Advertisement

ಮರಳು ಸುಲಭವಾಗಿ ಸಿಗಲಿ : ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

03:30 AM Sep 08, 2018 | Team Udayavani |

ಉಡುಪಿ: ಜನಸಾಮಾನ್ಯರಿಗೆ ಅಡಚಣೆ ಇಲ್ಲದ ತ್ವರಿತವಾಗಿ ಮರಳು ಸಿಗುವಂತೆ ಕ್ರಮ ಕೈಗೊಳ್ಳಿ – ಇದು ಶುಕ್ರವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ನೀಡಿರುವ ಸೂಚನೆ. ಸಾಂಪ್ರದಾಯಿಕ ಮರಳುಗಾರಿಕೆಗೆ ಮಾತ್ರ ಅವಕಾಶ ನೀಡಬೇಕು. ಜಿಲ್ಲೆಯಲ್ಲಿ ಮರಳು ದಿಣ್ಣೆಗಳನ್ನು ಗುರುತಿಸುವ ಸಂಬಂಧ ಸುರತ್ಕಲ್‌ ಎನ್‌ಐಟಿಕೆ ತಜ್ಞರ ವರದಿ ಅನುಸರಿಸಿ ಕ್ರಮ ಕೈಗೊಳ್ಳಲಾಗುವುದು. ಮರಳು ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲೇ ಕರಾವಳಿ ಭಾಗದ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದರು.

Advertisement

ಪಡಿತರ ಚೀಟಿ ಸಮಸ್ಯೆ
ಪಡಿತರ ಚೀಟಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹೊರಗುತ್ತಿಗೆ ಸಿಬಂದಿ ಮೂಲಕ ತಿಂಗಳೊಳಗೆ ವಿಲೇವಾರಿಗೊಳಿಸಿ ಕಾರ್ಡ್‌ಗಳನ್ನು ತ್ವರಿತವಾಗಿ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಕುಡಿಯುವ ನೀರು: ಸಭೆ
ಕುಡಿಯುವ ನೀರು ಯೋಜನೆಯ ಹೊಸ ಕಾಮಗಾರಿಗಳಿಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಪರಿಶೀಲಿಸಿ ಸರಕಾರ ಅನುಮೋದನೆ ನೀಡಲಿದೆ. ವಾರಾಹಿ ನೀರನ್ನು ಉಡುಪಿ ನಗರಕ್ಕೆ ಸರಬರಾಜು ಮಾಡುವ ಸಂಬಂಧ ನಗರಸಭೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಇಲಾಖೆ ಜಂಟಿಯಾಗಿ ಪರಿಶೀಲಿಸಬೇಕು. ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದರು.

ಮಹಿಳಾ ಹಾಸ್ಟೆಲ್‌
ಉಡುಪಿ ನಗರದಲ್ಲಿ ಮಹಿಳಾ ಹಾಸ್ಟೆಲ್‌ಗ‌ಳಿಗೆ ಹೆಚ್ಚು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಕ್ತ ಜಾಗ ಗುರುತಿಸಬೇಕು. ಅನುದಾನ ಬಿಡುಗಡೆ ಮಾಡಲಾಗುವುದು. ಈಗಿರುವ ಹಾಸ್ಟೆಲ್‌ಗ‌ಳಲ್ಲಿ ಅರ್ಜಿ ಸಲ್ಲಿಸಿದವರಿಗೆ ಸೀಟು ಲಭ್ಯವಿಲ್ಲದಿದ್ದಲ್ಲಿ ಬಾಡಿಗೆ ಕಟ್ಟಡದಲ್ಲಿ ತಾತ್ಕಾಲಿಕ ಹಾಸ್ಟೆಲ್‌ ಸ್ಥಾಪಿಸಿ ಎಂದು ಕುಮಾರಸ್ವಾಮಿ ಸೂಚಿಸಿದರು.

ಕೊರಗರಿಗೆ ಮನೆ 
ಕೊರಗ ಸಮುದಾಯದವರಿಗೆ ಸರಕಾರ ನೆರವು ನೀಡುತ್ತಿದ್ದರೂ ಅವರು ಮನೆ ನಿರ್ಮಾಣಕ್ಕೆ ಕಷ್ಟ ಪಡುತ್ತಿರುವುದು ಗಮನಕ್ಕೆ ಬಂದಿದೆ. ರಾಜ್ಯ ಸರಕಾರದ ಏಜನ್ಸಿಗಳಿಂದಲೇ ಅವರಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದರು.

Advertisement

ಬಿಪಿಎಲ್‌ ಕಾರ್ಡ್‌ಗೂ ವಿಮೆ
ಎಲ್ಲ ಆರೋಗ್ಯ ವಿಮಾ ಯೋಜನೆಗಳನ್ನು ವಿಲೀನಗೊಳಿಸಿ ಆರೋಗ್ಯ ಕಾರ್ಡ್‌ ಯೋಜನೆ ಜಾರಿಗೆ ತರಲಾಗಿದೆ. ಆದರೂ ಈ ಕಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುವಲ್ಲಿ ಗೊಂದಲಗಳಾಗಿರುವುದು ಸರಕಾರದ ಗಮನಕ್ಕೆ ಬಂದಿರುವುದರಿಂದ ಬಿಪಿಎಲ್‌ ಕಾರ್ಡ್‌ ತೋರಿಸಿದರೂ ಚಿಕಿತ್ಸೆ ಒದಗಿಸುವಂತೆ ಸೂಚಿಸಿದ್ದೇವೆ. ಇದಕ್ಕೆ ಸೂಕ್ತ ಪ್ರಚಾರ ನೀಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಶಾಸಕ ರಘುಪತಿ ಭಟ್‌ ಮರಳು ಸಮಸ್ಯೆಯ ಬಗ್ಗೆ ಗಮನ ಸೆಳೆದು ಪರಿಹಾರಕ್ಕೆ ಆಗ್ರಹಿಸಿದರು. ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಉದ್ಯೋಗ ಖಾತ್ರಿ ಯೋಜನೆಗಳ ನಿಯಮಗಳನ್ನು ಸರಳಗೊಳಿಸಬೇಕು ಎಂದರು. ಅನಿಲ ಭಾಗ್ಯ ಯೋಜನೆಯಡಿ ಸೇರ್ಪಡೆಗೊಂಡ ಕೆಲವರಿಗೆ ಸಿಲಿಂಡರ್‌ – ಸೀಮೆಎಣ್ಣೆ ಎರಡೂ ಸಿಗದೆ ಸಮಸ್ಯೆಯಾಗಿದೆ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಗಮನ ಸೆಳೆದರು.

ಸಚಿವೆ ಡಾ| ಜಯಮಾಲಾ, ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಶಾಸಕರಾದ ಲಾಲಾಜಿ ಮೆಂಡನ್‌, ಸುಕುಮಾರ ಶೆಟ್ಟಿ, ಎಸ್‌.ಎಲ್‌. ಭೋಜೇಗೌಡ, ಬಿ.ಎಂ. ಫಾರೂಕ್‌, ಪ್ರತಾಪ್‌ಚಂದ್ರ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್‌, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next