ಚನ್ನಪಟ್ಟಣ: ‘ಮುಸ್ಲಿಮರಿಗೆ ಮತದಾನದ ಅಧಿಕಾರವನ್ನು ನಿರಾಕರಿಸುವ ಹೇಳಿಕೆ ನೀಡಿದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿರುವ ರಾಜ್ಯ ಸರಕಾರದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ”ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅರಾಜಕತೆ ಉಂಟಾಗಲಿದೆ” ಎಂದು ಕಿಡಿ ಕಾರಿದ್ದಾರೆ.
ಸ್ವಾಮೀಜಿ ವಿರುದ್ಧ ಆಡಳಿತದ ತ್ವರಿತ ಕ್ರಮವನ್ನು ಪ್ರಶ್ನಿಸಿದ ಎಚ್ ಡಿಕೆ ‘ನನ್ನ ವಿರುದ್ಧ ಜನಾಂಗೀಯ ಹೇಳಿಕೆಗಳನ್ನು ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ, ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಕಿಡಿ ಕಾರಿದ್ದಾರೆ.
ಚಂದ್ರಶೇಖರ ಸ್ವಾಮೀಜಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿ, ಒಕ್ಕಲಿಗ ಸಮಾಜ ತಿರುಗಿ ಬೀಳಲಿದೆ ಎಂದು ಶುಕ್ರವಾರ ಎಚ್ಚರಿಕೆ ನೀಡಿದ್ದರು.
ಎಫ್ಐಆರ್ ದಾಖಲು
ಚಾಮರಾಜಪೇಟೆ ವಾಲ್ಮೀಕಿನಗರ ನಿವಾಸಿ ಸೈಯದ್ ಅಬ್ಟಾಸ್ ಎಂಬವರು ನೀಡಿದ ದೂರಿನ ಮೇರೆಗೆ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ)ರ ಅಡಿ ಎಫ್ಐಆರ್ ದಾಖಲಾಗಿದೆ.
ಸೈಯದ್ ಅಬ್ಟಾಸ್ ನೀಡಿದ ದೂರಿನ ಅನ್ವಯ, ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು ಎಂದು ಶ್ರೀಗಳು ಹೇಳುವ ಮೂಲಕ ಜಾತಿ-ಜಾತಿಗಳ ನಡುವೆ ಮತೀಯ ದ್ವೇಷ, ಹುಟ್ಟುವಂತೆ ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.