ಗಂಗಾವತಿ: ದೆಹಲಿ ಸುಲ್ತಾನರಿಗೆ ಸೆಡ್ಡು ಹೊಡೆದು ಸ್ವಾವಲಂಬಿ ಕನ್ನಡ ಸಾಮ್ರಾಜ್ಯ ನಿರ್ಮಿಸಿ ಆಳ್ವಿಕೆ ನಡೆಸಿದ್ದ ಗಂಡುಗಲಿ ಕುಮಾರರಾಮ ನ ವೀರಗಲ್ಲು ಕೊಪ್ಪಳ ತಾಲೂಕಿನ ಪ್ರಸಿದ್ಧ ಚಾರಿತ್ರಿಕ ಸ್ಥಳ ಕುಮ್ಮಟದುರ್ಗದಲ್ಲಿ ಪತ್ತೆಯಾಗಿದೆ. ಕೋಟೆಯ ಎರಡನೇಯ ಪ್ರವೇಶ ದ್ವಾರದ ಬಳಿ ರಸ್ತೆ ನಿರ್ಮಾಣ ಸಮಯದಲ್ಲಿ ಭೂಮಿಯಲ್ಲಿ ಹುದುಗಿದ್ದ ಈ ಶಿಲ್ಪ ಬಯಲಿಗೆ ಬಂದಿದೆ.
ಶಿಲ್ಪವನ್ನು ಪರಿಶೀಲಿಸಿದ ಪ್ರಾಗೈತಿಹಾಸಿಕ ಸಂಶೋಧಕ ಡಾ. ಶರಣ ಬಸಪ್ಪ ಕೋಲ್ಕಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಗಂಡುಗಲಿ ಕುಮಾರರಾಮ ರಾಮನ ವೀರಗಲ್ಲು ಕುಮ್ಮಟದ ಪತನಾನಂತರ ಅಂದರೆ 15 ನೇ ಶತಮಾನದಲ್ಲಿ ನಿರ್ಮಿಸಿದ ಶಿಲ್ಪವಾಗಿದೆ. ಅಶ್ವಾರೋಹಿ ವೀರನು ಖಡ್ಗವನ್ನು ಮೇಲಕ್ಕೆ ಎತ್ತಿ ಹಿಡಿದಿದ್ದು ಕುದುರೆಯ ಹಿಂಬದಿ ಯಲ್ಲಿ ಸೇವಕನು ಛತ್ರವನ್ನು ಹಿಡಿದಿದ್ದಾನೆ. ಶಿಲ್ಪದ ಶೈಲಿ ಹಾಗೂ ಅಶ್ವಾರೋಹಿಯ ಭಂಗಿ ಹಾಗೂ ಸ್ಥಳದ ಆಧಾರದ ಮೇಲೆ ಇದು ಕುಮಾರರಾಮನ ಶಿಲ್ಪವಾಗಿರುವ ಸಾಧ್ಯತೆ ಇದೆ ಎಂದು ಡಾ. ಕೋಲ್ಕಾರ ಅಭಿಪ್ರಾಯ ಪಟ್ಟಿದ್ದಾರೆ.