ಹುಬ್ಬಳ್ಳಿ: “ಸಿಎಂ ಕುಮಾರಸ್ವಾಮಿ ಕೇವಲ ಹಾಸನ, ಮಂಡ್ಯ ಹಾಗೂ ತುಮಕೂರಿಗೆ ಸೀಮಿತರಾಗಿರುವುದರಿಂದ ಅವರನ್ನು ಎಚ್‌ಎಂಟಿ ಮುಖ್ಯಮಂತ್ರಿ ಎಂದು ಕರೆಯಬಹುದು. ಮಗನನ್ನು ಗೆಲ್ಲಿಸಲು ಹಾಗೂ ಕುಟುಂಬ ಸದಸ್ಯರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ.
ಅವರೀಗ ಮೂರು ಜಿಲ್ಲೆಗಳಿಗಷ್ಟೇ ಮುಖ್ಯಮಂತ್ರಿ ಎಂಬಂತೆ ವರ್ತಿಸುತ್ತಿದ್ದಾರೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನೂ ಲಿಂಗಾಯತ. 11 ಚುನಾವಣೆಗಳನ್ನು ಎದುರಿಸಿ 9ರಲ್ಲಿ ಜಯ ಗಳಿಸಿದ್ದೇನೆ.
ನನ್ನ ಕ್ಷೇತ್ರದಲ್ಲಿ ಲಿಂಗಾಯತರು ಕೇವಲ 8000ದಷ್ಟಿದ್ದಾರೆ. ಜಾತಿಯನ್ನಾಧರಿಸಿ ಮತ ಕೇಳಿದ್ದರೆ ನಾನು ಒಂದು ಬಾರಿಯೂ ಗೆಲ್ಲುತ್ತಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಲಿಂಗಾಯತರೆಲ್ಲರೂ ನನಗೆ ಮತ ನೀಡಿದರೆ ಗೆಲುವು ಖಚಿತ ಎನ್ನುತ್ತಿರುವುದು ಜಾತ್ಯತೀತ ಎಂದು ಹೇಳಿಕೊಂಡು ಬಂದ ಪಕ್ಷದ ದುಸ್ಥಿತಿ ಬಿಂಬಿಸುತ್ತದೆ” ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮ ಬಗ್ಗೆ ಕಾಂಗ್ರೆಸ್‌ನಲ್ಲೇ ಸ್ಪಷ್ಟತೆಯಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಯತ್ನಿಸಿದ್ದು ದೊಡ್ಡ ಪ್ರಮಾದ ಎಂಬ ಡಿ.ಕೆ .ಶಿವಕುಮಾರ್ ಹೇಳಿಕೆಯನ್ನು ಎಂ.ಬಿ.ಪಾಟೀಲ ಖಂಡಿಸುತ್ತಾರೆ.
ಪಕ್ಷಕ್ಕೂ ಲಿಂಗಾಯತ ಧರ್ಮ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳುತ್ತಾರೆ. ಈ ಕುರಿತು ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಲಿ ಎಂದರು.