Advertisement

ಕುಮಾರಪರ್ವ ಆರಂಭ; ಮೊದಲ ಬಾರಿ ವೇದಿಕೆ ಹತ್ತಿದ ಚೆನ್ನಮ್ಮ

06:10 AM Nov 08, 2017 | Team Udayavani |

ಮೈಸೂರು: ಬಿಜೆಪಿಯಾಯ್ತು ಇದೀಗ ಜೆಡಿಎಸ್‌ನ ಕುಮಾರಪರ್ವ-2018; ಹೊಸ ಮನ್ವಂತರದ ಶುಭಾರಂಭ ಯಾತ್ರೆ ಆರಂಭವಾಗಿದೆ.

Advertisement

ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಇಲ್ಲಿನ ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರ ಕೊಪ್ಪಲಿನಲ್ಲಿ ತಮ್ಮ ಯಾತ್ರೆ ಹಾಗೂ ಸಮಾವೇಶಕ್ಕೆ ಚಾವಮೆ ನೀಡಿದರು. ಈ ಬಳಿಕ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತಲಾ ಐದು ವರ್ಷಗಳ ಕಾಲ ಆಡಳಿತಕ್ಕೆ ಅವಕಾಶ ಕೊಟ್ಟಿದ್ದೀರಿ. 2018ರ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿ, ಸರ್ಕಾರ ರಚಿಸಲು ಅವಕಾಶ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.

ಜನರಿಂದ ಆಯ್ಕೆಯಾಗದೇ ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದ ನನ್ನ ಆ 20 ತಿಂಗಳ ಅವಧಿ ಸಿನಿಮಾವೊಂದರ ಟ್ರೇಲರ್‌ ಇದ್ದಂತೆ. ಆಗ ರಾಜ್ಯಕ್ಕೆ ನನ್ನಿಂದ ಕಿಂಚಿತ್ತು ಸೇವೆ ಆಗಿದೆ ಎಂಬ ಭಾವನೆ ನಿಮ್ಮಲ್ಲಿದ್ದರೆ ಒಮ್ಮೆ ಅವಕಾಶ ಕೊಡಿ. ನನ್ನ ಕನಸಿನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ನನ್ನಿಂದ ಆಗಿಲ್ಲ. ಪ್ರಧಾನಿ ಮೋದಿ ಅವರಂತೆ ನಾನು ಐದು ವರ್ಷ ಕೇಳಲ್ಲ. ಆದರೆ ಕೇವಲ 2 ವರ್ಷ ಮಾತ್ರ ಕೊಡಿ ಸಾಕು. ನನ್ನ ಬದುಕನ್ನೇ ನಿಮಗೆ ಮೀಸಲಿಟ್ಟಿದ್ದೇನೆ. ನಾಡಿನ ಜನರ ಬದುಕು ಹಸನುಗೊಳಿಸುವ ಸರ್ಕಾರ ರಚನೆಗೆ ಆಶೀರ್ವಾದ ಮಾಡಿ ಎಂದು ಕೋರಿದರು.

ಆಗ ಬಿಜೆಪಿ ಜತೆ ಕೈಜೋಡಿಸಿದ್ದು ತಂದೆಯವರಿಗೆ ಸಮಾಧಾನ ತಂದಿರಲಿಲ್ಲ. ನನ್ನ ಮಗ ದಾರಿ ತಪ್ಪಿದ ಎಂಬ ನೋವು ಅವರಿಗಿದೆ. ಅವರಿಗೆ ನೋವು ಕೊಟ್ಟು, ಆರೋಗ್ಯ ಹಾಳು ಮಾಡಿ ಮುಖ್ಯಮಂತ್ರಿಯಾಗಿದ್ದೆ. ಈಗ ಜನರ ಆಶೀರ್ವಾದದಿಂದಲೇ ನಾನು ಮುಖ್ಯಮಂತ್ರಿಯಾಗಬೇಕು ಎಂಬುದು ದೇವೇಗೌಡರ ಮನಸ್ಸಿನಲ್ಲಿ ಇದೆ. ಅದಕ್ಕಾಗಿಯೇ ಈ ವಯಸ್ಸಲ್ಲೂ ಪಕ್ಷ ಸಂಘಟನೆಗಾಗಿ ಅವರು ಹೋರಾಟ ಮಾಡುತ್ತಿದ್ದಾರೆ ಎಂದರು.

Advertisement

ಕೊಟ್ಟಮಾತು ತಪ್ಪಿಲ್ಲ: ನಾನು ಎಂದೂ ಕೊಟ್ಟ ಮಾತಿಗೆ ತಪ್ಪಿದವನಲ್ಲ. ನನ್ನ 20 ತಿಂಗಳ ಅವಧಿ ನಂತರ ಮಾತುಕತೆಯಂತೆಯೇ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದೆ. ಆದರೆ ಅನಂತ್‌ಕುಮಾರ್‌ ಸೇರಿದಂತೆ ಬಿಜೆಪಿ ನಾಯಕರೇ ಷಡ್ಯಂತ್ರ ಮಾಡಿ ಏಳೇ ದಿನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡುವಂತೆ ಮಾಡಿದರು. ಆ ಸತ್ಯವನ್ನು ಕೆಜೆಪಿ ಕಟ್ಟಿದಾಗ ಸಾರ್ವಜನಿಕ ಸಭೆಗಳಲ್ಲಿ ಯಡಿಯೂರಪ್ಪ ಅವರೇ ಹೇಳಿದ್ದಾರೆ ಎಂದರು. ಇನ್ನು ಸಿಎಂ ಸಿದ್ದರಾಮಯ್ಯ ಅವರಿಂದ ಕುರುಬರಿಗೆ ರಕ್ಷಣೆ ಸಿಗುತ್ತಿಲ್ಲ ಎಂದೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಚೆನ್ನಮ್ಮ ದೇವೇಗೌಡ, ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಂಸದ ಎಚ್‌.ವಿಶ್ವನಾಥ್‌, ಸಂಸದ ಸಿ.ಎಸ್‌.ಪುಟ್ಟರಾಜು, ಶಾಸಕರಾದ ಸಾ.ರಾ.ಮಹೇಶ್‌, ಬಂಡೆಪ್ಪ ಕಾಶೆಂಪುರ, ಕೋನರೆಡ್ಡಿ, ನಾರಾಯಣ ಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಮೊದಲ ಬಾರಿಗೆ ವೇದಿಕೆ ಹಂಚಿಕೊಂಡ ಚೆನ್ನಮ್ಮ ದೇವೇಗೌಡ
ವಿಶೇಷವೆಂದರೆ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ವೇದಿಕೆ ಹತ್ತಿದರು. ದೇವೇಗೌಡರ ಜತೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ಹೊರತುಪಡಿಸಿದರೆ ರಾಜಕೀಯ ಸಭೆ, ಸಮಾರಂಭಗಳಲ್ಲಿ ಈವರೆಗೆ ಕಾಣಿಸಿಕೊಳ್ಳದೆ ಇದ್ದ ಚೆನ್ನಮ್ಮ ದೇವೇಗೌಡ ಅವರು ಈ ಬಾರಿ ಮಾತ್ರ ವೇದಿಕೆಯಲ್ಲಿ ಕಾಣಿಸಿಕೊಂಡರು. ಇದಕ್ಕೂ ಮುನ್ನ ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕರ್ನಾಟಕ ವಿಕಾಸ ವಾಹಿನಿಗೆ ಚಾಲನೆ ನೀಡಿದ ಸಂದರ್ಭ, ಉತ್ತನಹಳ್ಳಿಯ ಶ್ರೀ ಜಾÌಲಾಮುಖೀ ತ್ರಿಪುರ ಸುಂದರಿದೇವಿ ಅಮ್ಮನವರ ದರ್ಶನ ಹಾಗೂ ಹಿನಕಲ್‌ನ ಶ್ರೀ ನನ್ನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವಾಗಲು ಚೆನ್ನಮ್ಮ ಅವರು ದೇವೇಗೌಡರ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next