Advertisement

ಮತ್ತೆ ಸಿಎಂ ವಾಕ್ಸಮರ : ಕುಮಾರಸ್ವಾಮಿ-ಸಿದ್ದರಾಮಯ್ಯ ಟ್ವೀಟ್ ವಾರ್‌

03:07 AM May 17, 2019 | sudhir |

ಬೆಂಗಳೂರು: ‘ಸಿದ್ದು ಸಿಎಂ’ ವಿವಾದ ಅಂತ್ಯವಾಗುತ್ತಲೇ, ಮುಖ್ಯಮಂತ್ರಿ ಕುಮಾರಸ್ವಾಮಿ ಮುನ್ನೆಲೆಗೆ ತಂದಿದ್ದ ‘ಖರ್ಗೆ ಸಿಎಂ’ ವಾದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ‘ರೇವಣ್ಣ ಸಿಎಂ’ ಪ್ರತಿವಾದ ಮುಂದಿಟ್ಟಿದ್ದಾರೆ.

Advertisement

ಸಿದ್ದು ಬೆಂಬಲಿಗರಿಂದ ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ’ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದನ್ನು ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಒತ್ತಡ ತಂದು ತಣ್ಣಗಾಗಿಸುವಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರು ಯಶಸ್ವಿಯಾಗಿದ್ದರು. ಈ ನಡುವೆಯೇ ಸಿಎಂ ಕುಮಾರಸ್ವಾಮಿ ಅವರೇ, ಕುಂದಗೋಳ-ಚಿಂಚೋಳಿ ಉಪಚುನಾವಣೆ ಪ್ರಚಾರದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಎಂದೋ ಮುಖ್ಯಮಂತ್ರಿಯಾಗಿರಬೇಕಿತ್ತು ಎಂದು ಹೇಳುವ ಮೂಲಕ ‘ಮುಖ್ಯಮಂತ್ರಿ’ ಹೇಳಿಕೆಗೆ ಕಿಚ್ಚು ಹತ್ತಿಸಿದ್ದರು. ಈಗ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ, ರೇವಣ್ಣ ಅವರೂ ಮುಖ್ಯಮಂತ್ರಿಯಾಗಲು ಅರ್ಹರು ಎಂದು ಹೇಳುವ ಮೂಲಕ ಕುಮಾರಸ್ವಾಮಿ ಮತ್ತು ಜೆಡಿಎಸ್‌ಗೆ ತಿರುಗೇಟು ನೀಡಿದ್ದಾರೆ.

ಸಿದ್ದು ಹೇಳಿದ್ದೇನು?

‘ಎಚ್.ಡಿ. ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನ ಇದ್ದಾರೆ. ಅವರಲ್ಲಿ ರೇವಣ್ಣ ಕೂಡ ಒಬ್ಬರು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ ಹೇಳಿದ್ದು

Advertisement

ಅದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ, ನಾಡಿನ ಹಿರಿಯ ರಾಜಕಾರಣಿ ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ ಹೇಳಿಕೆ ಕರ್ನಾಟಕದ ಹಲವು ದಶಕಗಳ ರಾಜಕೀಯ ವಾಸ್ತವತೆಯನ್ನು ಆಧರಿಸಿದ ಮನದಾಳದ ಮಾತು.

ಆಪರೇಷನ್‌ ರೆಸಾರ್ಟ್‌ ಶುರು?

– ಫ‌ಲಿತಾಂಶಕ್ಕೆ ಮುನ್ನ ಮೂರೂ ಪಕ್ಷಗಳ ಶಾಸಕಾಂಗ ಸಭೆ

– ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಸಾಧ್ಯತೆ

ಬೆಂಗಳೂರು: ‘ಆಪರೇಷನ್‌ ಭೀತಿ’ಯಿಂದ ಲೋಕಸಭೆ ಚುನಾವಣೆ ಫ‌ಲಿತಾಂಶಕ್ಕೆ ಎರಡು ದಿನ ಮುಂಚಿತವಾಗಿಯೇ ಮೂರೂ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿವೆ. ಫ‌ಲಿತಾಂಶವು ರಾಜ್ಯ ಸರಕಾರದ ಮೇಲೂ ಪರಿಣಾಮ ಬೀರಬಹುದು ಎಂಬ ಮಾತುಗಳ ಹಿನ್ನೆಲೆಯಲ್ಲಿ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಮೇ 23ಕ್ಕೆ ಫ‌ಲಿತಾಂಶ ಹಿನ್ನೆಲೆಯಲ್ಲಿ ಮೇ 21ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಅದೇ ದಿನ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯೂ ನಿಗದಿಯಾಗುವ ಸಾಧ್ಯತೆಯಿದೆ.

ಇನ್ನು ಅತೃಪ್ತ ಕಾಂಗ್ರೆಸ್‌ ಶಾಸಕರು ಮೇ 21ರಂದು ಸಮಾನ ಮನಸ್ಕ ಶಾಸಕರ ಸಭೆ ನಿಗದಿಪಡಿಸಿದ್ದರು. ಅದಕ್ಕೆ ಹೈಕಮಾಂಡ್‌ ಹಾಗೂ ಕೆಪಿಸಿಸಿ ಅವಕಾಶ ನೀಡದ ಕಾರಣ ಅಧಿಕೃತವಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಅದೇ ದಿನ ಕರೆಯಬೇಕು ಎಂದು ಅತೃಪ್ತ ಶಾಸಕರು ಬೇಡಿಕೆ ಇಟ್ಟಿದ್ದಾರೆ.

ಸರಕಾರದಲ್ಲಿ ಕಾಂಗ್ರೆಸ್‌ ಶಾಸಕರ ಕೆಲಸಗಳು ಆಗುತ್ತಿಲ್ಲ. ಹೀಗಾಗಿ, ಮುಖ್ಯಮಂತ್ರಿಯವರಿಗೆ ಕೆಲವೊಂದು ನಿರ್ದೇಶನ ನೀಡಬೇಕಾಗಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೇ ಅದು ತೀರ್ಮಾನವಾಗಲಿ ಎಂದು ಒತ್ತಾಯಿಸಿದ್ದಾರೆ. ಹೀಗಾಗಿ, ಮೇ 21 ಅಥವಾ 22 ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next