Advertisement

ಅಫಜಲಪುರದಲ್ಲಿ ಕುಮಾರಪರ್ವ

11:43 AM Feb 10, 2018 | |

ಕಲಬುರಗಿ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಅಫಜಲಪುರ ಪಟ್ಟಣದಲ್ಲಿ ಫೆ. 27ರಂದು ಕುಮಾರಪರ್ವ ಕಾರ್ಯಕ್ರಮದ ಅಡಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆಗಮಿಸುವರು. ಅಂದು ನೂರಾರು ಜನ ಬಿಜೆಪಿ, ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಲಿದ್ದಾರೆ ಎಂದು ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯ ಹಾಗೂ ಹಿರಿಯ ಮುಖಂಡ ಕೇದಾರಲಿಂಗಯ್ಯ ಹಿರೇಮಠ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 27ರ ಕಾರ್ಯಕ್ರಮಕ್ಕೆ 25ಸಾವಿರಕ್ಕೂ ಅಧಿಕ ಜನ ಆಗಮಿಸಲಿದ್ದು, ಪಕ್ಷದ ಯುವ ಮುಖಂಡ ಶಿವಕುಮಾರ ನಾಟೀಕಾರ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಅಫಜಲಪುರ ವಿಧಾನಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಘೋಷಣೆಯೂ ಆಗಲಿದೆ ಎಂದು ತಿಳಿಸಿದರು.

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ, ಜೇವರ್ಗಿಗೆ ತಮ್ಮ(ಕೇದಾರಲಿಂಗಯ್ಯ), ಆಳಂದ ಸೂರ್ಯಕಾಂತ ಕೋರಳ್ಳಿ, ಕಲಬುರಗಿ ಉತ್ತರ ನಾಸೀರ್‌ ಹುಸೇನ್‌, ಚಿಂಚೋಳಿ ಸುಶೀಲಾಬಾಯಿ ಕೊರವಿ ಅವರ ಹೆಸರು ಬಹುತೇಕ ಈಗಾಗಲೇ ಘೋಷಣೆ ಆದಂತಾಗಿದೆ. ಇನ್ನುಳಿದಂತೆ ಅಫಜಲಪುರ, ಕಲಬುರಗಿ ದಕ್ಷಿಣ, ಸೇಡಂಗಳಲ್ಲಿ ಘೋಷಣೆ ಆಗಿಲ್ಲ. ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದಿಂದ ಮಲ್ಲಿಕಾರ್ಜುನ ಕುಸ್ತಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಚಿತ್ತಾಪುರ ಮತ್ತು ಕಲಬುರಗಿ ಗ್ರಾಮೀಣ ಎರಡನ್ನು ಬಿಎಸ್‌ಪಿಯವರು ಕೇಳಿದ್ದಾರೆ.
 
ನಾವು ಕಲಬುರಗಿ ಗ್ರಾಮೀಣ ಬಿಟ್ಟು ಕೊಡುವುದಿಲ್ಲ ಎಂದು ತಿಳಿಸಿದರು. ಅಫಜಲಪುರ ಕ್ಷೇತ್ರದಲ್ಲಿ ಗೋವಿಂದ ಭಟ್‌ ಅವರಿಗೆ ಟಿಕೆಟ್‌ ಸಿಗುವುದರ ಕುರಿತು ಗಾಳಿ ಸುದ್ದಿ ಹರಡಿತ್ತಷ್ಟೆ.. ಈ ಹಿನ್ನೆಲೆಯಲ್ಲಿ ಫೆ. 27ರಂದು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೇ ಘೋಷಣೆ ಮಾಡಲಿದ್ದಾರೆ. ಭಟ್‌ ಅವರಿಗೆ ಸಿಗುವುದು ಕಷ್ಟ. ಕಳೆದ ಬಾರಿ ಕೋಲಿ ಸಮಾಜದ ಧೀಮಂತ ನಾಯಕ ದಿ| ವಿಠ್ಠಲ ಹೇರೂರು ಅವರಿಗೆ ನೀಡಲಾಗಿತ್ತು. ಅವರು ನಮ್ಮ ಪಕ್ಷದ ತಂತ್ರ ಹಾಗೂ ಕುಮಾರಸ್ವಾಮಿ ಅವರ ಪ್ರಚಾರದ ದಿನಾಂಕ ಮತ್ತು ಸಮಯ ಹೊಂದಾಣಿಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಸೋಲು ಕಾಣಬೇಕಾಯಿತು. ಇಲ್ಲದೆ ಹೋಗಿದ್ದರೆ ಹೇರೂರು ಖಂಡಿತ ಗೆಲುವು ಸಾಧಿಸುತ್ತಿದ್ದರು. ಆದರೆ, ಈ ಬಾರಿ ಹಾಗೆ ಆಗುವುದಿಲ್ಲ ಎನ್ನುವ ಭರವಸೆಯನ್ನು ಪಕ್ಷದ ಹಿರಿಯರು ನೀಡಿದ್ದಾರೆ ಎಂದು ತಿಳಿಸಿದರು.

 ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜೇವರ್ಗಿ ಪಟ್ಟಣದಲ್ಲಿ ಪ್ರಮುಖ ರಸ್ತೆ ಮಧ್ಯೆ ಅಲಂಕಾರಿಕ ಗಿಡ ನೆಡಲಾಗುತ್ತಿದೆ.ಈ ಹಿಂದೆ ಮುಖ್ಯಮಂತ್ರಿ ಕಾರ್ಯಕ್ರಮಕ್ಕಾಗಿ ಯಡ್ರಾಮಿಯಲ್ಲಿ ಸಾವಿರಾರು ರೂ. ವೆಚ್ಚ ಮಾಡಿ ಹಚ್ಚಿದ ಇಂತಹದೇ ಅಲಂಕಾರಿಕ ಗಿಡಗಳು ಒಣಗಿವೆ. ಆದರೂ ಈಗ ಅಂತಹದೇ ಸಾಹಸವನ್ನು ಶಾಸಕ ಅಜಯಸಿಂಗ್‌ ಮಾಡುತ್ತಿದ್ದಾರೆ. ಇದು ನಿಜಕ್ಕೂ ತುಗಲಕ್‌ ದರ್ಬಾರ್‌ ಎಂದು ಟೀಕಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಸ್ತಿ, ಶಿವಕುಮಾರ ನಾಟೀಕಾರ, ಮಾಶ್ಯಾಳದ ಶರಣಗೌಡ ಪಾಟೀಲ, ಜಮೀಲಗೌಡ ಅಫಜಲಪುರ, ರೇವಣಸಿದ್ದಯ್ಯ ಹಿರೇಮಠ, ಮಹಿಬೂಬ್‌ ಇನಾಂದಾರ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next