ಬೆಂಗಳೂರು: ಮೀಸಲಾತಿಗೆ ಒತ್ತಾಯಿಸಿ ಹಲವು ಸಮುದಾಯಗಳ ಮಠಾಧಿಪತಿಗಳು ಪಾದಯಾತ್ರೆ ನಡೆಸಿ ಹೋರಾಟ ಆರಂಭಿಸಿದ್ದು, ವಾಸ್ತವವಾಗಿ ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ಸರ್ಕಾರ ನಡೆಸುವವರು ನಿರ್ಧರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿನ ಜೆಡಿಎಸ್ ಕಚೇರಿ “ಜೆ.ಪಿ. ಭವನ’ದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಗೆ ಆಗ್ರಹಿಸಿ ನಾನಾ ಸಮುದಾಯಗಳು ಹೋರಾಟ ಆರಂಭಿಸಿವೆ. ಅದರ ಸಾಧಕ- ಬಾಧಕ ಪರಿಶೀಲಿಸಿ ವೈಜ್ಞಾನಿಕವಾಗಿ ಹಾಗೂ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಯಾವ ರೀತಿ ಈ ವರ್ಗದ ಬೇಡಿಕೆಗಳನ್ನು ಈಡೇರಿಸಲು ಅವಕಾಶಗಳಿವೆ ಎಂಬುದನ್ನು ಕಾನೂನುತಜ್ಞರೊಂದಿಗೆ ಚರ್ಚಿಸಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಮೀಸಲಾತಿಗಾಗಿ ಮಠಾಧಿಪತಿಗಳ ಹೋರಾಟದ ಬಗ್ಗೆ ಹೆಚ್ಚು ಜ್ಞಾನ ಇರುವವರು, ತಿಳಿದವರು ಚರ್ಚೆ ಮಾಡಲಿ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
ಪಕ್ಷದಿಂದ ಕೆಲ ಶಾಸಕರು ದೂರವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, ಯಾರೂ ದೂರ ಇಲ್ಲ. ಕೆಲವರು ಈಗಾಗಲೇ ತುಂಬ ದೂರ ಹೋಗಿಯಾಗಿದೆ. ಆ ವಿಚಾರದಲ್ಲಿ ಪದೇ ಪದೇ ಚರ್ಚಿಸುವುದು ಅನಗತ್ಯ. ಈಗಾಗಲೇ ಹಲವು ಪ್ರಮುಖರು ಹಲವು ಸುತ್ತಿನ ಮಾತುಕತೆ ನಡೆಸಿ ಚರ್ಚಿಸುವ ಕೆಲಸವೂ ಮುಗಿದಿದೆ. ಅದು ನನಗೆ ಸಂಬಂಧಿಸಿದ್ದಲ್ಲ. ನಾನು ಯಾರ ಬಗ್ಗೆಯೂ ಚರ್ಚಿಸಲು ಹೋಗುವುದಿಲ್ಲ. ಕಾರ್ಯಕರ್ತರ ಜೊತೆಗೂಡಿ ಪಕ್ಷ ಸಂಘಟನೆ ಮಾಡುವುದು ಹೇಗೆ ಎಂಬುದು ನನ್ನ ಮುಂದಿರುವ ಸವಾಲು ಎಂದಷ್ಟೇ ಹೇಳಿದರು.
ಇದನ್ನೂ ಓದಿ:ಮೀಸಲಾತಿ ಹೋರಾಟದ ವಿಚಾರವಾಗಿ ಸಿದ್ದರಾಮಯ್ಯ ನಡವಳಿಕೆ ಆಕ್ರೋಶ ತರಿಸುವಂತದ್ದು..: ಈಶ್ವರಪ್ಪ
ಹಾಸನದ ವಿಮಾನನಿಲ್ದಾಣ ಕಾಮಗಾರಿ ತ್ವರಿತವಾಗಿ ಕೈಗೊಳ್ಳುವಂತೆ ಕೋರಿ ಶಾಸಕ ಪ್ರೀತಂ ಗೌಡ ಮುಖ್ಯಮಂತ್ರಿಗಳಿಗೆ ಜ.25ರಂದು ಬರೆದ ಪತ್ರ ಬಹಿರಂಗವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಹಾಸನದ ಶಾಸಕರು ತಮ್ಮಿಂದಾಗಿ ಹಾಸನದ ವಿಮಾನನಿಲ್ದಾಣ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂಬರ್ಥದಲ್ಲಿ ಪತ್ರ ಬಿಡುಗಡೆ ಮಾಡಿದ್ದು, ಅವರಿಗೆ ಅಭಿನಂದಿಸುತ್ತೇನೆ. ಅಭಿವೃದ್ಧಿ ಬಗೆಗಿನ ಅವರ ಕಾಳಜಿಗೆ ಅಭಿನಂದಿಸೋಣ ಎಂದು ತಿಳಿಸಿದರು.
ದೆಹಲಿ ಗಡಿಯಲ್ಲಿ 70 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ರೈತ ಸಂಘಟನೆಗಳೂ ಹೆದ್ದಾರಿ ಬಂದ್‌ಗೆ ಮುಂದಾಗಿವೆ. ರೈತರ ಪ್ರತಿಭಟನೆ ಕುರಿತ ಚರ್ಚೆಗಿಂತಲೂ ಮುಖ್ಯವಾಗಿ ಪ್ರಧಾನಿಯವರು ಪ್ರತಿಭಟನಾಕಾರರನ್ನು ನೇರವಾಗಿ ಭೇಟಿಯಾಗಿ ಮಾತನಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.