Advertisement

ಇನ್ನಷ್ಟು ಪ್ರಕೃತಿ ವಿಕೋಪ ಪರಿಹಾರ ನಿಧಿ

03:40 AM Sep 08, 2018 | Karthik A |

ಉಡುಪಿ: ಜಿಲ್ಲೆಯಲ್ಲಿ ಮಳೆಯಿಂದಾಗಿ 141 ಕೋ.ರೂ. ನಷ್ಟ ಸಂಭವಿಸಿದೆ. ಆರ್ಥಿಕ ಇಲಾಖೆ ಜತೆ ಚರ್ಚಿಸಿ 75ರಿಂದ 100 ಕೋ.ರೂ. ಅನುದಾನ ಮಂಜೂರಿಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಕೃತಿ ವಿಕೋಪದಿಂದ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 1,232 ಮನೆಗಳು ಹಾನಿಗೀಡಾಗಿವೆ. ರಸ್ತೆ, ಶಾಲೆ, ಕಾಲುಸಂಕಗಳಿಗೆ ಹಾನಿಯಾಗಿದೆ. ತಿಂಗಳ ಹಿಂದೆ 75 ಕೋ.ರೂ. ನಷ್ಟದ ವರದಿಯನ್ನು ಜಿಲ್ಲಾಧಿಕಾರಿ ಸಲ್ಲಿಸಿದ್ದರು. ರಾಜ್ಯ ಸರಕಾರ ಈಗಾಗಲೇ 18 ಕೋಟಿ ರೂ. ಬಿಡುಗಡೆ ಮಾಡಿದೆ. ಜನಪ್ರತಿನಿಧಿಗಳ ಭಾವನೆಗೆ ಸ್ಪಂದಿಸಿ, ಜನತೆಗೂ ವಿಶ್ವಾಸ ಬರುವಂತೆ ಇನ್ನಷ್ಟು ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಲಿದೆ ಎಂದರು.

Advertisement

ಲೋಕೋಪಯೋಗಿ ಇಲಾಖೆ 23 ಕೋ.ರೂ. ನಷ್ಟವನ್ನು, ಗ್ರಾಮೀಣ ಅಭಿವೃದ್ಧಿ ಇಲಾಖೆ 14 ಕೋ.ರೂ. ನಷ್ಟವನ್ನು ತಿಳಿಸಿದೆ. ಮಕ್ಕಳು ನಡೆದಾಡುವ ಕಾಲುಸಂಕ, ಸಂಪರ್ಕವಿಲ್ಲದ ಪ್ರದೇಶಕ್ಕೆ ಆದ್ಯತೆ. ಎನ್‌ಡಿಆರ್‌ಎಫ್ಮಾ ರ್ಗದರ್ಶಿ ಸೂತ್ರ ಬದಿಗಿರಿಸಿ ಬೆಳೆ ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಲಾಗುವುದು. ಶೇ. 75 ಮನೆ ಹಾನಿಯಾದವರಿಗೆ 1 ಲ.ರೂ. ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ ಎಂದರು. ಅನಿಲ ಸಂಪರ್ಕ ಲಭಿಸದ ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಿಬಂದಿ ಕೊರತೆ ನೀಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಉದ್ಯೋಗ ಖಾತ್ರಿಗೆ ತಿದ್ದುಪಡಿ
ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಸೋಶಿಯಲ್‌ ಆಡಿಟ್‌ನಿಂದ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ಇದರ ನಿಯಮ ಸರಳಗೊಳಿಸಲು ಕೇಂದ್ರ ಸರಕಾರದ ಜತೆ ಚರ್ಚಿಸಿ ರಾಜ್ಯ ಮಟ್ಟದ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.

ಬಹುಗ್ರಾಮ ಕುಡಿಯುವ ನೀರು ಯೋಜನೆ
ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ರಾಜ್ಯಾದ್ಯಂತ ಡಿಪಿಆರ್‌ ತಯಾರಿಸಲು ತಿಳಿಸಿದ್ದೇವೆ. ಎಲ್ಲ ಹಳ್ಳಿಗಳಿಗೂ ನದಿಮೂಲದಿಂದ ನೀರು ಪೂರೈಸಬೇಕೆಂಬ ಇರಾದೆ ಇದೆ. ಇದಕ್ಕೆ 60-70,000 ಕೋ.ರೂ. ಅಗತ್ಯ. 4 ವರ್ಷಗಳಲ್ಲಿ ಇದನ್ನು ಹೇಗೆ ಜಾರಿಗೊಳಿಸಬೇಕೆಂದು ಸದ್ಯವೇ ನಿರ್ಧರಿಸಲಿದ್ದೇವೆ. ಉಡುಪಿಗೂ ಇದರ ಲಾಭ ಸಿಗಲಿದೆ ಎಂದರು.

ಡೀಮ್ಡ್ ಅರಣ್ಯ ಸಮಸ್ಯೆಗೆ ಸಭೆ
ಡೀಮ್ಡ್ ಅರಣ್ಯ ಸಮಸ್ಯೆ ಕುರಿತು ಶಾಸಕರು ಗಮನ ಸೆಳೆದಿದ್ದಾರೆ. ಇದರ ಕುರಿತೂ ಬೆಂಗಳೂರಿನಲ್ಲಿ ಸಭೆ ನಡೆಸುತ್ತೇನೆ. ಬಿಪಿಎಲ್‌ ಕಾರ್ಡ್‌ ಹೊಂದಿದ 3,600 ಮನೆಯವರಿಗೆ ಅಕ್ಟೋಬರ್‌ ಒಳಗೆ ವಿದ್ಯುತ್‌ ಸಂಪರ್ಕ ನೀಡಲು ಸೂಚಿಸಲಾಗಿದೆ ಎಂದರು.

Advertisement

ನಿಮ್ಮ ಖುಷಿಗೆ ಏನಾದ್ರೂ ಬರ್ಕೊಳ್ಳಿ!
ಸರಕಾರ ಸಾಮರಸ್ಯದಿಂದ ನಡೆಯುತ್ತಿದೆ. ಕಷ್ಟವೇ ಇಲ್ಲದಿರುವಾಗ ಸುಖಾಂತ್ಯ ಹೇಗೆ? ಸರಕಾರ ಸುರಕ್ಷಿತವಾಗಿದೆ. ಬೆಳಗಾವಿಯಲ್ಲಿ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಟಾಳ್ಕರ್‌ ನಡುವೆ ಏನೂ ತೊಂದರೆ ಆಗಿಲ್ಲ. ನಾನು ಟೆನ್ಶನ್‌ನಿಂದ ಇಲ್ಲ. ಟೆನ್ಶನ್‌ ಇದ್ದಿದ್ದರೆ ಬೆಂಗಳೂರಿನಲ್ಲಿ ರಾಜಕೀಯ ನಿರ್ವಹಣೆ ಮಾಡುತ್ತಿದ್ದೆ. ಇಲ್ಲಿ ಬಂದು ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ನಿಮ್ಮ ವರದಿಗಳೆಲ್ಲ ಅಸಹಜ. ನಿಮ್ಮ ಖುಷಿಗೆ ಏನಾದ್ರೂ ಬರೊRಳ್ಳಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತನಿಖಾ ಹಂತದಲ್ಲಿ ಹೇಳುವಂತಿಲ್ಲ
ಶೀರೂರು ಸ್ವಾಮೀಜಿ ಸಾವಿನ ಕುರಿತು ಎಸ್‌ಪಿ ಏನೂ ಹೇಳುತ್ತಿಲ್ಲ ಎಂದು ಪತ್ರಕರ್ತರು ಗಮನ ಸೆಳೆದಾಗ, ತನಿಖಾ ಹಂತದಲ್ಲಿ ಏನೂ ಹೇಳಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ಇದೆ. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸರು ಬಹಿರಂಗ ಪಡಿಸುವರು ಎಂದರು.

ಕಬ್ಬು ಬೆಳೆಯಲು ಕರೆ
ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಪುನಃ ಆರಂಭಿಸಲು ಬೇಡಿಕೆ ಇದೆ. ವಾರಾಹಿ ಯೋಜನೆಯ ನೀರು ಬರುವಾಗ ಕೃಷಿಕರು ಹೆಚ್ಚು ಕಬ್ಬು ಬೆಳೆಸಿದರೆ ಮಾತ್ರ ಸಕ್ಕರೆ ಕಾರ್ಖಾನೆಯನ್ನು ಪುನಃ ಆರಂಭಿಸಿದರೆ ಪ್ರಯೋಜನವಾದೀತು. ಆದ್ದರಿಂದ ಹೆಚ್ಚು ಕಬ್ಬು ಬೆಳೆಯಿರಿ ಎಂದು ಮುಖ್ಯಮಂತ್ರಿ ಕರೆ ನೀಡಿದರು.

ಭೂಪರಿವರ್ತನೆ ಸಮಸ್ಯೆಗೆ ಸಭೆ
ಭೂಪರಿವರ್ತನೆ ಸಮಸ್ಯೆಗಳನ್ನು ಪರಿಹರಿಸಲು ಸದ್ಯವೇ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲು ಪ್ರಗತಿಪರಿಶೀಲನ ಸಭೆ ನಿರ್ಧರಿಸಿತು.

ಬೂದಿ ಮಳೆಯಾಗಿದ್ದರೆ ಕ್ರಮ
ಯುಪಿಸಿಎಲ್‌ನಿಂದ ಬೂದಿ ಮಳೆಯಾಗಿದ್ದರೆ ತಾಂತ್ರಿಕ ಸಮಿತಿಯ ವರದಿ ಆಧರಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಕರಾವಳಿಯ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿ ಪರಿಸರಕ್ಕೆ ಹಾನಿಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಪಶ್ಚಿಮಘಟ್ಟ ಪ್ರದೇಶದ ಬಗ್ಗೆ ಚರ್ಚೆಯಾಗುತ್ತಿದೆ. ಶಿರಾಡಿ ಘಾಟಿ, ಕೊಡಗು, ಆಗುಂಬೆ ಪರಿಸರದಲ್ಲಿ ಆದ ಬೆಳವಣಿಗೆ ಕುರಿತು ವಿಜ್ಞಾನಿಗಳ ಸಮಿತಿಯ ವರದಿ ಆಧರಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಪರಿಸರವಾದಿಗಳ ಜತೆಗೂ ಚರ್ಚಿಸುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮೀನುಗಾರರಿಗೆ ವಿಶೇಷ ಪ್ಯಾಕೇಜ್‌
ಮೀನುಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸುತ್ತೇವೆ. ಇತ್ತೀಚಿಗೆ ಬೋಟು ಕಳೆದುಕೊಂಡವರಿಗೆ ಪರಿಹಾರ ಕೊಡುವುದಲ್ಲದೆ ಬೋಟು ಖರೀದಿಗೆ ನೆರವು ನೀಡಲಾಗುವುದು. ಮೀನುಗಾರರ ಸಂಘಟನೆಯವರು ಕೊಡಗು ಪ್ರಕೃತಿ ವಿಕೋಪ ಪರಿಹಾರಕ್ಕೂ 25 ಲ.ರೂ. ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next