Advertisement

ಯಾರ ವಿಶ್ವಾಸಕ್ಕೆ ಆಯುಸ್ಸು?

12:52 AM Jul 18, 2019 | Team Udayavani |

ಹೊಸದಿಲ್ಲಿ/ಬೆಂಗಳೂರು: ಒಂದು ಕಡೆ ಅತೃಪ್ತ ಶಾಸಕರಿಗೆ ಸದನಕ್ಕೆ “ಕಡ್ಡಾಯ’ ಹಾಜರಿಯಿಂದ ವಿನಾಯಿತಿ; ಮತ್ತೂಂದೆಡೆ ಸ್ಪೀಕರ್‌ಗೆ “ಅಧಿಕಾರ’ದ ರಿಲೀಫ್!

Advertisement

ಇದು ಸುಪ್ರೀಂ ಕೋರ್ಟ್‌ ಬುಧವಾರ ನೀಡಿದ ಮಧ್ಯಾಂತರ ಆದೇಶದ ಸಾರ. ಕರ್ನಾಟಕ ರಾಜ್ಯ ಸರಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವಂಥ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌, “ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ’ ಎಂಬಂತಹ ಆದೇಶ ನೀಡಿದೆ. ಒಂದು ರೀತಿಯಲ್ಲಿ ಈ ಆದೇಶ ದಿಂದ ಅತೃಪ್ತ ಶಾಸಕರು ಖುಷಿಗೊಂಡಿದ್ದರೆ, ತಮ್ಮ ಜವಾಬ್ದಾರಿಯನ್ನು ಕೋರ್ಟ್‌ ಎತ್ತಿಹಿಡಿದಿದೆ ಎಂದು ಸ್ಪೀಕರ್‌ ಸಂತಸಗೊಂಡಿದ್ದಾರೆ. ಆದರೆ ಈ ಆದೇಶ ಗುರುವಾರ ವಿಶ್ವಾಸಮತ ಯಾಚಿಸಲಿರುವ ಸಿಎಂ ಕುಮಾರಸ್ವಾಮಿ ಅವರಿಗೆ ರಿಲೀಫ್ ಕೊಡುತ್ತದೆಯೋ ಅಥವಾ ಆಘಾತ ಕೊಡುತ್ತದೆಯೋ ಎಂಬುದನ್ನು ಮಾತ್ರ ಕಾದು ನೋಡಬೇಕು.

ಸುಪ್ರೀಂ ಕೋರ್ಟ್‌ನ ಈ ತೀರ್ಪು ರಾಜಕೀಯ ಪಕ್ಷಗಳಲ್ಲೇ ನಾನಾ ರೀತಿಯ ವ್ಯಾಖ್ಯಾನಕ್ಕೂ ಕಾರಣವಾಗಿದೆ. ಒಮ್ಮೆ, ಅತೃಪ್ತ ಶಾಸಕರಿಗೂ ವಿಪ್‌ ಜಾರಿಗೊಳಿಸಬಹುದು ಎಂದು ಕಾಂಗ್ರೆಸ್‌ ಹೇಳಿದರೆ, ಬಿಜೆಪಿ ಈ ವಿಪ್‌ನಿಂದಲೇ ಸುಪ್ರೀಂ ಕೋರ್ಟ್‌ ಅತೃಪ್ತ ಶಾಸಕರಿಗೆ ಮುಕ್ತಿ ನೀಡಿದೆ ಎಂದು ವಾದಿಸಿದೆ. ಹೀಗಾಗಿ ಈ ತಿಕ್ಕಾಟ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ.

ಸುಪ್ರೀಂ ಹೇಳಿದ್ದೇನು?
15 ಅತೃಪ್ತ ಶಾಸಕರು ವಿಧಾನಸಭೆ ಕಲಾಪಕ್ಕೆ ಕಡ್ಡಾಯ ವಾಗಿ ಹಾಜರಾಗಲೇಬೇಕು ಎಂದು ನಿರ್ದೇ ಶಿಸುವಂತಿಲ್ಲ. ಕಲಾಪದಲ್ಲಿ ಭಾಗಿಯಾಗಿವುದು, ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು ಎಂದು ಆದೇಶ ನೀಡುವ ಮೂಲಕ ಸುಪ್ರೀಂ ಕೋರ್ಟ್‌ ಅತೃಪ್ತರ ಮನವಿಗೆ ಸ್ಪಂದಿಸಿ, ಅವರನ್ನು “ಅನರ್ಹತೆ’ಯ ಅಸ್ತ್ರದಿಂದ ರಕ್ಷಿಸಿದೆ. ಮತ್ತೂಂದೆಡೆ, ಬಂಡಾಯ ಶಾಸಕರ ರಾಜೀನಾಮೆಗೆ ಸಂಬಂಧಿಸಿ ಸ್ಪೀಕರ್‌ ತಮಗೆ ಸೂಕ್ತ ಎನಿಸಿದ ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಹೊಂದಿ ದ್ದಾರೆ ಎಂದೂ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಫೈನಲ್‌ ಬಾಕಿಯುಂಟು
ಮಧ್ಯಾಂತರ ಆದೇಶ ಪ್ರಕಟಿಸಿದ ಸಿಜೆಐ ರಂಜನ್‌ ಗೊಗೊಯ್‌, ನೇತೃತ್ವದ ತ್ರಿಸದಸ್ಯ ಪೀಠ, “ಸ್ಪೀಕರ್‌ಗೆ ನಿರ್ದೇಶನ ನೀಡುವ ಅಧಿಕಾರ ಸುಪ್ರೀಂ ಕೋರ್ಟ್‌ ಗಿದೆಯೇ, ಇಲ್ಲವೇ ಎಂಬ ಕುರಿತು ಪರಿಶೀಲಿಸಿ ನಿರ್ಧರಿಸಲಾಗುವುದು’ ಎಂದು ಹೇಳಿದೆ.

Advertisement

ಅಲ್ಲದೆ, ಪ್ರಸ್ತುತ ಸನ್ನಿವೇಶದಲ್ಲಿ ಸಾಂವಿಧಾನಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕಾದ್ದು ಅತ್ಯಗತ್ಯ ಎಂದೂ ಆದೇಶದಲ್ಲಿ ಉಲ್ಲೇಖೀಸಿದೆ.

ಅಧಿವೇಶನಕ್ಕೆ ಹಾಜರಾಗುವುಲ್ಲ
ಸುಪ್ರೀಂ ಕೋರ್ಟ್‌ನ ಮಧ್ಯಾಂತರ ಆದೇಶವನ್ನು ಸ್ವಾಗತಿಸಿರುವ ಮುಂಬಯಿಯಲ್ಲಿರುವ ಅತೃಪ್ತ ಶಾಸಕರು, ರಾಜೀನಾಮೆಯನ್ನು ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಜತೆಗೆ ಗುರುವಾರ ನಾವು ಅಧಿವೇಶನಕ್ಕೆ ಹಾಜರಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಮುಂಬಯಿ ಯಲ್ಲಿರುವ ಎಲ್ಲ ಶಾಸಕರು ಒಟ್ಟಾಗಿ ಒಂದು ವೀಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದು, ತೀರ್ಪಿನಿಂದ ಸಂತಸವಾಗಿದೆ ಎಂದಿದ್ದಾರೆ.

ಸ್ಪೀಕರ್‌ ಅಂಗಳಕ್ಕೆ ಚೆಂಡು
ಶಾಸಕರ ರಾಜೀನಾಮೆ ವಿಚಾರ ದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಹೊರಬಿದ್ದಿದೆಯಾದರೂ ಒಂದರ್ಥದಲ್ಲಿ ಚೆಂಡು ಮತ್ತೆ ಸ್ಪೀಕರ್‌ ಅಂಗಳಕ್ಕೆ ಬಂದಂತಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರುವ 15 ಶಾಸಕರನ್ನು ಅಧಿವೇಶನಕ್ಕೆ ಹಾಜರಾಗಲು ಒತ್ತಡ ಹೇರ ಬಾರದು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆಯಾದರೂ ವಿಪ್‌ ವಿಚಾರ ಪ್ರಸ್ತಾವ ಮಾಡಿಲ್ಲ, ಅನರ್ಹತೆ ಕುರಿತು ಹೇಳಿಲ್ಲ.

ಯಾವುದೇ ಒಂದು ರಾಜಕೀಯ ಪಕ್ಷದ ಚಿಹ್ನೆಯಡಿ ಶಾಸಕರಾಗಿ ಆಯ್ಕೆಯಾದವರು ಆ ಪಕ್ಷದ ವಿಪ್‌ಗೆಒಳಪಡುತ್ತಾರೆ. ವಿಪ್‌ ಆ ಪಕ್ಷ ಹಾಗೂ ಸದಸ್ಯನಿಗೆ ಸಂಬಂಧಿಸಿದ್ದಾಗಿರುವುದರಿಂದ ಅದರ ವ್ಯಾಪ್ತಿಗೆ ಒಳಪಡಲಿದ್ದಾರೆ, ಅನರ್ಹತೆ ಬಗ್ಗೆಯೂ ಸ್ಪೀಕರ್‌ ತೀರ್ಮಾನ ಕೈಗೊಳ್ಳಬಹುದು ಎಂಬ ಆಶಾಭಾವನೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರಿಗೆ ಇದ್ದಂತಿದೆ.

ಅನರ್ಹತೆಗೊಂಡರೆ ಉಪ ಚುನಾವಣೆಗೂ ಸ್ಪರ್ಧೆ ಮಾಡುವಂತಿಲ್ಲ, ಹೊಸ ಸರಕಾರ ಬಂದರೆ ಸಚಿವರೂ ಆಗುವಂತಿಲ್ಲ ಎಂದಾದರೆ ಆ ಭಯದಿಂದ ಅತೃಪ್ತರು ವಾಪಸ್ಸಾಗಲಿದ್ದಾರೆ ಎಂಬ ನಿರೀಕ್ಷೆ ಈ ಎರಡೂ ಪಕ್ಷಗಳ ನಾಯಕರದ್ದಾಗಿದೆ.

ರಾಜಕೀಯ ಪಕ್ಷಗಳಲ್ಲೇ ವಿಪ್‌ ಗೊಂದಲ
ಬೆಂಗಳೂರು: ಶಾಸಕರ ರಾಜೀನಾಮೆ ಅಂಗೀಕಾರ ವಿಚಾರ ದಲ್ಲಿ ಸುಪ್ರೀಂ ತೀರ್ಪು ಹಿನ್ನೆಲೆಯಲ್ಲಿ ಈಗ ವಿಪ್‌ ಅನ್ವಯವಾಗುತ್ತಾ? ಇಲ್ಲವಾ? ಅನರ್ಹತೆ ವಿಚಾರ ಏನಾಗಲಿದೆ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ. ಹಾಗಾದರೆ ರಾಜಕೀಯ ಪಕ್ಷಗಳು ಹೇಳುವುದೇನು?

ವಿಪ್‌ ಅನ್ವಯವಾಗಲ್ಲ: ಬಿಜೆಪಿ
ಮಧ್ಯಾಂತರ ತೀರ್ಪಿನಲ್ಲಿ ಅತೃಪ್ತ ಶಾಸಕರು ಗುರುವಾರ ನಡೆಯಲಿರುವ ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಯಾರೂ ಒತ್ತಡ ಹೇರುವಂತಿಲ್ಲ ಎಂದು ತಿಳಿಸಿದೆ. ಆದರೆ ಬಿಜೆಪಿ ನಾಯಕರು ಅತೃಪ್ತರಿಗೆ ಆಯಾ ಪಕ್ಷಗಳು ಜಾರಿಗೊಳಿಸುವ “ವಿಪ್‌’ ಅನ್ವಯವಾಗದು. ಹಿಂದೆ ಜಾರಿಗೊಳಿಸಿರುವ “ವಿಪ್‌’, ಸುಪ್ರೀಂ ನೀಡಿದ ಮಧ್ಯಾಂತರ ತೀರ್ಪಿನ ಬಳಿಕ ವಿಪ್‌ ಜಾರಿಗೊಳಿಸಿದರೆ ಅದು ಸಹ ಅತೃಪ್ತ ಶಾಸಕರಿಗೆ ಅನ್ವಯವಾಗುವುದಿಲ್ಲ.

ಗೈರಾದರೆ ವಿಪ್‌ ಅನ್ವಯ: ಮೈತ್ರಿ ಪಕ್ಷ
ಸ್ಪೀಕರ್‌ಗೆ ಶಾಸಕರನ್ನು ಕರೆಸಿಕೊಳ್ಳುವ ಅಧಿಕಾರ ವಿದೆ. ಸುಪ್ರೀಂ ಕೋರ್ಟ್‌ ವಿಪ್‌ ಅಥವಾ ಅನರ್ಹತೆ ಬಗ್ಗೆ ಯಾವುದೇ ಪ್ರಸ್ತಾವ ಮಾಡಿಲ್ಲ. ಹೀಗಾಗಿ ಅವೆರಡೂ ಅತೃಪ್ತ ಶಾಸಕರಿಗೆ ಅನ್ವಯ ವಾಗಲಿದೆ. ಸದನಕ್ಕೆ ಗೈರು ಹಾಜರಾಗುವ ಸಂಬಂಧ ಶಾಸಕರು ಸ್ಪೀಕರ್‌ ಅನುಮತಿ ಪಡೆಯಲೇಬೇಕು. ನಿಯಮಾವಳಿ ನಮ್ಮಲ್ಲಿ ಇದೆ. ವಿಪ್‌ ಅನ್ವಯ ಶಾಸಕರು ಹಾಜರಾಗಲೇಬೇಕು.

ಇಂದು ಏನಾಗಬಹುದು?
-ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತಯಾಚನೆ ನಿರ್ಣಯ
-ವಿಶ್ವಾಸಮತದ ಮೇಲೆ ಚರ್ಚೆ ಆರಂಭ
-ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಸಿಎಂ ಭಾಷಣ, ಬಹುಮತ ಸಾಬೀತಿಗೆ ಮುಂದಾಗಬಹುದು
-ಬಹುಮತ ಸಾಬೀತು ತೀರಾ ಕಷ್ಟ ಎಂದಾಗ ವಿದಾಯ ಭಾಷಣ
-ರಿವರ್ಸ್‌ ಆಪರೇಷನ್‌ ಕಾರ್ಯತಂತ್ರದ ಭಾಗವಾಗಿ ಬಿಜೆಪಿಯ ಕೆಲವು ಶಾಸಕರು ಕುಮಾರಸ್ವಾಮಿ ಪರ ನಿಲ್ಲಬಹುದು

ಸರಕಾರ ಇಲ್ಲವೇ ರಾಷ್ಟ್ರಪತಿ ಆಳ್ವಿಕೆ?
ಮತ್ತೂಂದು ಮೂಲಗಳ ಪ್ರಕಾರ ಒಂದೊಮ್ಮೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಅನಂತರ ಸರಕಾರ ಬಿದ್ದರೆ ಬಿಜೆಪಿ ಸರಕಾರ ರಚನೆಗೆ ಹಕ್ಕು ಮಂಡಿಸಬೇಕಾಗುತ್ತದೆ. ಬಿಜೆಪಿಗೆ ಸರಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಿದರೂ ಸದನದಲ್ಲಿ ಬಹುಮತ ಸಾಬೀತು ಪಡಿಸ ಬೇಕಾಗು ತ್ತದೆ. ಆಗ, ಬಿಜೆಪಿ ಸಂಖ್ಯೆ 107 ಇರ ಲಿದೆ. ಒಂದೊಮ್ಮೆ ಅತೃಪ್ತ ಶಾಸಕರು ಆಗ ಮನಸ್ಸು ಬದಲಾಯಿಸಿ ಕೆಲವೊಂದು ಬೇಡಿಕೆ ಇಟ್ಟು ಮತ್ತೆ ಪಕ್ಷದ ತೆಕ್ಕೆಗೆ ಬಂದರೆ ಬಿಜೆಪಿಗೂ ಬಹುಮತ ಸಾಬೀತು ಕಷ್ಟ ವಾಗಬಹುದು. ಆಗ, ವಿಧಾನ ಸಭೆ ತಾತ್ಕಾಲಿಕವಾಗಿ ಕೆಲವು ದಿನ ಅಮಾನತು, ರಾಷ್ಟ್ರಪತಿ ಆಳ್ವಿಕೆ ಜಾರಿ ಸಾಧ್ಯತೆ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next