ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಬಯಸಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಸ್ಪರ್ಧಿಸಬಹುದು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಗುರುವಾರ ಹೇಳಿಕೆ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, “ಊಹಾಪೋಹಗಳನ್ನು ಬಿಡಿ, ಮೋದಿ ಏನು ಹೇಳುತ್ತಾರೋ ಗೊತ್ತಿಲ್ಲ. ಒಂದು ವೇಳೆ ಅವರು ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಹೇಳಿದರೆ ಎಲ್ಲಿಂದಾದರೂ ಸ್ಪರ್ಧಿಸಬಹುದು, ನನಗೆ ಯಾವುದೇ ಸಮಸ್ಯೆ ಇಲ್ಲ, ಅದು ಮಂಡ್ಯ ಅಥವಾ ತುಮಕೂರು ಅಥವಾ ಚಿಕ್ಕಬಳ್ಳಾಪುರ ಆಗಿರಲಿ, ಹಲವು ಕ್ಷೇತ್ರಗಳಿಂದ ಸ್ಪರ್ಧಿಸಲು ಅವರನ್ನು ಆಹ್ವಾನಿಸಲಾಗುತ್ತಿದೆ ಎಂದರು.
”ಕುಮಾರಸ್ವಾಮಿ ಅವರು ದೆಹಲಿಗೆ ಬರಬೇಕೇ ಎನ್ನುವುದನ್ನು ಮೋದಿ ಮತ್ತು ಶಾ ನಿರ್ಧರಿಸಬೇಕು. ಆದರೆ, ನನ್ನ ಜ್ಞಾನದ ಪ್ರಕಾರ, ಅಂತಹ ಯಾವುದೇ ಚರ್ಚೆಗಳು ಇಲ್ಲಿಯವರೆಗೆ ನಡೆದಿಲ್ಲ. ಕುಮಾರಸ್ವಾಮಿ ಅವರನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಮಾಡುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ, ಆದರೆ ಅಂತಹ ಯಾವುದೇ ಚರ್ಚೆಗಳು ನನ್ನ ಮುಂದೆ ನಡೆದಿಲ್ಲ” ಎಂದರು.
ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ” ಕಣಕ್ಕಿಳಿಸಲು ಕುಮಾರಸ್ವಾಮಿಅವರಿಗೆ ಇಷ್ಟವಿಲ್ಲ, ಆ ಕುರಿತು ಅವರೇ ನಿರ್ಧರಿಸಬೇಕು. ಪಕ್ಷದ ಮಂಡ್ಯದ ನಾಯಕರು ನಿಖಿಲ್ ಕುಮಾರಸ್ವಾಮಿ ಅಥವಾ ಕುಮಾರಸ್ವಾಮಿ ಸ್ಪರ್ಧಿಸಬೇಕು ಎಂದು ಒಮ್ಮತದ ನಿರ್ಣಯವನ್ನು ಮಾಡಿದ್ದಾರೆ, ಕುಮಾರಸ್ವಾಮಿ ಅವರೇ ಅದಕ್ಕೆ ಒಪ್ಪಿಗೆ ನೀಡಬೇಕಾಗುತ್ತದೆ” ಎಂದರು.
”ಕುಮಾರಸ್ವಾಮಿ ಮತ್ತು ನಿಖಿಲ್ ಇಬ್ಬರೂ ಸ್ಪರ್ಧಿಸಬಾರದು ಎಂದು ಭಾವಿಸುತ್ತೇನೆ, ಏಕೆಂದರೆ ಅವರು ಪಕ್ಷ ಮತ್ತು ಪ್ರಚಾರವನ್ನು ಮುನ್ನಡೆಸಬೇಕಾಗುತ್ತದೆ” ಎಂದರು.