ಬೆಂಗಳೂರು:ರಾಜ್ಯದಲ್ಲಿ ರೈತಾಪಿ ಸಮುದಾಯದ ಸಾಲದ ಸಂಕಷ್ಟಕ್ಕೆ ಸಿಲುಕಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದ ಹಲವಾರು ಭಾಗಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು, ಅನ್ನದಾತರು ಸಾಲಕ್ಕೆ ಹೆದರಿ ಸಾವಿಗೆ ಶರಣಾಗುತ್ತಿದ್ದಾರೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಾಲ ಮನ್ನಾ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರೆ 2018 ಕ್ಕೆ ನಮ್ಮ ಸರ್ಕಾರ ಬಂದರೆ ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡಲಾಗುವುದು. ರೈತರು ದೃತಿಗೆಡಬಾರದು. ನಾನು ನಿಮ್ಮೊಂದಿಗಿದ್ದೇನೆ ಎಂದು ರೈತರಿಗೆ ಭರವಸೆ ನೀಡಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹೊಸಬಿಜ್ಜನಹಳ್ಳಿಯ ಒಂದೇ ಕುಟುಂಬದ ಸಿದ್ದಪ್ಪ, ಚಿಕ್ಕತಾಯಮ್ಮ ದಂಪತಿ ಹಾಗೂ ಮಗಳು ಉಮಾದೇವಿ ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಬರಗಾಲದಿಂದ ಬಳಲುತ್ತಿರುವ ರೈತರು ನೈತಿಕ ಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಹೇಳಿದರು.
ವಿಶ್ರಾಂತಿ
ಈ ಮಧ್ಯೆ, ಕೆಮ್ಮು ಮತ್ತು ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರು ಕಡ್ಡಾಯ ವಿಶ್ರಾಂತಿಗೆ ಸಲಹೆ ನೀಡಿರುವುದರಿಂದ ಸೋಮವಾರದವರೆಗೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ, ವಿಶ್ರಾಂತಿ ನಡುವೆಯೇ ಮಾರ್ಚ್ 15 ರಿಂದ ಆರಂಭವಾಗಲಿರುವ ರಾಜ್ಯ ಬಜೆಟ್ ಅಧಿವೇಶನಕ್ಕೆ ಸಿದ್ಧತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.