Advertisement

ಶಾಸಕರ ಖರೀದಿ ಪವಿತ್ರವೇ?: ಎಚ್‌ಡಿಕೆ

06:50 AM May 22, 2018 | |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅಪವಿತ್ರ ಎಂದು ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಟಾಂಗ್‌ ನೀಡಿರುವ ನಿಯೋಜಿತ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ನಮ್ಮ ಮೈತ್ರಿ ಅಪವಿತ್ರವಾದರೆ ನಮ್ಮ ಶಾಸಕರನ್ನು ಖರೀದಿಸಲು ಬಿಜೆಪಿ ಮುಂದಾಗಿದ್ದು ಪವಿತ್ರವೇ ಎಂದು ಪ್ರಶ್ನೆ ಮಾಡಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಕುಮಾರಸ್ವಾಮಿ, ಜೆಡಿಎಸ್‌ ಮೈತ್ರಿ ಕೂಟ ಅಪವಿತ್ರ ಎಂಬುದು ನಿಮ್ಮ ವಾದ. ಹಾಗಾದರೆ ಪವಿತ್ರವಾದದ್ದು ಯಾವುದು? ನಮ್ಮ ಪಕ್ಷಗಳ ಚಿಹ್ನೆಯಿಂದ ಆಯ್ಕೆಯಾದವರನ್ನು ಖರೀದಿಸಲು ಮುಂದಾಗಿದ್ದು ಪವಿತ್ರವಾದ ಕಾರ್ಯವೇ? ಬಹುಮತವಿಲ್ಲದ ಸರ್ಕಾರವನ್ನು ಉಳಿಸಿಕೊಳ್ಳಲು ಬೇರೆ ಪಕ್ಷಗಳ ಶಾಸಕರನ್ನು ಖರೀದಿಸಲು ಹೊಂಚು ಹಾಕಿದ್ದು, ಅವರಿಗೆ 100 ಕೋಟಿ ಆಮಿಷ ಒಡ್ಡಿದ್ದು, ಅವರ ಮೂಲಕ ರಾಜೀನಾಮೆ ಕೊಡಿಸಲು ಪ್ರಯತ್ನಿಸಿದ್ದು ಅಪವಿತ್ರ ಕಾರ್ಯವಲ್ಲವೇ? ಒಬ್ಬೊಬ್ಬ ಶಾಸಕರನ್ನು ಖರೀದಿಸಲು ನೂರು ಕೋಟಿ ಖರ್ಚು ಮಾಡಲು ನಿರ್ಧರಿಸಿದ್ದ ನಿಮ್ಮ ಪಕ್ಷ ಆ ದುಡ್ಡನ್ನು ಎಲ್ಲಿಂದ ಹೊಂದಿಸಿತ್ತು? ಅದು ಸಕ್ರಮ ಹಣವೋ? ಅಕ್ರಮವೋ? ಎಂದು ಕೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸೇರಿದಂತೆ ಯಾರಿಗೂ ಬಹುಮತ ಬಂದಿಲ್ಲ. ಈ ಕಾರಣಕ್ಕಾಗಿಯೇ ಜಾತ್ಯತೀತ ತತ್ವದಡಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಂದಾಗಿದೆ. ಈ ಮೈತ್ರಿಗೆ ಒಂದು ನೆಲೆ ಇದೆ. ಸರ್ವರ ಹಿತ ಕಾಯುವುದು ಮತ್ತು ಎಲ್ಲರನ್ನೂ ಒಳಗೊಂಡಂತೆ ಪ್ರಗತಿಯತ್ತ ಹೆಜ್ಜೆ ಹಾಕುವುದೇ ಈ ನೆಲೆ. ಅದನ್ನು ಅಪವಿತ್ರ ಮೈತ್ರಿ ಎನ್ನುತ್ತಿರುವ ನಿಮ್ಮ ಅಭಿಪ್ರಾಯವೇ ಅಪವಿತ್ರ ಎಂದಿದ್ದಾರೆ.

ನೀವು (ಮೈತ್ರಿಕೂಟ ಪಕ್ಷಗಳು) ಏನನ್ನು ಸಂಭ್ರಮಿಸುತ್ತಿದ್ದೀರಿ ಎಂದು ಅಮಿತ್‌ ಶಾ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಜಾತ್ಯತೀತ ಸರ್ಕಾರವೊಂದನ್ನು ರಚಿಸುತ್ತಿರುವ ಕಾರಣಕ್ಕಾಗಿ ಮತ್ತು ಧರ್ಮದ ಆಧಾರದಲ್ಲಿ ಜನ, ಸಮುದಾಯಗಳನ್ನು ಒಡೆದು ಆಳುವ ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ನಾವು ಸಂಭ್ರಮಿಸುತ್ತಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next