Advertisement

Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ

09:14 AM Oct 30, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಟಾಕ್‌ವಾರ್‌ ಜೋರಾಗಿದೆ. ಜೆಡಿಎಸ್‌-ಬಿಜೆಪಿ ನಾಯಕರ ನಡುವೆ ಮಾತಿನ ಸಮರ ಬಿರುಸಾಗಿದ್ದು, ಒಂದೆಡೆ ಎರಡು ಬಾರಿ ಸೋತಿರುವ ಸಿಂಪತಿ ಪಡೆಯಲು ಎರಡೂ ಅಭ್ಯರ್ಥಿಗಳ ಕಡೆಯ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಮತ್ತೂಂದೆಡೆ ವಸಲಿಗರು ಯಾರು ಎಂಬ ಚರ್ಚೆ ಪ್ರಾರಂಭವಾಗಿದೆ.ಇನ್ನು ನೀರಾವರಿ ಯೋಜನೆ ಕ್ರೆಡಿಟ್‌ಗಾಗಿ ಮತ್ತೂಮ್ಮೆ ಜೆಡಿಎಸ್‌- ಯೋಗೇಶ್ವರ್‌ ನಡುವೆ ವಾಗ್ವಾದ ಆರಂಭವಾಗಿದೆ.

Advertisement

ವಲಸಿಗ ಕೆಲಸಿಗ ವಾರ್‌
ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ವಲಸಿಗ- ಕೆಲಸಿಗ ಚರ್ಚೆ ಶುರುವಾಗಿದೆ. ಮಂಗಳವಾರ ಮಾಕಳಿ ಗ್ರಾಮದಲ್ಲಿ ಮಾತನಾಡಿದ ಕುಣಿಗಲ್‌ ಶಾಸಕ ಡಾ.ರಂಗನಾಥ್‌, ನೀವು ವಲಸಿಗರಿಗೆ ಮತಹಾಕಬೇಡಿ, ಕೆಲಸಿಗರಿಗೆ ಮತ ಹಾಕಿ. ನೀರಾವರಿ ಕೊಟ್ಟ ಯೋಗೇಶ್ವರ್‌ಗೆ ಮತ ಹಾಕಿ, ಹೊರಗಿನಿಂದ ಬಂದವರನ್ನು ಗೆಲ್ಲಿಸಬೇಡಿ ಎಂದು ನಿಖಿಲ್‌ಗೆ ಟಾಂಗ್‌ ನೀಡಿದರು.

ನಾನು ಮಣ್ಣಲ್ಲಿ ಮಣ್ಣಾಗುವುದು ರಾಮನಗರ ಜಿಲ್ಲೆಯಲಿ
ವಲಸಿಗ ಹೇಳಿಕೆಗೆ ಚನ್ನಪಟ್ಟಣದ ಕನ್ನಿದೊಡ್ಡಿ ಗ್ರಾಮದಲ್ಲಿ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರ ಸ್ವಾಮಿ, ಉತ್ತರ ಪ್ರದೇಶದಲ್ಲಿ ಹುಟ್ಟಿದ ಪ್ರಿಯಾಂಕ ಗಾಂಧಿಯನ್ನು ವೈನಾಡಿಗೆ ಕರೆದುಕೊಂಡು ಬಂದು ನಿಲ್ಲಿಸಿರುವ ಕಾಂಗ್ರೆಸ್ಸಿನವರಿಗೆ ನನ್ನನ್ನು ವಲಸಿಗರು ಎನ್ನುವ ನೈತಿಕತೆ ಇಲ್ಲ. ನನ್ನ ಬದುಕು ಪ್ರಾರಂಭವಾಗಿದ್ದು ರಾಮನಗರ ಜಿಲ್ಲೆಯಲ್ಲಿ, ನಾನು ಮಣ್ಣಲ್ಲಿ ಮಣ್ಣಾಗುವುದು ರಾಮನಗರ ಜಿಲ್ಲೆಯಲ್ಲಿ. ಮೊದಲು ಇವರು ಪ್ರಿಯಾಂಕ ಗಾಂಧಿ ಕರೆತಂದು ನಿಲ್ಲಿಸಿರುವುದಕ್ಕೆ ಉತ್ತರ ನೀಡಲಿ ಎಂದಿದ್ದಾರೆ.

ಸೋಲಿನ ಸಿಂಪತಿಗೆ ಯತ್ನ
ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ ಮಾಡಿರುವ ಪ್ರಮುಖ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಎರಡು ಬಾರಿ ಸೋತಿದ್ದು, ಮತದಾರರಲ್ಲಿ ಸೋಲಿನ ಅನುಕಂಪ ಗಿಟ್ಟಿಸಲು ಎರಡೂ ಕಡೆಯವರು ಕಸರತ್ತು ನಡೆಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಪ್ರಚಾರ ಆರಂಭಿಸಿದ ಯೋಗೇಶ್ವರ್‌, ನಾನು ನೀರಾವರಿ ಮಾಡಿದ್ದೇನೆ. ಎರಡು ಬಾರಿ ಸೋತಿದ್ದೇನೆ. ಕುಮಾರಸ್ವಾಮಿ ಗೆದ್ದು ಎರಡು ಬಾರಿ ಏನುಮಾಡಿದ್ದಾರೆ. ಅವರು ಮಂಡ್ಯಕ್ಕೆ ಹೋಗಿ ಇದೀಗ ಮಗನನ್ನು ತಂದು ನಿಲ್ಲಿಸಿದ್ದಾರೆ. ನನಗೆ ಮತ ನೀಡಿಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಇನ್ನು ನಿಖಿಲ್‌ ಸಹ ತಮ್ಮ ಎರಡು ಬಾರಿ ಸೋಲಿನ ಅನುಕಂಪ ಪಡೆಯುವಲ್ಲಿ ಹಿಂದೆ ಬಿದ್ದಿಲ್ಲ. ಮಂಡ್ಯ, ರಾಮನಗರದಲ್ಲಿ ನನ್ನ ವಿರುದ್ಧ ಕುತಂತ್ರ ರಾಜಕಾರಣ ಮಾಡಿ ಸೋಲಿಸಿದ್ದಾರೆ. ಜನತೆ ದಯವಿಟ್ಟು ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದ್ದಾರೆ.

Advertisement

ಇನ್ನು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಎರಡೂ ಪಕ್ಷದ ಪ್ರಮುಖರು ತಮ್ಮ ಅಭ್ಯರ್ಥಿ ಎರಡು ಬಾರಿ ಸೋತಿದ್ದಾರೆ ಎಂಬುದನ್ನು ಪ್ರಸ್ತಾಪಿಸುತ್ತಾ ಜನರ ಮನಸ್ಸಿನಲ್ಲಿ ಸೋಲಿನ ಸಿಂಪತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ನಮ್ಮ ಸರ್ಕಾರ ಕೆಡವಿದ ಪುಣ್ಯಾತ್ಮ
ಚನ್ನಪಟ್ಟಣದ ಅಮ್ಮಳ್ಳಿದೊಡ್ಡಿಯಲ್ಲಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯದ ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಹಳಿ ಬಳಸಿ ಆನೆತಡೆ ಬ್ಯಾರಿಕೇಡ್‌ ನಿರ್ಮಿಸಲು ನಾನು ಸಿಎಂ ಆಗಿದ್ದಾಗ 100 ಕೋಟಿ ರೂ. ಮೀಸಲಿರಿಸಿದ್ದೆ. ಆದರೆ, ಇಂದು ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಪುಣ್ಯಾತ್ಮ ನನ್ನ ಸರ್ಕಾರ ತೆಗೆದಿದ್ದರಿಂದ ಈ ಕೆಲಸ ಅರ್ಧಕ್ಕೆ ನಿಂತಿತು. ನಿಮ್ಮ ನೋವಿಗೆ ಅವನೇ ಕಾರಣ ಎಂದು ಗ್ರಾಮಸ್ಥರು ಆನೆ ಹಾವಳಿ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸುವ ಮೂಲಕ ಯೋಗೇಶ್ವರ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next