜಕೀಯ ಕಾರ್ಯ ದರ್ಶಿಯಾಗಿ ನೇಮಿಸಿಕೊಳ್ಳಲು ಬಯಸಿದ್ದರು ಎಂದು ಹೇಳಲಾಗಿದೆ. ಬೆಂಗಳೂರಿನಿಂದ ದೆಹಲಿಗೆ ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಜತೆಯೇ ಪ್ರಯಾಣಿಸಿದ ಮುಖ್ಯಮಂತ್ರಿ ಅವರ ಬಳಿಯೂ ನೇಮಕಾತಿಗಳ ನಿರ್ಧಾರ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. 

12 ಕ್ಷೇತ್ರಗಳಿಗೆ ಪಟ್ಟು
ಲೋಕಸಭೆ ಚುನಾವಣೆ ಮೈತ್ರಿ ಸಂಬಂಧ ಜೆಡಿಎಸ್‌ 28 ಕ್ಷೇತ್ರಗಳ ಪೈಕಿ 12 ಕ್ಷೇತ್ರ ಬಿಟ್ಟುಕೊಡುವಂತೆ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಇತ್ತೀಚೆಗೆ ಪಕ್ಷದ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಈ ಬೇಡಿಕೆ ಕೇಳಿಬಂದಿದೆ. ಜೆಡಿಎಸ್‌ ವರಿಷ್ಠ ದೇವೇಗೌಡರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಮುಂದೆ 12 ಸ್ಥಾನಗಳ ಕೋರಿಕೆ ಪ್ರಸ್ತಾವನೆ ಇಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಈ ಕುರಿತು ಇನ್ನೂ ಯಾವುದೇ ಅಧಿಕೃತ ಚರ್ಚೆಗಳು ಪ್ರಾರಂಭವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next