ಚಿತ್ರದುರ್ಗ: ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪಾಕ್ ಮೇಲೆ ಬಹಳ ಪ್ರೀತಿ ಬೆಳೆಯುತ್ತಿದೆ. ಪಾಕ್ ಮೇಲೆ ಪ್ರೀತಿಯಿರುವ ಕುಮಾರಸ್ವಾಮಿ ಭಾರತ ದೇಶ ಬಿಟ್ಟು ತೊಲಗಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಮಾಜಿ ಪ್ರಧಾನಿ ಪುತ್ರ, ಎರಡು ಸಲ ಮುಖ್ಯಮಂತ್ರಿ ಆಗಿದ್ದವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಪಾಕಿಸ್ಥಾನ ತೋರಿಸಿಕೊಂಡು ಬಿಜೆಪಿ ವೋಟ್ ಪಡೆಯುತ್ತಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.
ಭಾರತ ಹಿಂದೂ ರಾಷ್ಟ್ರ ಇಲ್ಲಿ ಎಲ್ಲರೂ ಸಮಾನರಾಗಿ ಬಾಳಬೇಕು. ದೇಶ ಒಡೆಯುವ ಷಡ್ಯಂತ್ರಕ್ಕಾಗಿ ಇಲ್ಲಸಲ್ಲದ ಮಾತು ಸರಿಯಲ್ಲ. ದೇಶದ ಜನತೆ ಒಂದಾಗುತ್ತಿದ್ದಾರೆ. ವೋಟ್ ಬ್ಯಾಂಕ್ ಹೋಗುತ್ತಿದೆ ಎಂಬ ಕಾರಣಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ಧರಾಮಯ್ಯ ಇಂಗ್ಲಿಷ್ ಪದ ಬಳಸಿ ಟೀಕಿಸುತ್ತಾರೆ. ಇತ್ತೀಚಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಕಾಣಿಸ್ತಿಲ್ಲ, ಯಾರಿಗೂ ಬೇಡದ ವ್ಯಕ್ತಿ ಆಗಿದ್ದಾರೆ.ವಿಪಕ್ಷ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಲಾಭಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಡೆತ್ ಆಗಿರುವ ಪಾರ್ಟಿ ಆಗಿದೆ. ಲೀಡರ್ ಗಳು ಕೂಡಾ ಡೆತ್ ಆದಂತಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಚೀನಾದಲ್ಲಿ ಪತ್ತೆಯಾಗಿರುವ ಕರೋನಾ ವೈರಸ್ ಭಾರತ ಪ್ರವೇಶಿಸದಂತೆ ಕ್ರಮ ವಹಿಸಲಾಗಿದೆ. ಏರ್ಪೋರ್ಟ್ ನಲ್ಲಿ ತಂಡ ನಿಯೋಜಿಸಲಾಗಿದೆ. ಚೀನಾದಲ್ಲಿ ಇರುವವರ ಕುಟುಂಬಗಳ ಬಗ್ಗೆಯೂ ನಿಗಾ ವಹಿಸಲಾಗಿದೆ ಎಂದು ಶ್ರೀರಾಮುಲು ಹೇಳಿದರು.